ADVERTISEMENT

ನಾಯಿ ದಾಳಿಗೆ ಜಿಂಕೆಗಳು ಬಲಿ

ಬೆಮಲ್‌ ನಗರ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸಾವಿರಾರು ಕೃಷ್ಣಮೃಗಗಳಿಗೆ ತೊಂದರೆ

ಕೃಷ್ಣಮೂರ್ತಿ
Published 23 ಏಪ್ರಿಲ್ 2020, 8:30 IST
Last Updated 23 ಏಪ್ರಿಲ್ 2020, 8:30 IST
ಕೆಜಿಎಫ್ ಬೆಮಲ್‌ ನಗರದಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ ಮೃತಪಟ್ಟ ಕೃಷ್ಣಮೃಗ (ಎಡಚಿತ್ರ), ಬೆಮಲ್‌ ಹಿಂಭಾಗದ ಬಿಜಿಎಂಎಲ್‌ ಜಾಗದಲ್ಲಿ ಜಿಂಕೆಗಳಿಗಾಗಿ ನಿರ್ಮಿಸಿರುವ ನೀರಿನ ತೊಟ್ಟಿ
ಕೆಜಿಎಫ್ ಬೆಮಲ್‌ ನಗರದಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ ಮೃತಪಟ್ಟ ಕೃಷ್ಣಮೃಗ (ಎಡಚಿತ್ರ), ಬೆಮಲ್‌ ಹಿಂಭಾಗದ ಬಿಜಿಎಂಎಲ್‌ ಜಾಗದಲ್ಲಿ ಜಿಂಕೆಗಳಿಗಾಗಿ ನಿರ್ಮಿಸಿರುವ ನೀರಿನ ತೊಟ್ಟಿ   

ಕೆಜಿಎಫ್‌: ಬೆಮಲ್‌ ನಗರ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸಾವಿರಾರು ಕೃಷ್ಣಮೃಗಗಳಿಗೆ ಈಗ ಒಂದೆಡೆ ನೀರು ಮತ್ತು ಮೇವಿನ ಸಮಸ್ಯೆಯಾದರೆ, ಮತ್ತೊಂದೆಡೆ ಬೀದಿ ನಾಯಿಗಳಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ.

ಬೆಮಲ್‌ ನಗರದ ಆಫೀಸರ್ಸ್‌ ಕ್ವಾರ್ಟಸ್‌ ಹಿಂಭಾಗದಿಂದ ಬಡ ಮಾಕನಹಳ್ಳಿಯವರೆಗೂ ಇರುವ ಪ್ರದೇಶದಲ್ಲಿ ಕೃಷ್ಣಮೃಗಗಳು ವಾಸಿಸುತ್ತಿವೆ. ಅರಣ್ಯ ಇಲಾಖೆಯ ಮೂಲಗಳ ಪ್ರಕಾರ 3 ರಿಂದ 4 ಸಾವಿರ ಕೃಷ್ಣಮೃಗಗಳು ವಾಸ ಮಾಡುತ್ತಿವೆ. ಅವುಗಳ ವಾಸಸ್ಥಾನದ ಜಾಗ ಬಹುತೇಕ ಬಿಜಿಎಂಎಲ್‌ಗೆ ಸೇರಿದೆ.

ಈಚಿನ ದಿನಗಳಲ್ಲಿ ಅವುಗಳ ವಾಸಸ್ಥಾನದಲ್ಲಿ ನೀರಿನ ಮತ್ತು ಮೇವಿನ ಕೊರತೆ ಉಂಟಾಗಿರುವುದರಿಂದ ಅವುಗಳನ್ನು ಅರಸಿ ನಾಡಿನತ್ತ ಬರುತ್ತಿದೆ. ಈಗಾಗಲೇ ಬೆಮಲ್‌ ಕಾರ್ಖಾನೆಯ ಮುಂಭಾಗದಲ್ಲಿರುವ ಹೆಲಿಪ್ಯಾಡ್‌ನಲ್ಲಿ ಪ್ರತಿನಿತ್ಯ ನೂರಾರು ಜಿಂಕೆಗಳು ಮೇಯುತ್ತಿರುವುದು ಕಂಡು ಬರುತ್ತಿದೆ. ಕೆಜಿಎಫ್‌ ಮುಖ್ಯ ರಸ್ತೆಯ ಬದಿಗೂ ಹಿಂಡುಗಳು ಬರುತ್ತಿವೆ.

ADVERTISEMENT

ಬೆಮಲ್‌ ಕಾರ್ಖಾನೆಯ ಆರ್ ಅಂಡ್ ಡಿ ಹಿಂಭಾಗದಲ್ಲಿ ಬೆಮಲ್‌ ಆಡಳಿತ ವರ್ಗ ಸಣ್ಣ ಕೆರೆಯನ್ನು ನಿರ್ಮಾಣ ಮಾಡಿತ್ತು. ಬರದ ಕಾಲದಲ್ಲಿಯೂ ಅಲ್ಲಿ ನೀರು ಇರುತ್ತಿತ್ತು. ಆದರೆ ಈ ಬಾರಿ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ವಾಡಿಕೆಯಂತೆ ಈ ಭಾಗಕ್ಕೆ ಬರುವ ಜಿಂಕೆಗಳು ಬೀದಿ ನಾಯಿಗಳಿಗೆ ಬಲಿಯಾಗುತ್ತಿವೆ. ಕೆರೆಯ ಸಮೀಪವೇ ಬೆಮಲ್‌ ತನ್ನ ವ್ಯಾಪ್ತಿಯಲ್ಲಿ ಸಿಗುವ ತ್ಯಾಜ್ಯಗಳನ್ನು ಸುರಿಯುತ್ತಿದೆ. ತ್ಯಾಜ್ಯದ ವಾಸನೆಯನ್ನು ಅರಿಸಿಕೊಂಡು ಬರುವ ನಾಯಿಗಳಿಗೆ ಜಿಂಕೆಗಳು ಸುಲಭ ತುತ್ತಾಗುತ್ತಿವೆ. ಈ ತಿಂಗಳಲ್ಲಿ ಮೂರು ಜಿಂಕೆಗಳು ನಾಯಿಗಳಿಗೆ ಬಲಿಯಾಗಿದೆ.

ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರುವ ಎಂ.ವಿ.ನಗರ, ಭಾರತ್ ನಗರ, ಎಚ್‌ಪಿ ನಗರ ಮೊದಲಾದ ಪ್ರದೇಶಗಳಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಕಸವನ್ನು ಈ ಪ್ರದೇಶದಲ್ಲಿ ತಂದು ಸುರಿಯಲಾಗುತ್ತಿದೆ. ಇದು ಕೂಡ ಬೀದಿಗಳ ನಾಯಿಗಳು ಜಿಂಕೆಗಳ ವಾಸಸ್ಥಾನಕ್ಕೆ ದಾಳಿ ಮಾಡಲು ಕಾರಣವಾಗಿದೆ.

ಜಿಂಕೆಗಳ ರಕ್ಷಣೆಗಾಗಿ ಸ್ವಯಂಸೇವಾ ಸಂಸ್ಥೆ ವಾಯ್ಸ್‌ ಫಾರ್ ವೈಡ್‌ಲೈಫ್‌ ಮತ್ತು ಕರ್ನಾಟಕ ಸಿಂಹ ಗರ್ಜನೆ ಸಂಘಟನೆಯ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಬೆಮಲ್‌ ಹಿಂಭಾಗದ ಹಲವಾರು ಪ್ರದೇಶಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಿದ್ದಾರೆ. ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡುತ್ತಿದ್ದಾರೆ. ಸಿಂಹ ಗರ್ಜನೆ ಸಂಘಟನೆ ಜಿಂಕೆಗಳಿಗೆ ನೀರು ಕುಡಿಯಲೆಂದು ಇಟ್ಟಿದ್ದ ತೊಟ್ಟಿಗಳನ್ನು ಕಳ್ಳರು ಕದ್ದಿದ್ದಾರೆ. ಈಗ ಡಿಕೆಹಳ್ಳಿ ಪ್ಲಾಂಟೇಶನ್‌ ಬಳಿ ತೊಟ್ಟಿಗಳನ್ನು ಇಟ್ಟಿದ್ದೇವೆ. ಗ್ರಾಮಾಂತರ ಪ್ರದೇಶವಾಗಿರುವುದರಿಂದ ಕಳ್ಳರು ಇಲ್ಲಿವರೆಗೆ ಬರುವುದಿಲ್ಲ ಎಂದು ಸಂಘಟನೆಯ ಮುಖ್ಯಸ್ಥ ಪ್ರಸನ್ನ ಕುಮಾರ ಸ್ವಾಮಿ ಹೇಳುತ್ತಾರೆ.

*

ಗಮನ ಸೆಳೆಯಲು ನಗರಸಭೆಗೆ ಪತ್ರ

ಜಿಂಕೆಗಳು ವಾಸವಾಗಿರುವ ಪ್ರದೇಶಗಳು ಅರಣ್ಯ ಇಲಾಖೆಗೆ ಸೇರುವುದಿಲ್ಲ. ಅದು ಬಿಜಿಎಂಎಲ್ ಜಾಗಕ್ಕೆ ಸೇರುವುದರಿಂದ ಅರಣ್ಯ ಇಲಾಖೆ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಅವಕಾಶವಿಲ್ಲ. ಜಿಂಕೆಗಳ ರಕ್ಷಣೆಗೆ ಬೇಲಿ ಹಾಕಲು ಕೂಡ ಸಾಧ್ಯವಿಲ್ಲ. ಬೀದಿ ನಾಯಿಗಳ ಕಾಟದಿಂದ ಜಿಂಕೆಗಳು ಸಾವಿಗೀಡಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬೀದಿ ನಾಯಿಗಳನ್ನು ನಿಯಂತ್ರಿಸಲು ರಾಬರ್ಟ್‌ಸನ್‌ಪೇಟೆ ನಗರಸಭೆಗೆ ಪತ್ರ ಬರೆಯಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಸಂತೋಷ್‌ಕುಮಾರ್ ತಿಳಿಸಿದರು.

*

ಜಿಂಕೆಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಬಡಾವಣೆಗಳ ಬಳಿ ನೀರಿಗಾಗಿ ಅರಸಿಬಂದಾಗ ಬೀದಿನಾಯಿಗಳು ಹಿಂಡು ಹಿಂಡಾಗಿ ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತಿವೆ

ರಾಜ, ವಾಯ್ಸ್‌ ಫಾರ್ ವೈಡ್ ಲೈಫ್‌ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.