ADVERTISEMENT

ಕುಣಿಗಲ್ | ಪೊಲೀಸರ ಕಾರ್ಯವೈಖರಿಗೆ ಖಂಡನೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 4:20 IST
Last Updated 21 ಜೂನ್ 2024, 4:20 IST
ಕುಣಿಗಲ್ ತಾಲ್ಲೂಕು ಸಂತೆಪೇಟೆಯಲ್ಲಿ ನಡೆದ ಜಿಲ್ಲಾಧಿಕಾರಿ ಜನಸ್ಪಂದನ ಸಭೆ ಮುಂದೆ ಪ್ರತಿಭಟನೆ ನಡೆಸಿದ ದಲಿತ ಕುಟುಂಬದ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ, ಶಾಸಕ ಡಾ.ರಂಗನಾಥ್ ಚರ್ಚಿಸಿದರು
ಕುಣಿಗಲ್ ತಾಲ್ಲೂಕು ಸಂತೆಪೇಟೆಯಲ್ಲಿ ನಡೆದ ಜಿಲ್ಲಾಧಿಕಾರಿ ಜನಸ್ಪಂದನ ಸಭೆ ಮುಂದೆ ಪ್ರತಿಭಟನೆ ನಡೆಸಿದ ದಲಿತ ಕುಟುಂಬದ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ, ಶಾಸಕ ಡಾ.ರಂಗನಾಥ್ ಚರ್ಚಿಸಿದರು   

ಕುಣಿಗಲ್: ಹುಲಿಯೂರುದುರ್ಗ ಪೊಲೀಸರ ಕಾರ್ಯವೈಖರಿ ಖಂಡಿಸಿ ಆರ್.ಬ್ಯಾಡರಹಳ್ಳಿ ದಲಿತ ಕುಟುಂಬದ ಸದಸ್ಯರು ಸಂತೆಪೇಟೆಯಲ್ಲಿ ನಡೆಯುತ್ತಿದ್ದ ಜಿಲ್ಲಾಧಿಕಾರಿ ಜನಸ್ಪಂದನ ಸಭೆಯ ಮುಂಭಾಗ ಪ್ರತಿಭಟನೆ ನಡೆಸಿದರು.

ಆರ್. ಬ್ಯಾಡರಹಳ್ಳಿ ಗ್ರಾಮದ ಗಂಗಮ್ಮ, ಮಮತಾ, ಸುಧಾ, ಗೌರಮ್ಮ, ಸುಶಿಲಮ್ಮ, ರಾಮಪ್ಪ, ತಿಮ್ಮರಾಜು, ಲಕ್ಕನಾಯಕ್ ರಾಮು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಜನಸ್ಪಂದನ ಸಭೆ ನಂತರ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಶಾಸಕ ಡಾ.ರಂಗನಾಥ್ ಬಳಿ ಅಳಲು ತೋಡಿಕೊಂಡರು. ‘ಜಮೀನು ವಿವಾದದಲ್ಲಿ ದಲಿತ ಕುಟುಂಬ ಹಾಗೂ ಬೇರೊಂದು ಕುಟುಂಬದ ನಡುವೆ ವಿವಾದವಿದೆ. ಜೂನ್‌ 15ರಂದು ಎರಡು ಗುಂಪಿನ ನಡುವೆ ಸಂಘರ್ಷ ಉಂಟಾಗಿ ಶಿವಲಿಂಗಯ್ಯ, ಶಂಭುಲಿಂಗೇ ಗೌಡ ಕುಟುಂಬದವರು, ರಮೇಶ್ ನಾಯಕ್ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ರಮೇಶ್ ನಾಯಕ್ ತೀವ್ರ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.

ADVERTISEMENT

‘ಘಟನೆಗೆ ಸಂಬಂಧಿಸಿದಂತೆ ದೂರು ನೀಡಲು ಹುಲಿಯೂರುದುರ್ಗ ಪೊಲೀಸ್‌ ಠಾಣೆಗೆ ಹೋದಾಗ ಸ್ಪಂದಿಸಲಿಲ್ಲ. ನಾವು ಬರೆದ ದೂರಿಗೆ ಬದಲಾಗಿ ಅವರ ಹೇಳಿಕೆಯಂತೆ ದೂರು ಬರಸಿಕೊಂಡರು. ನಮ್ಮ ದೂರಿಗಿಂತ ಮೊದಲೇ ಹಲ್ಲೆ ಮಾಡಿದವರಿಂದ ದೂರು ಪಡೆದು ಪ್ರಕರಣ ದಾಖಲಿಸಿದ್ದಾರೆ. ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದರೂ, ಆರೋಪಿಗಳನ್ನು ಬಂಧಿಸಿಲ್ಲ. ಪೊಲೀಸರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ವಿವಾದಿತ ಜಮೀನಿನ ಸರ್ವೆಯನ್ನು ಕೂಡಲೇ ಕೈಗೊಂಡು ಸಮಸ್ಯೆ ಬಗೆಹರಿಸುವಂತೆ ತಹಶೀಲ್ದಾರ್ ವಿಶ್ವನಾಥ್‌ ಅವರಿಗೆ ಸೂಚಿಸಿದರು.

ಶಾಸಕ ಡಾ.ರಂಗನಾಥ್, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿವೈಎಸ್‌ಪಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.