ಶಿರಾ: ನಗರ ಪ್ರದೇಶದಲ್ಲಿ ಭಾನುವಾರ ಸುರಿದ ಮಳೆಗೆ ಕೆಲವು ಕಡೆ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ.
ನಗರದ ವಾರ್ಡ್ ನಂಬರ್ 18ರ ಬೇಗಂ ಮೊಹಲ್ಲಾದಲ್ಲಿ ಮನೆಗಳಿಗೆ ನೀರು ನುಗ್ಗಿ ಜಲಾವೃತ್ತಗೊಂಡಿದ್ದು, ಮನೆಯಲ್ಲಿದ್ದ ದವಸ ಧಾನ್ಯ, ಬಟ್ಟೆ ಪೀಠೋಪಕರಣ ಸೇರಿದಂತೆ ಅನೇಕ ವಸ್ತುಗಳು ನೀರಿನಲ್ಲಿ ನೆನೆದು ಹಾಳಾಗಿವೆ. ರಾತ್ರಿ ಪೂರ್ತಿ ಮಳೆ ನೀರನ್ನು ಹೊರಗೆ ಹಾಕಲು ಜನ ಹರಸಾಹಸ ಪಡುವಂತಾಯಿತು.
ನಗರದ ಕೆಲವು ಕಡೆ ನೆಲ ಅಂತಸ್ತಿನಲ್ಲಿದ್ದ ಅಂಗಡಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.
ಬಹುತೇಕ ಪ್ರದೇಶಗಳಲ್ಲಿ ಚರಂಡಿಗಳು ಮುಚ್ಚಿ ಹೋಗಿ, ಕೆಲವೆಡೆ ತ್ಯಾಜ್ಯ–ಹೂಳು ತುಂಬಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ಹರಿದು ಮಳಿಗೆಗಲಿಗೆ ನುಗ್ಗಿದೆ.
ಚರಂಡಿ ನಿರ್ವಹಣೆ ಸಮರ್ಪಕವಾಗಿ ಮಾಡದಿರುವುದು ಘಟನೆಗೆ ಕಾರಣ ಎಂದು ಸ್ಥಳಿಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಗಂ ಮೊಹಲ್ಲಾದಲ್ಲಿ ಚರಂಡಿಯಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕರುವೊಂದನ್ನು ಸ್ಥಳೀಯ ಯುವಕರ ರಕ್ಷಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.