ADVERTISEMENT

ಕೊರಟಗೆರೆ: ವಾಲ್ಮೀಕಿ ಪುತ್ಥಳಿ ತೆರವು ಖಂಡಿಸಿ ಧರಣಿ

ಕೊರಟಗೆರೆ ಬಸ್ ನಿಲ್ದಾಣ ವೃತ್ತದಲ್ಲಿ ರಾತ್ರೋರಾತ್ರಿ ಏಕಾಏಕಿ ಪುತ್ಥಳಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 14:04 IST
Last Updated 17 ಅಕ್ಟೋಬರ್ 2024, 14:04 IST
ಪ್ರತಿಭಟನೆಯಲ್ಲಿ ನಿರತರಾಗಿದ್ದ ವಾಲ್ಮೀಕಿ ಸಮಾಜದ ಮುಖಂಡರನ್ನು ಮನವೊಳಿಸಲು ಯತ್ನಿಸಿದ ಅಧಿಕಾರಿಗಳು
ಪ್ರತಿಭಟನೆಯಲ್ಲಿ ನಿರತರಾಗಿದ್ದ ವಾಲ್ಮೀಕಿ ಸಮಾಜದ ಮುಖಂಡರನ್ನು ಮನವೊಳಿಸಲು ಯತ್ನಿಸಿದ ಅಧಿಕಾರಿಗಳು    

ಕೊರಟಗೆರೆ: ಇಲ್ಲಿನ ಪಟ್ಟಣ ಪಂಚಾಯಿತಿ ಮುಂಭಾಗದ ಬಸ್ ನಿಲ್ದಾಣ ವೃತ್ತದಲ್ಲಿ ರಾತ್ರೋರಾತ್ರಿ ಏಕಾಏಕಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಸ್ಥಾಪನೆ ಮಾಡಿದ್ದನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ವಾಲ್ಮೀಕಿ ಸಮುದಾಯದ ಮುಖಂಡರು ಬುಧವಾರ ಮಧ್ಯರಾತ್ರಿಯಿಂದ ಅಹೋರಾತ್ರಿ ಧರಣಿ ನಡೆಸಿದರು.

ಅ.16ರಂದು ತಡರಾತ್ರಿ 11.15ಕ್ಕೆ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಧಿಡೀರ್ ಪ್ರತಿಷ್ಟಾಪ‍ನೆ ಮಾಡಲಾಗಿತ್ತು. ಕೂಡಲೇ ವಿಷಯ ತಿಳಿದ ಪೊಲೀಸ್, ಕಂದಾಯ ಮತ್ತು ಪ.ಪಂ ಅಧಿಕಾರಿಗಳು ಎಚ್ಚೆತ್ತುಕೊಂಡು ಅನುಮತಿ ಪಡೆಯದೆ ಏಕಾಏಕಿ ಪ್ರತಿಮೆ ಸ್ಥಾಪನೆ ಮಾಡುವುದು ಕಾನೂನು ಬಾಹಿರ ಎಂದು ಪ್ರತಿಮೆ ತೆರವುಗೊಳಿಸಿದರು.

ಕೂಡಲೇ ಈ ವಿಚಾರ ವಾಲ್ಮೀಕಿ ಸಮುದಾಯದ ಮುಖಂಡರಿಗೆ ತಿಳಿದು, ತಕ್ಷಣವೇ ವೃತ್ತದ ಬಳಿ ನೂರಾರು ಜನ ಸೇರಿ ವಾಲ್ಮೀಕಿ ಪ್ರತಿಮೆ ಅದೇ ಸ್ಥಳದಲ್ಲೇ ಪ್ರತಿಷ್ಠಾಪಿಸಬೇಕು ಎಂದು ಪಟ್ಟು ಹಿಡಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಎಸ್ಪಿ ಮರಿಯಪ್ಪ, ತಹಶೀಲ್ದಾರ್ ಕೆ.ಮಂಜುನಾಥ, ತುಮಕೂರು ಡಿವೈಎಸ್ಪಿ ಕೆ.ಆರ್.ಚಂದ್ರಶೇಖರ್ ಸ್ಥಳಕ್ಕೆ ಧಾವಿಸಿ ಧರಣಿ ನಿರತರ ಮನವೊಲಿಸುವ ಪ್ರಯತ್ನ ನಡೆಸಿದರು.

