ತುಮಕೂರು: ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಪಕ್ಷ ತೊರೆದು ಹೊರ ಬಂದಿರುವ ಸೊಗಡು ಶಿವಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಜಿಲ್ಲಾ ಕೇಂದ್ರದಲ್ಲೇ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.
ಬುಧವಾರ ತಮ್ಮ ಬೆಂಬಲಿಗರ ಜತೆಯಲ್ಲಿ ಬಂದು ನಾಮಪತ್ರ ಹಾಕಿದ್ದರು. ಗುರುವಾರ ನಗರದ ಕಾಲ್‌ಟ್ಯಾಕ್ಸ್ ವೃತ್ತದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾಕಷ್ಟು ಸಂಖ್ಯೆಯ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಮಹಾನಗರ ಪಾಲಿಕೆಗೆ ಬಂದು ನಾಮಪತ್ರ ಸಲ್ಲಿಸಿದರು.
ಟಿಕೆಟ್ ಕೊಡದೆ ಕಡೆಗಣಿಸಿರುವ ಬಿಜೆಪಿ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಶಿವಣ್ಣ ಸ್ಪರ್ಧೆ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್, ಕಾಂಗ್ರೆಸ್ ಮತಗಳನ್ನೂ ಸೆಳೆಯಬಹುದು ಎಂಬ ಆತಂಕ ಆ ಪಕ್ಷದ ಅಭ್ಯರ್ಥಿಗಳನ್ನು ಕಾಡುತ್ತಿದೆ.
2018ರ ಚುನಾವಣೆಯಲ್ಲಿ ಶಿವಣ್ಣ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿರಲಿಲ್ಲ. ಹಿರಿಯರ ಮಾತಿಗೆ ಕಟ್ಟುಬಿದ್ದು, ಚುನಾವಣೆಗೆ ಸ್ಪರ್ಧಿಸುವುದರಿಂದ ಹಿಂದೆ ಸರಿದಿದ್ದರು. ಈ ಬಾರಿ ಶತಾಯಗತಾಯ ಟಿಕೆಟ್‌ಗೆ ಪ್ರಯತ್ನಿಸಿದ್ದು, ಕೊನೆಗೂ ಟಿಕೆಟ್ ಸಿಕ್ಕಿಲ್ಲ. ಇದರಿಂದ ಬೇಸತ್ತು ಹಲವು ದಶಕಗಳ ಬಿಜೆಪಿ ಸಂಬಂಧ ತೊರೆದು, ರಾಜೀನಾಮೆ ನೀಡಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸುವ ಪ್ರಯತ್ನ ನಡೆಸಿದರೂ ಅದು ಕೈಗೂಡಿದಂತೆ ಕಾಣಸಲಿಲ್ಲ. ಕೊನೆಗೆ ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ. ಯಾರ ಮತಬುಟ್ಟಿಗೆ ಕೈ ಹಾಕಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.