ADVERTISEMENT

ಆಸ್ತಿ ನೋಂದಣಿಗೆ ‘ಕಾವೇರಿ 2.0 ತಂತ್ರಾಂಶ’

​ಪ್ರಜಾವಾಣಿ ವಾರ್ತೆ
Published 23 ಮೇ 2023, 14:34 IST
Last Updated 23 ಮೇ 2023, 14:34 IST
ತುಮಕೂರಿನ ನೋಂದಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ‘ಕಾವೇರಿ ತಂತ್ರಾಂಶ 2.0’ ಅಳವಡಿಕೆಗೆ ಮುದ್ರಾಂಕಗಳ ಇಲಾಖೆ ಆಯುಕ್ತೆ ಬಿ.ಆರ್.ಮಮತ ಚಾಲನೆ ನೀಡಿದರು. ಸಹಾಯಕ ನೋಂದಣಿ ಮಹಾಪರಿವೀಕ್ಷಕ ಎಚ್.ಎಲ್.ಪ್ರಭಾಕರ್, ಜಿಲ್ಲಾ ನೋಂದಣಾಧಿಕಾರಿ ಬಿ.ಎನ್.ಶಶಿಕಲಾ, ಉಪ ನೋಂದಣಾಧಿಕಾರಿಗಳಾದ ಎಸ್.ಪಿ.ರಂಗರಾಜು, ಧನಲಕ್ಷ್ಮಿ, ಸೌಮ್ಯ ಸಂಪತ್, ಎಂ.ರಾಜಶೇಖರ್ ಇದ್ದರು
ತುಮಕೂರಿನ ನೋಂದಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ‘ಕಾವೇರಿ ತಂತ್ರಾಂಶ 2.0’ ಅಳವಡಿಕೆಗೆ ಮುದ್ರಾಂಕಗಳ ಇಲಾಖೆ ಆಯುಕ್ತೆ ಬಿ.ಆರ್.ಮಮತ ಚಾಲನೆ ನೀಡಿದರು. ಸಹಾಯಕ ನೋಂದಣಿ ಮಹಾಪರಿವೀಕ್ಷಕ ಎಚ್.ಎಲ್.ಪ್ರಭಾಕರ್, ಜಿಲ್ಲಾ ನೋಂದಣಾಧಿಕಾರಿ ಬಿ.ಎನ್.ಶಶಿಕಲಾ, ಉಪ ನೋಂದಣಾಧಿಕಾರಿಗಳಾದ ಎಸ್.ಪಿ.ರಂಗರಾಜು, ಧನಲಕ್ಷ್ಮಿ, ಸೌಮ್ಯ ಸಂಪತ್, ಎಂ.ರಾಜಶೇಖರ್ ಇದ್ದರು   

ತುಮಕೂರು: ತ್ವರಿತವಾಗಿ ಆಸ್ತಿ ನೋಂದಣಿಗೆ ನೆರವಾಗುವ ಸಲುವಾಗಿ ‘ಕಾವೇರಿ ತಂತ್ರಾಂಶ 2.0’ಅನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಳವಡಿಸಿದ್ದು, ಮಂಗಳವಾರ ಚಾಲನೆ ನೀಡಲಾಯಿತು.

ನಗರದ ನೋಂದಣಾಧಿಕಾರಿ ಕಚೇರಿಯಲ್ಲಿ ಮುದ್ರಾಂಕಗಳ ಇಲಾಖೆ ಆಯುಕ್ತೆ ಬಿ.ಆರ್.ಮಮತ ಚಾಲನೆ ನೀಡಿ ಮಾತನಾಡಿ, ‘ಕಾವೇರಿ ತಂತ್ರಾಂಶ 2.0 ಅಳವಡಿಕೆಯಿಂದ ಆಸ್ತಿ ಖರೀದಿಸುವ ಮುನ್ನ ಅದರ ಮೇಲಿರುವ ಋಣಭಾರ, ನೋಂದಣಿಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಜತೆಗೆ ಆಸ್ತಿ ನೋಂದಣಿಯನ್ನು ತ್ವರಿತಗತಿಯಲ್ಲಿ ಮಾಡಬಹುದಾಗಿದೆ’ ಎಂದರು.

ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಯ ವಿವರ, ಮೂಲ ದಾಖಲೆಗಳನ್ನು ಆನ್‍ಲೈನ್ ಮೂಲಕ ನೇರವಾಗಿ ಉಪ ನೋಂದಣಾಧಿಕಾರಿಗೆ ಕಳುಹಿಸಬಹುದು. ಅಧಿಕಾರಿಗಳು ಪರಿಶೀಲಿಸಿದ ನಂತರ ನೋಂದಣಿಗೆ ತಗಲುವ ವೆಚ್ಚವನ್ನು ಖಜಾನೆಗೆ ಆನ್‍ಲೈನ್ ಮೂಲಕ ಪಾವತಿಸಿ ನಮಗೆ ಬೇಕಾದ ದಿನಾಂಕ, ಸಮಯವನ್ನು ನಿಗದಿ ಪಡಿಸಿಕೊಳ್ಳಲು ಅವಕಾಶವಿದೆ. ನಿಗದಿತ ದಿನದಂದು ಕೆಲವೇ ನಿಮಿಷದಲ್ಲಿ ಭಾವಚಿತ್ರ, ಸಹಿ, ಹೆಬ್ಬೆಟ್ಟಿನ ಗುರುತು ತೆಗೆದುಕೊಂಡು ನೋಂದಣಿ ಮಾಡಿಕೊಡಲಾಗುತ್ತದೆ. ಸಾರ್ವಜನಿಕರೇ ತಮ್ಮ ಆಸ್ತಿಯ ದಸ್ತಾವೇಜುಗಳನ್ನು ನೇರವಾಗಿ ದಾಖಲಿಸುವುದರಿಂದ ಲೋಪಗಳು ಕಡಿಮೆಯಾಗುತ್ತವೆ ಎಂದು ವಿವರಿಸಿದರು.

ADVERTISEMENT

ರಾಜ್ಯದಲ್ಲಿ ಈವರೆಗೂ 155 ಕಚೇರಿಯಲ್ಲಿ ಈ ತಂತ್ರಾಂಶ ಅಳವಡಿಸಲಾಗಿದೆ. ಉಳಿದ 97 ಕಚೇರಿಗಳಲ್ಲಿ ಶೀಘ್ರವೇ ಅಳವಡಿಸಲಾಗುವುದು ಎಂದರು.

ಸಹಾಯಕ ನೋಂದಣಿ ಮಹಾಪರಿವೀಕ್ಷಕ ಎಚ್.ಎಲ್.ಪ್ರಭಾಕರ್, ಜಿಲ್ಲಾ ನೋಂದಣಾಧಿಕಾರಿ ಬಿ.ಎನ್.ಶಶಿಕಲಾ, ಉಪ ನೋಂದಣಾಧಿಕಾರಿಗಳಾದ ಎಸ್.ಪಿ.ರಂಗರಾಜು, ಧನಲಕ್ಷ್ಮಿ, ಸೌಮ್ಯ ಸಂಪತ್, ಎಂ.ರಾಜಶೇಖರ್, ಚಿಕ್ಕಬಳ್ಳಾಪುರ ನೋಂದಣಾಧಿಕಾರಿ ಎಂ.ಶ್ರೀದೇವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.