ADVERTISEMENT

ಕನ್ನಡಕ್ಕೆ ಜಾಗತೀಕರಣದ ಶನಿ ವಕ್ಕರಿಸಿದೆ: ಶಿವಪ್ರಕಾಶ್

ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ; ಎರಡು ದಿನ ನುಡಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 7:44 IST
Last Updated 30 ಡಿಸೆಂಬರ್ 2023, 7:44 IST
ತುಮಕೂರಿನ ಗಾಜಿನಮನೆಯಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವಮಾನವ ದಿನಾಚರಣೆ ಅಂಗವಾಗಿ ಕುವೆಂಪು ಭಾವಚಿತ್ರಕ್ಕೆ ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ, ಸಮ್ಮೇಳನ ಅಧ್ಯಕ್ಷ ಎಚ್.ಎಸ್.ಶಿವಪ್ರಕಾಶ್ ಪುಷ್ಪನಮನ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷ ಎಂ.ವಿ.ನಾಗರಾಜರಾವ್, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸ್ವಾಮಿ ಜಪಾನಂದಜಿ ಇತರರು ಭಾಗವಹಿಸಿದ್ದರು
ತುಮಕೂರಿನ ಗಾಜಿನಮನೆಯಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವಮಾನವ ದಿನಾಚರಣೆ ಅಂಗವಾಗಿ ಕುವೆಂಪು ಭಾವಚಿತ್ರಕ್ಕೆ ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ, ಸಮ್ಮೇಳನ ಅಧ್ಯಕ್ಷ ಎಚ್.ಎಸ್.ಶಿವಪ್ರಕಾಶ್ ಪುಷ್ಪನಮನ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷ ಎಂ.ವಿ.ನಾಗರಾಜರಾವ್, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸ್ವಾಮಿ ಜಪಾನಂದಜಿ ಇತರರು ಭಾಗವಹಿಸಿದ್ದರು   

ತುಮಕೂರು: ಕನ್ನಡ ಭಾಷೆ, ಸಾಹಿತ್ಯಕ್ಕೆ ಗೋಳೀಕರಣದ (ಜಾಗತೀಕರಣ) ಶನಿ ವಕ್ಕರಿಸಿದೆ. ಸರ್ವಾಧಿಕಾರಿ ಪ್ರಭುತ್ವವನ್ನು ಪೋಷಿಸುತ್ತಲೇ ಕನ್ನಡವನ್ನು ನಾಶ ಮಾಡಲು ಹೊರಟಿದೆ ಎಂದು ಕವಿ, ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಆತಂಕ ವ್ಯಕ್ತಪಡಿಸಿದರು.

ನಗರದ ಗಾಜಿನಮನೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು. ಜಾಗತೀಕರಣದಿಂದ ಕನ್ನಡ ನಾಡು, ನುಡಿಗೆ ಬಂದಿರುವ ಆಪತ್ತುಗಳನ್ನು ‘ಗೋಳೀಕರಣ’ ಎಂಬ ಪದ ಬಳಕೆ ಮಾಡುವ ಮೂಲಕ ಕನ್ನಡದ ಮನಸ್ಸುಗಳ ಎದುರು ತೆರೆದಿಟ್ಟರು.

ಗೋಳೀಕರಣದ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆ ಕಲಿಕೆ ಅನಿವಾರ್ಯ. ಆದರೆ ವ್ಯವಹಾರ, ಸಂಸ್ಕೃತಿ, ಅಭಿವ್ಯಕ್ತಿಯ ಸಮಯದಲ್ಲಿ ಕನ್ನಡ ಬಳಸುವ ಮೂಲಕ ಭಾಷೆ ಉಳಿಸಿ, ಬೆಳೆಸಬೇಕಾಗಿದೆ. ವಿಶ್ವದ ಎಲ್ಲ ಸ್ಥಳೀಯ ಭಾಷೆಗಳಿಗೆ ಗೋಳೀಕರಣ ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ. ಹಿಂದೆ ಗತದ ಬಂಧನಗಳಿಂದ ಜಗತ್ತಿನ ವಸಾಹತುಗಳ ಜನತೆಯನ್ನು ಬಿಡುಗಡೆ ಮಾಡಲು ನೆರವಾದ ಇಂಗ್ಲಿಷ್ ಭಾಷೆ, ಇಂದು ಗೋಳೀಕರಣದ ಏಕಮುಖತೆಯ ಪ್ರಧಾನ ಎಂಜಿನ್ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಈ ಪ್ರಕ್ರಿಯೆಯಲ್ಲಿ ಮೋಸ ಹೋಗದಿರಲು ಇಂಗ್ಲಿಷ್‌ ಕಲಿಕೆ ಅನಿವಾರ್ಯ. ಆದರೆ ಅದರ ಹುಚ್ಚು ಪ್ರವಾಹದಲ್ಲಿ ಕೊಚ್ಚಿಹೋಗದ ಹಾಗೆ ಕನ್ನಡ ಭಾಷೆ ಉಳಿಸುವ ಛಲ ಬೇಕಾಗಿದೆ. ನಮ್ಮ ಕನಸು–ಕಣಸು ಉಳಿಸಿಕೊಳ್ಳಲು ಕನ್ನಡ ಅಳಿಯದಂತೆ ನೋಡಿಕೊಳ್ಳುವ ಶೈಕ್ಷಣಿಕ, ಶಾಸನಾತ್ಮಕ ಪ್ರಯತ್ನ ಅವಿರತವಾಗಿ ಮುಂದುವರಿಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ADVERTISEMENT

ತುಮಕೂರಿನ ಕಲಾ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದ ದಿನಗಳು, ಇಲ್ಲಿಯ ಅನುಭವಗಳು, ಹಲವರ ಒಡನಾಟ, ಸಾಹಿತ್ಯದ ಚರ್ಚೆ ಸೇರಿದಂತೆ ಹಲವು ನೆನಪುಗಳನ್ನು ಮುಲುಕು ಹಾಕುತ್ತಲೇ ಜಾಗತೀಕರಣದಿಂದ ಭಾಷೆಯ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದರು.

