ADVERTISEMENT

Karnataka Budget 2023 | ತುಮಕೂರು ಜಿಲ್ಲೆ– ನಿರೀಕ್ಷೆ ಹಲವು; ಸಿಗುವುದು ಕೆಲವು

ಕೊಬ್ಬರಿಗೆ ಸಿಗುವುದೆ ಪ್ರೋತ್ಸಾಹ ಧನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 7:38 IST
Last Updated 6 ಜುಲೈ 2023, 7:38 IST
ಕೊಬ್ಬರಿ
ಕೊಬ್ಬರಿ   

ತುಮಕೂರು: ಪ್ರತಿ ಸಲವೂ ಬಜೆಟ್ ಸಮಯದಲ್ಲಿ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಅನುದಾನ ಸಿಕ್ಕಿದ್ದು ಅತ್ಯಲ್ಪ. ಹೊಸದಾಗಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಈ ಬಾರಿಯಾದರೂ ಜಿಲ್ಲೆಯ ಬೇಡಿಕೆಗಳಿಗೆ ಸ್ಪಂದನೆ ಸಿಗಬಹುದು ಎಂಬ ಆಶಾವಾದ ಮೂಡಿದೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 11 ಕ್ಷೇತ್ರಗಳಲ್ಲಿ 7ರಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಪಕ್ಷದ ಗೆಲುವಿಗೆ ಜಿಲ್ಲೆ ಸಾಕಷ್ಟು ಕೊಡುಗೆ ನೀಡಿದೆ. ಹಾಗಾಗಿ ಹೊಸ ಸರ್ಕಾರದ ಬಜೆಟ್ ಕಡೆಗೆ ಎಲ್ಲರ ಕಣ್ಣು ನೆಟ್ಟಿದೆ.

ಕೊಬ್ಬರಿ ಬೆಲೆ ಕುಸಿತ: ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಜಿಲ್ಲೆಯ ಆರ್ಥಿಕ ಚಟುವಟಿಕೆ ತೆಂಗಿನ ಮೇಲೆ ನಿಂತಿದ್ದು, ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ದಿನದಿಂದ ದಿನಕ್ಕೆ ಬೆಲೆ ಕುಸಿಯುತ್ತಲೇ ಸಾಗಿದ್ದು, ಚೇತರಿಸುವ ಲಕ್ಷಣಗಳು ಕಾಣುತ್ತಿಲ್ಲ. ತೆಂಗು ಬೆಳೆಯಿಂದ ವಿಮುಖರಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಕೊಬ್ಬರಿಗೆ ಪ್ರೋತ್ಸಾಹ ಧನ ನೀಡಬೇಕು ಎಂಬ ಬೇಡಿಕೆ ಪ್ರಮುಖವಾಗಿದೆ.

ADVERTISEMENT

ಕೇಂದ್ರ ಸರ್ಕಾರ ಬೆಂಬಲ ಬೆಲೆ ಹೆಚ್ಚಿಸಿದೆ. ಇದರಿಂದ ರೈತರಿಗೆ ಪ್ರಯೋಜನ ಆಗುತ್ತಿಲ್ಲ. ಹಾಲಿಗೆ ನೀಡುತ್ತಿರುವಂತೆ ಕೊಬ್ಬರಿಗೂ ಪ್ರೋತ್ಸಾಹ ಧನ ನೀಡಿ ತೆಂಗು ಬೆಳೆಗಾರರನ್ನು ರಕ್ಷಿಸಬೇಕಿದೆ ಎಂಬ ಬೇಡಿಕೆ ವ್ಯಕ್ತವಾಗಿದೆ.

ತೆಂಗು ಪಾರ್ಕ್: ಪ್ರತಿ ಬಾರಿಯೂ ಬಜೆಟ್‌ನಲ್ಲಿ ತೆಂಗು ಪಾರ್ಕ್ ನಿರ್ಮಾಣದ ವಿಚಾರ ಪ್ರಸ್ತಾಪವಾಗುತ್ತದೆ. ಅತ್ಯಲ್ಪ ಹಣವನ್ನು ಮೀಸಲಿಡಲಾಗುತ್ತದೆ. ಆದರೆ ಈವರೆಗೂ ಅದಕ್ಕೆ ಒಂದು ಸ್ಪಷ್ಟ ರೂಪ ಸಿಕ್ಕಿಲ್ಲ. ತೆಂಗು ಸಂಶೋಧನಾ ಕೇಂದ್ರದ ಬೇಡಿಕೆಯೂ ಈಡೇರಿಲ್ಲ.

