ಕುಣಿಗಲ್: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದಾಗಿ ಪುರಸಭೆ ವ್ಯಾಫ್ತಿಯಲ್ಲಿ ಆಶ್ರಯ ನಿವೇಶನಗಳಿಗಾಗಿ ಎರಡು ದಶಕಗಳಿಂದ ಸಾವಿರಾರು ಫಲಾನುಭವಿಗಳು ಕಾಯುವಂತಾಗಿದೆ.
2004ರ ವಿಧಾನಸಭೆ ಚುನಾವಣೆಗೂ ಮುನ್ನ ಅಂದಿನ ಶಾಸಕ ಎಸ್.ಪಿ.ಮುದ್ದಹನುಮೇಗೌಡ ಅವರು ಪಟ್ಟಣದಲ್ಲಿ ಸೂರಿಲ್ಲದವರಿಗೆ ಆಶ್ರಯ ನಿವೇಶನ ನೀಡುವ ಉದ್ದೇಶದಿಂದ ತಮ್ಮ ಅಧಿಕಾರವಧಿಯ ಕೊನೆಯ ದಿನಗಳಲ್ಲಿ ಬಿದನಗೆರೆಯಲ್ಲಿ 14 ಎಕರೆ 39 ಗುಂಟೆ, ಮಲ್ಲಾಘಟ್ಟದಲ್ಲಿ 9 ಎಕರೆ 18 ಗುಂಟೆ ಜಮೀನು ಗುರುತಿಸಿ ಆಶ್ರಯ ನಿವೇಶನ ವಿತರಣೆಗೆ ಕ್ರಮ ಕೈಗೊಂಡರು. ತುರಾತುರಿಯಲ್ಲಿ ನಿರ್ಣಯ ಕೈಗೊಂಡು 1,056 ಫಲಾನುಭವಿಗಳಿಗೆ ನಿವೇಶನ ಮಂಜುರಾತಿಯನ್ನು ಚುನಾವಣೆಗೂ ಮುನ್ನ ವಿತರಿಸಿದರು.
ನಂತರ ನಡೆದ ಚುನಾವಣೆಯಲ್ಲಿ ಎಚ್.ನಿಂಗಪ್ಪ ಆಯ್ಕೆಯಾದರು. ನಿವೇಶನಗಳ ವಿತರಣೆಯಲ್ಲಿ ಸಾಕಷ್ಟು ಲೋಪ ಕಂಡುಬಂದಿದ್ದು, ಕಂದಾಯ ಇಲಾಖೆಯಿಂದ ಜಮೀನು ಪಡೆದು ಆಶ್ರಯ ನಿವೇಶನಗಳಿಗೆ ಅಧಿಕೃತವಾಗಿ ಮೀಸಲಿಡದೆ, ನಿವೇಶನ ವಿಂಗಡಣೆ ಮಾಡದ ಕಾರಣ ಮಂಜೂರಾತಿ ಪತ್ರಗಳಿಗೆ ಮಾನ್ಯತೆ ದೊರೆಯದೆ ಇಡೀ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ನಂತರ ಬಿ.ಬಿ.ರಾಮಸ್ವಾಮಿಗೌಡ ಶಾಸಕರಾಗಿ ಆಯ್ಕೆಯಾದರು. ಆಶ್ರಯ ಸಮಿತಿಯ ಸಭೆಗಳನ್ನು ನಡೆಸಿದರು. ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಒಂದೇ ಕುಟುಂಬದ ವ್ಯಕ್ತಿಗಳಿಗೆ, ಹೊರ ಊರಿನವರಿಗೆ ನಿವೇಶನಗಳ ಹಂಚಿಕೆ ಮಾಡಿರುವ ಲೋಪಗಳು ಕಂಡುಬಂದವು. ನಿವೇಶನ ವಿಂಗಡಣೆಯಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳದ ಕಾರಣ ಇಡೀ ಪ್ರಕ್ರಿಯೆಗಳನ್ನು ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು. ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸುವ ತೀರ್ಮಾನಿಸಿ ಮತ್ತೆ ಅರ್ಜಿಗಳನ್ನು ಸ್ವೀಕರಿಸಲಾಯಿತು.
