ತಿಪಟೂರು: ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ಷಡಕ್ಷರಿ 17 ಸಾವಿರಕ್ಕೂ ಅಧಿಕ ಅಂತರದಿಂದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ಜಯಗಳಿಸಿ ಮೂರನೇ ಬಾರಿಗೆ ಶಾಸಕರಾಗಿ ದಾಖಲೆ ಬರೆದರು.
ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ 1,84,278 ಮತದಾರರಿದ್ದು, ಶೇ.83.56ರಷ್ಟು ದಾಖಲೆಯ ಮತದಾನವಾಗಿತ್ತು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕಳೆದ ಚುನಾವಣೆಯಲ್ಲಿ 25,563 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ವಿರುದ್ಧ ಗೆಲುವು ಸಾಧಿಸಿದ್ದರು.
ಕ್ಷೇತ್ರದಲ್ಲಿ ಬಿಜೆಪಿ ನಾಲ್ಕು ರ‍್ಯಾಲಿ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದರೂ ಕೊಬ್ಬರಿಗೆ ಪ್ರೋತ್ಸಾಹ ಬೆಲೆ, ಬೆಂಬಲ ಬೆಲೆ ಏರಿಕೆ ಬಗ್ಗೆ ಕಿಂಚಿತ್ತೂ ಮಾತನಾಡಿರಲಿಲ್ಲ. ತಾಲ್ಲೂಕಿನ ರೈತರು ಕೊಬ್ಬರಿ ಬೆಲೆ ಏರಿಕೆಗಾಗಿ 35 ದಿನ ಪ್ರತಿಭಟನೆ ನಡೆಸಿದರೂ ಜಿಲ್ಲೆಯ ಇಬ್ಬರು ಸಚಿವರು (ಬಿ.ಸಿ.ನಾಗೇಶ್, ಜೆ.ಸಿ.ಮಾಧುಸ್ವಾಮಿ) ಪ್ರತಿಭಟನಾ ಸ್ಥಳಕ್ಕೆ ಬರದೆ ರೈತರ ಕೆಂಗಣ್ಣಿಗೆ ಗುರಿಯಾಗಿದ್ದರು.
ಬಿ.ಸಿ.ನಾಗೇಶ್ ಸಚಿವರಾದ ನಂತರ ಕ್ಷೇತ್ರದ ಅಭಿವೃದ್ಧಿಯತ್ತ ಹೆಚ್ಚು ಗಮನಹರಿಸಲಿಲ್ಲ. ರಾಜ್ಯದಲ್ಲಿ ಹಿಜಾಬ್, ಪುಠ್ಯಪುಸ್ತಕ ವಿಚಾರವಾಗಿ ಶುರುವಾದ ಆಕ್ರೋಶವು ಈ ಬಾರಿಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗಿದೆ. ತಾಲ್ಲೂಕಿನ ವೀರಶೈವ ಲಿಂಗಾಯತ ಸಮಾಜ ನೀಲಕಂಠಸ್ವಾಮಿ ವೃತ್ತದಲ್ಲಿ ಬಸವೇಶ್ವರರ ಪುತ್ಥಳಿ ನಿರ್ಮಾಣ ಮಾಡಲು ಮನವಿ ನೀಡಿದಾಗ ಸರಿಯಾಗಿ ಸ್ಪಂದಿಸಿಲ್ಲ ಎನ್ನುವ ಸಮುದಾಯದ ಆರೋಪ ಹೊತ್ತಿದ್ದರು. ಇದನ್ನು ವಿರೋಧ ಪಕ್ಷವು ಪರಿಣಾಮಕಾರಿಯಾಗಿ ಬಳಸಿಕೊಂಡಿತು. ತಿಪಟೂರು ನಗರ ಪ್ರಾಧಿಕಾರದ (ಟೂಡಾ) ಅಧ್ಯಕ್ಷರನ್ನು ಆಯ್ಕೆ ಮಾಡದಿರುವುದು ಸಹ ಈ ಬಾರಿಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.