ವಸಂತನರಸಾಪುರ: ನಿರುದ್ಯೋಗ ನಿವಾರಣೆ, ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡುವಂತಹ ಕೈಗಾರಿಕಾ ಕ್ಷೇತ್ರದ ಪ್ರಗತಿಗೆ ನೆರವಾಗಬೇಕಿದೆ. ವಸಂತನರಸಾಪುರ ಕೈಗಾರಿಕಾ ಪ್ರದೇಶವನ್ನು ನಿರ್ಮಾಣ ಮಾಡಿದ್ದರೂ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿದ್ದು, ಹೊಸದಾಗಿ ಕೈಗಾರಿಕೆಗಳು ಬರುತ್ತಿಲ್ಲ. ನೀರು ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಒತ್ತು ನೀಡಿ, ಮತ್ತಷ್ಟು ಉದ್ಯಮಗಳು ನೆಲೆಯೂರುವಂತೆ ಮಾಡಲು ಬಜೆಟ್‌ನಲ್ಲಿ ಅನುದಾನ ನೀಡಬೇಕಿದೆ.

ಎತ್ತಿನಹೊಳೆ ಯೋಜನೆ ಕಾಮಗಾರಿ

ವಸಂತನರಸಾಪುರ ದವರೆಗೂ ಮೆಟ್ರೋ ರೈಲು ಸಂಚಾರ ವಿಸ್ತರಿಸಲಾಗುವುದು ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ಅದು ಈ ಬಾರಿಯ ಬಜೆಟ್‌ನಲ್ಲೇ ಈಡೇರುವುದೇ ಎಂಬುದನ್ನು ಕಾದುನೋಡಬೇಕಿದೆ.

ಶೇಂಗಾಕ್ಕೂ ಬೇಕು ಪ್ರೋತ್ಸಾಹ: ಎಣ್ಣೆ ಕಾಳು ಉತ್ಪಾದನೆಯಲ್ಲಿ ಶೇಂಗಾ ಮುಂಚೂಣಿಯಲ್ಲಿದ್ದು, ಹಲವು ಸಮಸ್ಯೆಗಳಿಂದ ನಲುಗಿದೆ. ವರ್ಷದಿಂದ ವರ್ಷಕ್ಕೆ ಶೇಂಗಾ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಲೇ ಇದೆ. ಇದರಿಂದಾಗಿ ಎಣ್ಣೆ ಆಮದು ಹೆಚ್ಚುತ್ತಲೇ ಸಾಗಿದೆ. ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ಭಾಗದಲ್ಲಿ ಶೇಂಗಾ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವಂತಹ ಉಪಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಬೇಕಿದೆ.

ಹುಣಸೆಗೂ ನೆರವು: ರಾಜ್ಯದಲ್ಲೇ ಜಿಲ್ಲೆಯಲ್ಲಿ ಅತಿ ಹೆಚ್ಚು ಹುಣಸೆ ಹಣ್ಣು ಬೆಳೆಯುತ್ತಿದ್ದು, ದೊಡ್ಡ ಮಾರುಕಟ್ಟೆ ಹೊಂದಿದೆ. ಬೆಲೆ ಕುಸಿದ ಸಮಯದಲ್ಲಿ ಸಂರಕ್ಷಣೆ, ಸಂಸ್ಕರಣೆ, ಮೌಲ್ಯವರ್ಧನೆ ಮಾಡುವ ವ್ಯವಸ್ಥೆ ರೂಪಿಸಬೇಕಿದೆ. ದಾಸ್ತಾನು ಮಾಡಲು ಶೀತಲ ಕೇಂದ್ರಗಳನ್ನು ನಿರ್ಮಿಸಬೇಕಿದೆ. ಸಂಶೋಧನಾ ಕೇಂದ್ರದ ಬೇಡಿಕೆಗೂ ಒತ್ತು ನೀಡಬೇಕಿದೆ.

