ತುಮಕೂರು: ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದು ಜಿಲ್ಲೆಗೆ ವಿಶೇಷ ಅನುದಾನ, ಪ್ರತ್ಯೇಕವಾದ ಯೋಜನೆ ಘೋಷಿಸಿಲ್ಲ. ಜಿಲ್ಲೆಯ ಜನರ ಹಲವು ನಿರೀಕ್ಷೆಗಳು ಹುಸಿಯಾಗಿವೆ.
ತಾಲ್ಲೂಕು ಕಚೇರಿಗಳಲ್ಲಿ ಇ–ಆಡಳಿತ ಇಲಾಖೆಯಿಂದ ಸಾರ್ವಜನಿಕರಿಗೆ ಸೂಕ್ತ ಸಮಯಕ್ಕೆ ಸರ್ಕಾರದ ಸೇವೆ ಒದಗಿಸಲು ಪ್ರಾಯೋಗಿಕವಾಗಿ ಕೊರಟಗೆರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದನ್ನು ಬಿಟ್ಟರೆ ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ.
ಜಿಲ್ಲೆಯ ಜನರು ತೋಟಗಾರಿಕೆ ಬೆಳೆಗಳನ್ನು ಹೆಚ್ಚಾಗಿ ಅವಲಂಬಿಸಿದ್ದು, ಕೊಬ್ಬರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು ಎಂಬುವುದು ತೆಂಗು ಬೆಳೆಗಾರರ ಪ್ರಮುಖ ಒತ್ತಾಯವಾಗಿತ್ತು. ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ದಿನೇ ದಿನೇ ಕುಸಿತ ಕಾಣುತ್ತಿದ್ದು, ರೈತರು ಸರ್ಕಾರದ ಕಡೆ ಮುಖ ಮಾಡಿದ್ದರು. ಅವರ ಬೇಡಿಕೆಯೂ ಈಡೇರಿಲ್ಲ.
ತೋಟಗಾರಿಕೆ ಬೆಳೆಗಳ ಉತ್ಪಾದನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುವುದು. ತೋಟಗಾರಿಕಾ ಉತ್ಪನ್ನಗಳಿಗೆ ಎಂಟು ಶೀತಲ ಘಟಕ ಶುರು ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ ಶೀತಲ ಘಟಕಗಳನ್ನು ಎಲ್ಲಿ ಸ್ಥಾಪಿಸಲಾಗುತ್ತದೆ. ಎಷ್ಟು ಅನುದಾನ ಮೀಸಲಿಡಲಾಗಿದೆ ಎಂಬ ವಿಚಾರ ಪ್ರಸ್ತಾಪಿಸಿಲ್ಲ.
ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಿಲ್ಲ. ಎತ್ತಿನ ಹೊಳೆ ಯೋಜನೆ ಸಂಬಂಧಿಸಿದಂತೆ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
ನಗರ ಹೊರ ವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದೆ. ಕೈಗಾರಿಕಾ ಪ್ರದೇಶದವರೆಗೆ ಮೆಟ್ರೋ ವಿಸ್ತಾರವಾಗಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದರು. ಈ ಬಾರಿಯ ಬಜೆಟ್‌ನಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಜನರು ನಿರೀಕ್ಷಿಸಿದ್ದರು. ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಕೈಗಾರಿಕಾ ಘಟಕಗಳ ಆರಂಭಕ್ಕೆ ಉತ್ತೇಜನ ನೀಡಲು ಸರ್ಕಾರ ವಿಶೇಷ ಅನುದಾನ ಮೀಸಲಿಟ್ಟಿಲ್ಲ.
ಜಿಲ್ಲೆಯಲ್ಲಿ ತೆಂಗು, ಅಡಿಕೆ, ಶೇಂಗಾ, ಹುಣಸೆ ನಂತರ ಹಲಸು ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಇತ್ತೀಚೆಗೆ ಜಿಲ್ಲೆಯ ಉತ್ಕೃಷ್ಟ ತಳಿಗಳಾದ ‘ಸಿದ್ದು’, ‘ಶಂಕರ’ ಹಲಸಿಗೆ ಹಕ್ಕು ಸ್ವಾಮ್ಯ (ಪೇಟೆಂಟ್) ಸಿಕ್ಕಿದೆ. ಆದರೆ ಹಲಸಿನ ಮಾರುಕಟ್ಟೆ, ಸಂಸ್ಕರಣೆ, ಮೌಲ್ಯ ವರ್ಧನೆಗೆ ಹೆಚ್ಚಿನ ವ್ಯವಸ್ಥೆಗಳು ಇಲ್ಲ. ಸರ್ಕಾರ ಇತ್ತ ಗಮನ ಹರಿಸಿ, ಹಲಸಿಗೆ ಪ್ರೋತ್ಸಾಹ ನೀಡಬೇಕು ಎಂಬ ಒತ್ತಾಯವೂ ಹಾಗೇ ಉಳಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.