ಗುರುವಾರ ಬೆಳಿಗ್ಗೆ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿತು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣವೂ ಸೃಷ್ಟಿಯಾಗಿತ್ತು. ಕಾನೂನು ರೀತಿಯಲ್ಲಿ ಪ್ರತಿಷ್ಠಾಪನೆ ಮಾಡುವ ಭರವಸೆ ನೀಡಿದರೂ ಪಟ್ಟು ಸಡಿಲಿಸಲಿಲ್ಲ. ತೆರವು ಮಾಡಿರುವ ವಾಲ್ಮೀಕಿ ಪ್ರತಿಮೆ ಸ್ಥಳಕ್ಕೆ ತಂದು ಪೂಜೆ ಸಲ್ಲಿಸಬೇಕು. ಇಲ್ಲೇ ಪ್ರತಿಷ್ಠಾಪಿಸಬೇಕು. ಅಲ್ಲಿವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂಬ ಬೇಡಿಕೆ ಮುಂದಿಟ್ಟರು. ನಂತರ ಪುತ್ಥಳಿ ತರಿಸಿ ಪೂಜೆಗೆ ಅವಕಾಶ ಮಾಡಿಕೊಡಲಾಯಿತು. ವೃತ್ತದ ಬಳಿ ನಾಮಫಲಕ ಕೂಡ ಅಳವಡಿಸಲಾಯಿತು. ಆಗ ‌‌ಪ್ರತಿಭಟನೆ ಕೈಬಿಟ್ಟು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರಾದ ಕೆ.ವಿ.ಮಂಜುನಾಥ್, ವಿನಯ್ ಕುಮಾರ್, ಪುಟ್ಟನರಸಪ್ಪ, ಲಕ್ಷ್ಮೀನಾರಾಯಣ, ಕೆ.ಆರ್.ಓಬಳರಾಜು, ರಂಗನಾಥ್, ಮಹೇಶ್, ರಂಗರಾಜು, ರಮೇಶ್, ಸತ್ಯನಾರಾಯಣ, ನಯಾಜ್ ಇತರರು ಇದ್ದರು.

ಸಮುದಾಯದ ಮುಖಂಡರು ಪ್ರತಿಭಟನೆ ವೇಳೆ ನಾಮಫಲಕ ಅಳವಡಿಸಿದರು.
ಸರ್ಕಲ್ ನಲ್ಲಿ ಬುಧವಾರ ತಡರಾತ್ರಿ ಸ್ಥಾಪಿಸಿದ್ದ ವಾಲ್ಮೀಕಿ ಪುತ್ತಳಿ.
ಸದ್ಯಕ್ಕೆ ಸಮಸ್ಯೆ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಇದನ್ನು ಪರಿಶೀಲಿಸಿ ಕಾನೂನು ರೀತಿ ಕ್ರಮ ವಹಿಸಲಾಗುವುದು.
ಕೆ.ಮಂಜುನಾಥ ತಹಶೀಲ್ದಾರ್

ಕ್ಷಣಾರ್ಧದಲ್ಲಿ ನಾಮಫಲಕ ತೆರವು

ವಾಲ್ಮೀಕಿ ಪುತ್ಥಳಿ ಮೆರವಣಿಗೆಯೊಂದಿಗೆ ಕಣ್ಣಪ್ಪ ದೇವಸ್ಥಾನದ ಕಡೆ ತೆರಳಿದ ಮೇಲೆ ಎಸ್ಪಿ ನೇತೃತ್ವದಲ್ಲಿ ಪೊಲೀಸರು ಕ್ಷಣಾರ್ಧದಲ್ಲಿ ವೃತ್ತದಲ್ಲಿ ಅಳವಡಿಸಿದ್ದ ‘ವಾಲ್ಮೀಕಿ ವೃತ್ತ’ ಎಂಬ ನಾಮಫಲಕ ಪುತ್ಥಳಿ ಸ್ಥಾಪನೆಗೆ ಹಾಕಿದ್ದ ಇಟ್ಟಿಗೆಗಳನ್ನು ತೆರವುಗೊಳಿಸಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮುಖಂಡರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. 500ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಸಮುದಾಯಕ್ಕೆ ಮೋಸ ವಾಲ್ಮೀಕಿ ಜಯಂತಿ ದಿನದಂದೇ ಪ್ರತಿಮೆ ತೆರವು ಮಾಡಿರುವುದು ಸಮುದಾಯಕ್ಕೆ ಮಾಡಿರುವ ಅವಮಾನ. ಪಟ್ಟಣದ ಕೆಲವು ವೃತ್ತದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಪುತ್ಥಳಿಗಳನ್ನು ಅಧಿಕಾರಿಗಳು ತೆರವುಗೊಳಿಸಬೇಕು. ಅಳವಡಿಸಿದ್ದ ನಾಮಫಲಕವನ್ನು ಎಲ್ಲರೂ ಹೋದ ಮೇಲೆ ಕಿತ್ತು ಹಾಕುವ ಮೂಲಕ ಸಮುದಾಯಕ್ಕೆ ಮೋಸ ಮಾಡಲಾಗಿದೆ.  ಕೆ.ವಿ. ಮಂಜುನಾಥ ವಾಲ್ಮೀಕಿ ಸಮುದಾಯದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.