ಗೋಳೀಕರಣವನ್ನು ‘ನಿಷ್ಕರುಣಿ ಯಂತ್ರ’ಕ್ಕೆ ಹೋಲಿಸುತ್ತಲೇ, ಅದರಿಂದಾಗುತ್ತಿರುವ ಅಪಾಯಗಳನ್ನು ಬಿಚ್ಚಿಟ್ಟರು. ಪ್ರಭುತ್ವಗಳ ಇಳಿತ ಕ್ಷೀಣಿಸುತ್ತಿದ್ದರೂ ಸರ್ವರಿಗೂ ಸಮಬಾಳು, ಸಮಪಾಲು ಸಿಗುತ್ತಿಲ್ಲ. ಎಲ್ಲವೂ ‘ಲಾಭ’ದ ಆಧಾರದ ಮೇಲೆ ನಡೆಯುತ್ತಿದೆ. ಹಾಗಾಗಿಯೇ ಇದನ್ನು ಎಂಜಿನ್ ಎಂದು ಕರೆಯುತ್ತಿರುವುದು. ಈಗಿನ ಗೋಳೀಕರಣ ನಿಷ್ಕರುಣೆ ಯಂತ್ರವಾಗಿದೆ ಎಂದು ಹೇಳುತ್ತಲೇ ಜಾಗತೀಕರಣದಿಂದ ಭಾಷೆ ಮೇಲಾಗುತ್ತಿರುವ ಅಪಾಯಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟರು.

ಇಂದಿಗೂ ಗೋಳೀಕರಣ ಜಗತ್ತಿನ ಮೂಲ ಮಂತ್ರವಾಗಿದೆ. ಇದರ ಮೂಲ ಉದ್ದೇಶ ಮಾರುಕಟ್ಟೆಯ ವಿಸ್ತರಣೆ. ಜತೆಗೆ ಬಹುರಾಷ್ಟ್ರೀಯ ಕಂಪನಿಗಳ ದಬ್ಬಾಳಿಕೆ ಹೆಚ್ಚುತ್ತಿದೆ. ಪ್ರಾದೇಶಿಕ ಚಳವಳಿಗಳು, ಹೋರಾಟಗಳು ಇನ್ನೂ ಜೀವಂತವಾಗಿದ್ದರೂ ಉದ್ದೇಶಿತ ಪರಿವರ್ತನೆ ತಂದಿರುವುದು ಕಡಿಮೆ. ಜಗತ್ತಿನ ಪ್ರಜಾಪ್ರಭುತ್ವ ಬಾಹ್ಯ ವಹಿವಾಟಿನ ಸೋಗಲಾಡಿತನವನ್ನು ಉಳಿಸಿಕೊಂಡೇ ಮಾರುಕಟ್ಟೆಯ ಅಜೆಂಡಾಗಳನ್ನು ಜನರ ಮೇಲೆ ಹೇರುವುದರಲ್ಲಿ ಯಶಸ್ವಿಯಾಗಿವೆ. ಇದರ ಹೊಡೆತಕ್ಕೆ ಸಿಲುಕಿದ ಕಲೆ, ಸಾಹಿತ್ಯ ಕ್ಷೇತ್ರಗಳು ಮಾರುಕಟ್ಟೆಯ ಮಾರಣ ಹೋಮದ ಸಮಿತ್ತುಗಳಾಗಿವೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಾಹಿತ್ಯಾಭಿಮಾನಿಗಳು

ಕಥೆಗಾರ ಜಿ.ವಿ.ಆನಂದಮೂರ್ತಿ ಸಂಪಾದಕತ್ವದಲ್ಲಿ ಹೊರ ತಂದಿರುವ ಎಚ್.ಎಸ್.ಶಿವಪ್ರಕಾಶ್ ಕುರಿತ ‘ಮುಗಿಲ ಜಹಜು’ ಕೃತಿಯನ್ನು ವಿಮರ್ಶಕಿ ಎಂ.ಎಸ್.ಆಶಾದೇವಿ ಬಿಡುಗಡೆ ಮಾಡಿದರು.

ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಾಹಿತಿಗಳು ಸಾಹಿತ್ಯಾಭಿಮಾನಿಗಳು

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಂ.ವಿ.ನಾಗರಾಜರಾವ್ ಧ್ವಜ ಹಸ್ತಾಂತರಿಸಿದರು. ಕನ್ನಡ ಸಾಹತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಆಶಯ ನುಡಿಗಳನ್ನಾಡಿದರು. ಜಿ.ಪಂ ಸಿಇಒ ಜಿ.ಪ್ರಭು, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಕನ್ನಡ ಸೇನೆಯ ಧನ್ಯಕುಮಾರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.