ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 17 ತಿಂಗಳು ಕಳೆದಿದ್ದರೂ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಸಿಗದೆ ಅಸಮಾಧಾನ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಕೆಎಸ್‌ಆರ್‌ಟಿಸಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ನೇಮಕ ಮಾಡಿರುವುದನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ‘ದೊಡ್ಡ ಮಟ್ಟದ’ ಅಧಿಕಾರ ಸಿಕ್ಕಿಲ್ಲ. ರಾಜ್ಯ ಮಟ್ಟದ ಯಾವೊಂದು ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ಸಿಗದಿರುವುದು ಆಕ್ರೋಶವನ್ನು ಹೆಚ್ಚಿಸಿದೆ.
ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯನ್ನು ಹೊರತುಪಡಿಸಿದರೆ ಜಿಲ್ಲೆಯಿಂದ ಅತಿ ಹೆಚ್ಚು 7 ಶಾಸಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಚಿತ್ರದುರ್ಗದಂತಹ ಚಿಕ್ಕ ಜಿಲ್ಲೆಯ ಏಳು ಮಂದಿಗೆ ನಿಗಮ, ಮಂಡಲಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಶಾಸಕರು ಜಿಲ್ಲೆಯಿಂದ ಆಯ್ಕೆಯಾಗಿದ್ದರೂ ಕಾರ್ಯಕರ್ತರಿಗೆ ಅಧಿಕಾರ ನೀಡುವುದು ದೂರವೇ ಉಳಿದಿದೆ. ಪಕ್ಷ ಅಧಿಕಾರಕ್ಕೆ ಬಂದ ಸಮಯದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಿದ್ದರೆ ಹೇಗೆ? ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯಿತಿ, ಮಹಾನಗರ ಪಾಲಿಕೆ ಚುನಾವಣೆ ಎದುರಿಸಬೇಕಿದೆ. ಪಕ್ಷಕ್ಕಾಗಿ ದುಡಿದವರಿಗೆ ‘ಅಧಿಕಾರದ ಅವಕಾಶ’ ಕಲ್ಪಿಸದಿದ್ದರೆ ಪಕ್ಷ ಸಂಘಟಿಸುವುದು ಹೇಗೆ? ಎಂಬ ಮಾತುಗಳು ಕಾರ್ಯಕರ್ತರ ವಲಯದಿಂದ ಕೇಳಿ ಬರುತ್ತಿವೆ.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ ಅವರನ್ನು ನೇಮಕ ಮಾಡಲಾಗಿದೆ. ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಅವರು ಪಟ್ಟು ಹಿಡಿದಿದ್ದು, ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿಲ್ಲ. ಹಾಗಾಗಿ ಈ ಸಮಿತಿಯೂ ಕೆಲಸ ಮಾಡುತ್ತಿಲ್ಲ. ಬೇರೆಯವರನ್ನೂ ಆ ಸ್ಥಾನಕ್ಕೆ ನೇಮಕ ಮಾಡಿಲ್ಲ.
ರಾಜ್ಯದಲ್ಲಿರುವ 120 ನಿಗಮ, ಮಂಡಳಿ ಅಧ್ಯಕ್ಷರನ್ನು ನೇಮಕ ಮಾಡುವ ಸಮಯದಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ಅವಕಾಶ ನೀಡಿಲ್ಲ. ಯಾವುದಾದರೂ ಒಂದು ನಿಗಮದಲ್ಲೂ ಗೊಲ್ಲ ಜನಾಂಗದವರಿಗೆ ಅವಕಾಶ ಕಲ್ಪಿಸಿಲ್ಲ. ಚಂದ್ರಶೇಖರ್‌ಗೌಡ ಅವರಿಗೆ ರಾಜ್ಯ ಮಟ್ಟದ ನಿಗಮದಲ್ಲಿ ಅವಕಾಶ ನೀಡಬೇಕು ಎಂಬ ಬೇಡಿಕೆ ಸಮುದಾಯದಿಂದಲೂ ವ್ಯಕ್ತವಾಗುತ್ತಿದೆ.
ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರು ಶಕ್ತಿ ತುಂಬುತ್ತಾ ಬಂದಿದ್ದರೂ ಅಧಿಕಾರ ನೀಡುವ ಸಮಯದಲ್ಲಿ ಬಾಯಿ ಮುಚ್ಚಿಸಲಾಗುತ್ತಿದೆ. ಇಲ್ಲವೆ ದೂರ ತಳ್ಳಲಾಗುತ್ತದೆ. ಚುನಾವಣೆ ಬಂದಾಗ ಕಾರ್ಯಕರ್ತರು ನೆನಪಾಗುತ್ತಾರೆ. ನಿಗಮ, ಮಂಡಳಿಯ ಜತೆಗೆ ಜಿಲ್ಲಾ ಕೇಂದ್ರದ ಹಲವು ಸಂಸ್ಥೆಗಳಿಗೆ ನಾಮ ನಿರ್ದೇಶನ ಮಾಡಿಲ್ಲ. ಇತ್ತೀಚೆಗಷ್ಟೇ ತುಮಕೂರು ವಿಶ್ವವಿದ್ಯಾಲಯ ಸಿಂಡಿಕೇಟ್‌ಗೆ ನಾಮ ನಿರ್ದೇಶನ ಮಾಡಲಾಗಿದೆ. ಅದು ಬಿಟ್ಟರೆ ಉಳಿದ ಸಂಸ್ಥೆಗಳ ನಾಮ ನಿರ್ದೇಶನ ಬಾಕಿ ಉಳಿದಿದೆ.
ನಗರದ ಅಭಿವೃದ್ಧಿಗೆ ದಿಕ್ಸೂಚಿ ಆಗಬೇಕಿದ್ದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಟೂಡಾ) ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಟೂಡಾದಲ್ಲಿ ಏನು ನಡೆಯುತ್ತಿದೆ ಎಂಬುದೇ ಯಾರಿಗೂ ಗೊತ್ತಾಗುತ್ತಿಲ್ಲ. ಎಪಿಎಂಸಿ, ಕೆಡಿಪಿ, ಪಿಎಲ್‌ಡಿ ಬ್ಯಾಂಕ್, ಆಸ್ಪತ್ರೆ, ಜೈಲು ಸಮಿತಿ ಸೇರಿದಂತೆ ಜಿಲ್ಲಾ ಹಾಗೂ ನಗರ ಮಟ್ಟದ ಹಲವು ಸಂಸ್ಥೆಗಳಿಗೆ ಈವರೆಗೂ ನಾಮ ನಿರ್ದೇಶನ ಮಾಡಿಲ್ಲ. ಇಂದಲ್ಲ, ನಾಳೆ ಅಧಿಕಾರ ಸಿಗಬಹುದು ಎಂದು ಕಾರ್ಯಕರ್ತರು ಕಾದು ಕುಳಿತುಕೊಳ್ಳುವಂತಾಗಿದೆ.
ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನಾಮ ನಿರ್ದೇಶನ ಮಾಡಿದ್ದರೆ ಈ ವೇಳೆಗಾಗಲೇ ಒಂದು ಅವಧಿಯ (20 ತಿಂಗಳು) ಅಧಿಕಾರ ಪೂರ್ಣಗೊಳಿಸುವ ಹಂತಕ್ಕೆ ಬರುತ್ತಿತ್ತು. ಮುಂದಿನ ದಿನಗಳಲ್ಲಿ ಮತ್ತೊಬ್ಬರಿಗೆ ಅವಕಾಶ ಕಲ್ಪಿಸಲು ಅವಕಾಶವಿತ್ತು. ಆದರೆ ಈಗ ಅಂತಹ ಅವಕಾಶ ಕೈತಪ್ಪಿ ಹೋಗಿದೆ. ಕಾರ್ಯಕರ್ತರಿಗೆ ಅಧಿಕಾರ ಸಿಗದಂತೆ ಮಾಡಲಾಗಿದೆ ಎಂಬ ಆಕ್ಷೇಪ ಪಕ್ಷದ ವಲಯದಲ್ಲಿ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಅಸಹನೆ ಮತ್ತಷ್ಟು ಹೆಚ್ಚಲಿದೆ. ಹೈಕಮಾಂಡ್ ಮಟ್ಟಕ್ಕೂ ಮುಟ್ಟಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.