ಹಲಸು: ಜಿಲ್ಲೆಯಲ್ಲಿ ಹಲಸು ಹಣ್ಣನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ ಅದಕ್ಕೆ ವ್ಯವಸ್ಥಿತ ಮಾರುಕಟ್ಟೆ, ಸಂಸ್ಕರಣೆ, ಮೌಲ್ಯವರ್ಧನೆ ಮಾಡುವ ವ್ಯವಸ್ಥೆ ಇಲ್ಲವಾಗಿದೆ. ಇದಕ್ಕೊಂದು ಹೊಸ ರೂಪ ನೀಡಿದರೆ ಹಲಸಿನಿಂದಲೂ ರೈತರಿಗೆ ಲಾಭವಾಗುವಂತೆ ಮಾಡಬಹುದಾಗಿದೆ.

ನೀರಾವರಿ ನಿಧಾನ
ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಆಮೆ ವೇಗದಲ್ಲಿ ಸಾಗಿವೆ. ಎತ್ತಿನಹೊಳೆ ಭದ್ರಾ ಮೇಲ್ಡಂಡೆ ಕಾಮಗಾರಿಗಳು ಮುಂದಕ್ಕೆ ಸಾಗುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಈ ವರ್ಷದ ಸೆಪ್ಟೆಂಬರ್‌ಗೆ ಎತ್ತಿನಹೊಳೆ ಕಾಮಗಾರಿ ಮುಗಿಸಿ ನೀರು ಹರಿಸಲಾಗುವುದು ಎಂದು ಹೇಳಿತ್ತು. ಕಾಂಗ್ರೆಸ್ ಸರ್ಕಾರ ಮುಂದಿನ ವರ್ಷ ಪೂರ್ಣಗೊಳಿಸಲಾಗುವುದು ಎಂದು ಹೇಳುತ್ತಿದೆ. ಅಗತ್ಯ ಅನುದಾನ ನೀಡಿ ಕೆಲಸ ಚುರುಕು ಮಾಡದಿದ್ದರೆ ಮುಂದಿನ ವರ್ಷವಲ್ಲ ಇನ್ನೂ ಐದಾರು ವರ್ಷಗಳಾದರೂ ಯೋಜನೆ ಪೂರ್ಣಗೊಳ್ಳುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ₹5300 ಕೋಟಿ ನೆರವು ಪ್ರಕಟಿಸಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಯೋಜನೆಗೆ ಬೇಕಾದ ಭೂಮಿಯಲ್ಲಿ ಕಾಲು ಭಾಗದಷ್ಟೂ ಸ್ವಾಧೀನ ಪೂರ್ಣಗೊಂಡಿಲ್ಲ. ರಾಜ್ಯ ಸರ್ಕಾರ ಸಹ ಅಗತ್ಯ ಅನುದಾನ ನೀಡಿ ಚುರುಕುಗೊಳಿಸಬೇಕಿದೆ. ಈಗಿನ ವೇಗದಲ್ಲೇ ಸಾಗಿದರೆ ಇನ್ನೂ ಹತ್ತು ವರ್ಷ ಕಳೆದರೂ ಯೋಜನೆ ಪೂರ್ಣಗೊಳ್ಳುವುದಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅಗತ್ಯ ಹಣ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತೆವಳುತ್ತಿದೆ ರೈಲ್ವೆ ಯೋಜನೆ
ಜಿಲ್ಲೆಯಲ್ಲಿ ಎರಡು ಪ್ರಮುಖ ರೈಲ್ವೆ ಯೋಜನೆಗಳು ಜಾರಿಯಲ್ಲಿ ಇದ್ದರೂ ಕೇಂದ್ರ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಹಣವನ್ನು ಸಕಾಲದಲ್ಲಿ ನೀಡದೆ ತೆವಳುತ್ತಲೇ ಸಾಗಿವೆ. ತುಮಕೂರು– ರಾಯದುರ್ಗ ತುಮಕೂರು– ದಾವಣಗೆರೆ ರೈಲು ಮಾರ್ಗದ ಕಾಮಗಾರಿಗೆ ಚಾಲನೆ ನೀಡಿ ದಶಕವೇ ಕಳೆದಿದ್ದರೂ ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ರಾಯದುರ್ಗದಿಂದ ಪಾವಗಡದವರೆಗೆ ಕೆಲಸ ಪೂರ್ಣಗೊಂಡು ಪರೀಕ್ಷಾರ್ಥ ರೈಲು ಸಂಚಾರ ಮಾಡಿದೆ. ಆದರೆ ತುಮಕೂರು– ಪಾವಗಡ ನಡುವಿನ ಕೆಲಸ ಮುಂದಕ್ಕೆ ಸಾಗುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.