ADVERTISEMENT

ತುಮಕೂರು: ಮುಗಿದ ಹತ್ತಾರು ಗಡುವು, ಬಸ್ ನಿಲ್ದಾಣ ಆರಂಭ ಇನ್ನೆಷ್ಟು ದಿನ?

ಮುಖ್ಯಮಂತ್ರಿ ಉದ್ಘಾಟಿಸಿ ನಾಲ್ಕು ತಿಂಗಳಾಯಿತು

​ಪ್ರಜಾವಾಣಿ ವಾರ್ತೆ
Published 21 ಮೇ 2024, 6:03 IST
Last Updated 21 ಮೇ 2024, 6:03 IST
ತುಮಕೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮುಂದುವರಿದ ಕಾಮಗಾರಿ
ತುಮಕೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮುಂದುವರಿದ ಕಾಮಗಾರಿ   

ತುಮಕೂರು: ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿ ಐದು ವರ್ಷ ಕಳೆದರೂ ಈವರೆಗೂ ಪೂರ್ಣಗೊಂಡಿಲ್ಲ. ಬಸ್‌ಗಳ ಸಂಚಾರ ಆರಂಭವಾಗದೆ, ಸಾರ್ವಜನಿಕರ ಪರದಾಟ ತಪ್ಪಿಲ್ಲ.

ಕಳೆದ ಐದು ವರ್ಷಗಳಿಂದಲೂ ಮುಂದಿನ ವರ್ಷ ಕೆಲಸ ಮುಗಿಯಲಿದೆ ಎಂದು ಹೇಳಿಕೊಂಡು ಬರಲಾಗಿದ್ದು, ಇನ್ನೂ ಕಾಮಗಾರಿ ನಡೆಯುತ್ತಲೇ ಇದೆ. ಶೀಘ್ರವೇ ಬಸ್ ಸಂಚಾರ ಆರಂಭವಾಗಲಿದೆ ಎಂದು ಹೇಳುತ್ತಿದ್ದರೂ ಕೆಲಸ ಮಾತ್ರ ಪೂರ್ಣಗೊಂಡಿಲ್ಲ. ದಿನ ದೂಡುವುದು ಮಾತ್ರ ತಪ್ಪಿಲ್ಲ. ಜನರ ಪರದಾಟ ಕಡಿಮೆಯಾಗಿಲ್ಲ. ಈಗ ಮೇ ತಿಂಗಳ ಅಂತ್ಯಕ್ಕೆ ಗಡುವು ನೀಡಲಾಗಿದ್ದು, ಇಂತಹ ಹಲವು ಗಡುವು ಮುಗಿದಿದೆ!

ಹಳೆಯ ಬಸ್ ನಿಲ್ದಾಣ ತೆರವುಗೊಳಿಸಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ₹111.46 ಕೋಟಿ ವೆಚ್ಚದಲ್ಲಿ, ಸುಮಾರು 65 ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಹೊಸದಾಗಿ ನಿಲ್ದಾಣ ನಿರ್ಮಿಸಲಾಗುತ್ತಿದೆ. ಆರಂಭದಲ್ಲಿ ₹90 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ತಡವಾಗಿದ್ದರಿಂದ ನಿರ್ಮಾಣ ವೆಚ್ಚವೂ ಹೆಚ್ಚಾಗಿದ್ದು, ಈಗ ₹111 ಕೋಟಿಯನ್ನು ದಾಟಿದೆ. ಕೆಲಸ ಮುಗಿಯುವುದರ ಒಳಗೆ ಮತ್ತಷ್ಟು ಏರಿಕೆಯಾಗಬಹುದು.

