ADVERTISEMENT

ಇಂದು ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್

ಕೊರೊನಾ ಪ್ರಭಾವ; ವಿದೇಶದಿಂದ ಬಂದವರ ಮಾಹಿತಿ ಕೊಡಲು ಮನವಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 15:46 IST
Last Updated 22 ಮಾರ್ಚ್ 2020, 15:46 IST

ತುಮಕೂರು: ಜಿಲ್ಲೆಯಲ್ಲಿ ಸೋಮವಾರವೂ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಲಿದೆ. ಕೆಎಸ್‌ಆರ್‌ಟಿಸಿ, ರೈಲು ಸಂಚಾರ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಖಾಸಗಿ ಬಸ್‌, ಸರಕು ಸಾಗಣೆ ವಾಹನಗಳು ಕೂಡ ಸಂಚಾರ ನಿಲ್ಲಿಸುವ ಸಾಧ್ಯತೆಯಿದೆ.

ಸರ್ಕಾರವು ಸೋಮವಾರ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಿಷೇಧಿಸಿ ಆದೇಶಿಸಿದೆ. ಸರ್ಕಾರದಿಂದ ಸೂಚನೆ ಬಂದ ನಂತರ ಮಂಗಳವಾರ ಬಸ್‌ ಸಂಚಾರ ಆರಂಭಿಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ತುಮಕೂರು ಕೆಎಸ್‌ಆರ್‌ಟಿಸಿ ವಿಭಾಗದ ವಿಭಾಗೀಯ ಅಧಿಕಾರಿ ಗಜೇಂದ್ರಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಉಳಿದಂತೆ ಆಸ್ಪತ್ರೆ, ಮೆಡಿಕಲ್, ಹಾಲಿನ ಡೇರಿ, ಪೆಟ್ರೋಲ್‌ ಬಂಕ್ ಸೇರಿದಂತೆ ಅಂಗಡಿ, ವ್ಯಾಪಾರ ಕೇಂದ್ರಗಳು ತೆರೆದಿರುತ್ತವೆ. ಹೋಟೆಲ್‌ನಲ್ಲಿ ಆಹಾರ ಪಾರ್ಸಲ್‌ ತೆಗೆದುಕೊಂಡು ಹೋಗುವುದಕ್ಕೆ ಮಾತ್ರವೇ ಅವಕಾಶ ಇರುತ್ತದೆ.

ADVERTISEMENT

ವಿದೇಶ ಪ್ರಯಾಣ, ಮಾಹಿತಿ ನೀಡಿ

ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಬೇಕಾಗಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಪ್ರವಾಸ ಮುಗಿಸಿ ಜಿಲ್ಲೆಗೆ ವಾಪಸ್ ಆಗುತ್ತಿರುವವರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ತಮ್ಮ ಮಾಹಿತಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಿದೇಶಗಳಿಂದ ಬರುವವರು ಕಡ್ಡಾಯವಾಗಿ ತಮ್ಮ ಮಾಹಿತಿ ನೀಡಿ ತಪಾಸಣೆಗೆ ಒಳಗಾಗಬೇಕು. ಒಂದು ವೇಳೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡದೇ ಇರುವವರು ಕಂಡು ಬಂದರೆ ಅಕ್ಕಪಕ್ಕದ ಮನೆಯವರು, ಸಾರ್ವಜನಿಕರು ಸಹಾಯವಾಣಿ 0816-2278387, 2251414 ಅಥವಾ ಮೊಬೈಲ್ 94498 43179, 94498 43064 ಕರೆ ಮಾಡಿ ತಿಳಿಸಬಹುದು ಎಂದು ಮನವಿ ಮಾಡಿದ್ದಾರೆ.

ಸೋಂಕು ಪತ್ತೆಯಾಗಿಲ್ಲ

ತುಮಕೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ277 ಮಂದಿಯ ಮೇಲೆ ನಿಗಾವಹಿಸಿದ್ದು, ಇಲ್ಲಿಯವರೆಗೂ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಭಯಪಡದೆ ಮುನ್ನೆಚ್ಚರಿಕೆ ಕ್ರಮವಾಗಿ ಜನರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಡಾ.ಬಿ.ಆರ್.ಚಂದ್ರಿಕಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.