ADVERTISEMENT

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್. ರಾಜಣ್ಣ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 13:59 IST
Last Updated 28 ಜೂನ್ 2024, 13:59 IST
 ಕೆ.ಎನ್ ರಾಜಣ್ಣ
 ಕೆ.ಎನ್ ರಾಜಣ್ಣ   

ತುಮಕೂರು: ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸುವಂತೆ ಒತ್ತಾಯಿಸುತ್ತಾ ಬಂದಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜಕಾರಣದಲ್ಲಿ ಯಾವ ಸಮಯದಲ್ಲಿ ಏನೂ ಬೇಕಾದರೂ ಆಗಬಹುದು. ಕೆಪಿಸಿಸಿ ಅಧ್ಯಕ್ಷರಾಗುವಂತೆ ಹೇಳಿದರೆ ಒಪ್ಪಿಕೊಳ್ಳುತ್ತೇನೆ. ಸಚಿವ ಸ್ಥಾನ ಬಿಟ್ಟು ಅಧ್ಯಕ್ಷರಾಗಲು ಯಾರೂ ಮುಂದೆ ಬರುವುದಿಲ್ಲ. ನಾನು ಸಚಿವ ಸ್ಥಾನ ಬಿಟ್ಟು ಬರುತ್ತೇನೆ. ಯಾವಾಗ ಎಂಬುದನ್ನು ಹೈಕಮಾಂಡ್ ನಿರ್ಧರಿಸಬೇಕು’ ಎಂದು ಹೇಳಿದರು.

‘ಹೆಚ್ಚುವರಿ ಉಪಮುಖ್ಯಮಂತ್ರಿಗಳನ್ನು ನೇಮಿಸುವಂತೆ ಕೇಳುವುದರಲ್ಲಿ ತಪ್ಪೇನೂ ಇಲ್ಲ. ನಾವು ಕೇಳದೆ ಇದ್ದರೆ ಹೈಕಮಾಂಡ್ ಗಮನಕ್ಕೆ ಹೋಗುವುದಿಲ್ಲ. ಅದಕ್ಕಾಗಿ ಹೋರಾಟ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಪದೇಪದೇ ಈ ಬಗ್ಗೆ ಕೇಳುತ್ತಲೇ ಇರುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ರಾಜಣ್ಣ ಮುಂದೆ ಬಂದರೆ ಮಠ ಮಾಡಿಕೊಡಲಾಗುವುದು’ ಎಂದು ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಯಾವ ಸ್ವಾಮೀಜಿ, ದೇಶದಲ್ಲಿ ಬಹಳ ಜನ ಸ್ವಾಮೀಜಿಗಳು ಇದ್ದಾರೆ. ಸಾಕಷ್ಟು ಸ್ವಾಮೀಜಿಗಳನ್ನು ನೋಡಿದ್ದೇನೆ. ಬೆವರು ಸುರಿಸದೆ ಜೀವನ ಮಾಡುವಂತಹ ಸ್ವಾಮೀಜಿಗಳು ನನಗೆ ಸಲಹೆ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಸೋಲಿಗೆ ಚಂದ್ರಶೇಖರನಾಥ ಸ್ವಾಮೀಜಿಯೂ ಕಾರಣರಾಗಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ವಿಶ್ವ ಒಕ್ಕಲಿಗರ ಮಠವನ್ನು ಸ್ಥಾಪಿಸಿದ್ದು ಎಚ್.ಡಿ.ದೇವೇಗೌಡ. ಚುನಾವಣೆಯಲ್ಲಿ ಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಪರ ಕೆಲಸ ಮಾಡಿ, ಈಗ ತಮ್ಮ ತಪ್ಪು ಮುಚ್ಚಿಕೊಳ್ಳಲು ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಕೇಳುತ್ತಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.