ADVERTISEMENT

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನವೇ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಹಲವು ಬಾರಿ ಸೂಚನೆಗಳನ್ನು ನೀಡಲಾಗಿತ್ತು. 2022ರ ಅಂತ್ಯಕ್ಕೆ ಕೆಲಸ ಪೂರ್ಣಗೊಳ್ಳಬೇಕಿತ್ತು. ಈಗ 2024ರ ಮಧ್ಯಭಾಗಕ್ಕೆ ಕಾಲಿಟ್ಟಿದ್ದರೂ ಇನ್ನೂ ಮುಗಿದಿಲ್ಲ. 2022ರ ಜನವರಿಯಲ್ಲಿ ಕಾಮಗಾರಿ ಪರಿಶೀಲಿಸಿದ ಅಂದಿನ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಕೆಲಸ ತಡವಾಗಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. 2023 ಆಗಸ್ಟ್‌ನಲ್ಲಿ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮೂರು ತಿಂಗಳಲ್ಲಿ ಮುಗಿಸಬೇಕು ಎಂದು ಗಡುವುದು ನೀಡಿದರು. ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ 2023 ನವೆಂಬರ್‌ಗೆ ಮುಗಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಈಗ ಜಿಲ್ಲಾಧಿಕಾರಿಯಾಗಿರುವ ಶುಭ ಕಲ್ಯಾಣ್ ಮೂರು ಬಾರಿ ಪರಿಶೀಲನೆ ನಡೆಸಿ ಗಡುವು ನೀಡಿದ್ದಾರೆ!

ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ (ಜನವರಿ 29ರಂದು) ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ, ದೇವರಾಜ ಅರಸು ಹೆಸರು ನಾಮಕರಣ ಮಾಡಿ ಹೋಗಿದ್ದಾರೆ. ಮುಖ್ಯಮಂತ್ರಿ ಉದ್ಘಾಟಿಸಿ ನಾಲ್ಕು ತಿಂಗಳು ಕಳೆದರೂ ಜನರ ಬಳಕೆಗೆ ಮುಕ್ತವಾಗಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಗೆ ಮುನ್ನ ಅತ್ಯುತ್ಸಾಹ ತೋರುವ ಜನಪ್ರತಿನಿಧಿಗಳು, ಚುನಾವಣೆ ಮುಗಿದ ನಂತರ ಅತ್ತ ಕಡೆಗೆ ಗಮನಕೊಟ್ಟು ಕೆಲಸ ಚುರುಕುಗೊಳಿಸುವತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ತುಮಕೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ

ಉತ್ತರ ಭಾಗದ ಕೊಂಡಿ

ಕಲ್ಯಾಣ ಕರ್ನಾಟಕ ಕಿತ್ತೂರು ಕರ್ನಾಟಕ ಭಾಗಕ್ಕೆ (ಸುಮಾರು ಅರ್ಧ ರಾಜ್ಯ) ತುಮಕೂರು ನಗರದ ಮೂಲಕವೇ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾದು ಹೋಗಬೇಕು. ದಿನನಿತ್ಯ ಹಗಲು– ರಾತ್ರಿ ಎನ್ನದೆ ದಿನದ 24 ಗಂಟೆಗಳ ಕಾಲವೂ ನೂರಾರು ಬಸ್‌ಗಳು ಸಂಚರಿಸುತ್ತವೆ. ತುಮಕೂರು ನಿಲ್ದಾಣ ಒಂದು ರೀತಿಯಲ್ಲಿ ಉತ್ತರ– ದಕ್ಷಿಣ ಭಾಗವನ್ನು ಬೆಸೆಯುವ ಕೊಂಡಿಯಂತಿದೆ.

ಇಷ್ಟೆಲ್ಲ ಅಗತ್ಯ ಮಹತ್ವ ಇದ್ದರೂ ಒಂದು ಬಸ್ ನಿಲ್ದಾಣ ನಿರ್ಮಿಸಲು ಐದು ವರ್ಷ ಸಮಯ ತೆಗೆದುಕೊಂಡಿದೆ. ನಗರದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಕೆಎಸ್‌ಆರ್‌ಟಿಸಿ ಡಿಪೋ ಇದ್ದ ಸ್ಥಳವನ್ನೇ ತಾತ್ಕಾಲಿಕ ಬಸ್ ನಿಲ್ದಾಣ ಮಾಡಲಾಗಿದೆ. ನಗರ ಸಾರಿಗೆ ಬಸ್‌ಗಳು ಇಲ್ಲಿಂದಲೇ ಸಂಚರಿಸುತ್ತವೆ. ಇಲ್ಲಿ ಬಸ್‌ಗಳು ಒಳಕ್ಕೆ ಹೋಗಿ ಹೊರಕ್ಕೆ ಬರಲು ಹರಸಾಹಸ ಪಡಬೇಕು. ಜನರು ಬಸ್ ಹತ್ತಲು ಪರದಾಡುವ ಸ್ಥಿತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.