ಚಿಕ್ಕನಾಯಕನಹಳ್ಳಿ: ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿ ಅವರ ಕುಟುಂಬದವರ ವಿರುದ್ಧ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾಡಿರುವ ಆರೋಪವನ್ನು ತಾಲ್ಲೂಕು ಒಕ್ಕಲಿಗ ಸಮುದಾಯ ಖಂಡಿಸಿದೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಒಕ್ಕಲಿಗ ಸಮುದಾಯದ ಮುಖಂಡರು, ‘ದೇವೇಗೌಡರ ಕುಟುಂಬದ ಬಗ್ಗೆ ಮಾಧುಸ್ವಾಮಿ ಲಘುವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ದೇವೇಗೌಡರು ದೇಶದ ಪ್ರಧಾನಿ ಹುದ್ದೆಗೆ ಏರಿ ನಾಡಿಗೆ ಅನೇಕ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು’ ಎಂದು ತಾಲ್ಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷ ಹರ್ಷ ಎಚ್ಚರಿಕೆ ನೀಡಿದರು.
‘ದೇವೇಗೌಡರ ಕುಟುಂಬ ಲೂಟಿ ಹೊಡೆದಿದ್ದರೆ ಅಧಿಕಾರದಲ್ಲಿದ್ದರೂ ಬಿಜೆಪಿ ಸರ್ಕಾರ ತನಿಖೆ ನಡೆಸಿ ಯಾಕೆ ಶಿಸ್ತು ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.
‘ಮಾಧುಸ್ವಾಮಿ ಯಾರನ್ನೂ ಬೆಳೆಸಿಲ್ಲ. ಹೇಳಿದ್ದನ್ನು ಕೇಳುವವರನ್ನು ಜತೆಯಲ್ಲಿಟ್ಟುಕೊಂಡಿದ್ದಾರೆ. ವಿದ್ಯಾವಂತರು ಅವರ ಜತೆಯಲ್ಲಿಲ್ಲ. ತಾಲ್ಲೂಕಿನಲ್ಲಿ ಒಕ್ಕಲಿಗ ಸಮುದಾಯದ 40 ಸಾವಿರ ಜನಸಂಖ್ಯೆ ಇದೆ. ಬರುವ ಚುನಾವಣೆಯಲ್ಲಿ ಅವರನ್ನು ಮೂರನೇ ಸ್ಥಾನಕ್ಕೆ ಇಳಿಸುತ್ತೇವೆ’ ಎಂದು ಎಚ್ಚರಿಸಿದರು.
ಸಮುದಾಯದ ಗೌರವಾಧ್ಯಕ್ಷ ರಾಮಚಂದ್ರಯ್ಯ ಮಾತನಾಡಿದರು. ತಾಲ್ಲೂಕು ಒಕ್ಕಲಿಗ ಸಮುದಾಯದ ನಿರ್ದೇಶಕ ನಿರಂಜನಮೂರ್ತಿ, ನಿಂಗರಾಜು, ಚಂದ್ರಣ್ಣ, ಕುಮಾರಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.