ನಂತರ ಡಿ.ನಾಗರಾಜಯ್ಯ ಶಾಸಕರಾದರು. ಹತ್ತು ಹಲವು ಸಭೆಗಳು ನಡೆದರೂ, ಆಶ್ರಯ ನಿವೇಶನದ ಗೊಂದಲಗಳನ್ನು ಪರಿಹರಿಸಲು ಸಾಧ್ಯವಾಗದ ಕಾರಣ ನಿವೇಶನ ಹಂಚಿಕೆ ಪ್ರಕ್ರಿಯೆಗಳು ಸ್ಥಗಿತಗೊಂಡವು.
ಡಾ.ರಂಗನಾಥ್ ಶಾಸಕರಾಗಿ ಆಯ್ಕೆಯಾದ ನಂತರವೂ ಸಮಸ್ಯೆ ಮುಂದುವರೆದಿದೆ. ಸಮಸ್ಯೆಗಳನ್ನು ಬಗೆಹರಿಸಲು ಸಂಸದರಾಗಿದ್ದ ಡಿ.ಕೆ.ಸುರೇಶ ಯತ್ನಿಸಿದರು. ಮೊದಲಿಗೆ ನಿವೇಶನಗಳ ಜಮೀನುಗಳ ಹಸ್ತಾಂತರ ಪ್ರಕ್ರಿಯೆಗಳು ನಡೆದು ಬಿದನಗೆರೆ ವ್ಯಾಪ್ತಿಯ ಜಮೀನು 2003-04 ರಲ್ಲಿ, ಮಲ್ಲಾಘಟ್ಟ ವ್ಯಾಪ್ತಿಯ ಜಮೀನು 2001ರಲ್ಲಿ ಹಸ್ತಾಂತರವಾಗಿದ್ದರೂ, ಅಧಿಕೃತವಾಗಿ ಪುರಸಭೆ ವಶಕ್ಕೆ ಪಡೆಯಲಾಗಿದೆ. ನಂತರ ಜಮೀನನ್ನು ಸಮತಟ್ಟು ಮಾಡಿ (ಲೇಔಟ್) ವ್ಯವಸ್ಥಿತವಾದ ನಿವೇಶನಗಳ ವಿಂಗಡಣೆಗೆ ಗಮನಹರಿಸಿ ಸರ್ಕಾರದಿಂದ ವಿಶೇಷ ಅನುದಾನ ತಂದು ₹6 ಕೋಟಿ ವೆಚ್ಚದಲ್ಲಿ ನಿವೇಶನ ವಿಂಗಡಣೆ ಕಾರ್ಯ ಪೂರ್ಣಗೊಂಡಿದೆ. ಲೋಕಸಭಾ ಚುನಾವಣೆಗೂ ಮುನ್ನ ಹಂಚಿಕೆಗೆ ಕ್ರಮ ಕೈಗೊಂಡಿದ್ದರೂ, ಚುನಾವಣೆ ಘೋಷಣೆಯಾಗದ ಕಾರಣ ಹಂಚಿಕೆ ಪ್ರಕ್ರಿಯೆಗೆ ವಿರಾಮ ದೊರೆತಿದೆ.
ಪುರಸಭೆಗೆ ಈಗಾಗಲೇ 2017-18ರಲ್ಲಿ ನಾಲ್ಕು ಸಾವಿರ ಅರ್ಜಿಗಳು ನೀಡಿದ್ದು, 2,065 ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಫಲಾನುಭವಿಗಳು ಸಲ್ಲಿಸಿದ್ದಾರೆ. ಆನ್‌ಲೈನ್ ಮೂಲಕ 3,017 ಅರ್ಜಿಗಳು ಸ್ವೀಕೃತವಾಗಿದ್ದು, ಪರಿಶೀಲನೆ ಮುಂದುವರೆದಿದೆ.
ಹದಿನೈದು ವರ್ಷಗಳಿಂದ ಆಶ್ರಯ ನಿವೇಶನಕ್ಕಾಗಿ ಹಲವು ಬಾರಿ ಅರ್ಜಿ ಸಲ್ಲಿಸಿದ್ದೇನೆ. ಪ್ರತಿಬಾರಿಯೂ ದಾಖಲೆಗಳ ಪ್ರತಿಗಾಗಿ ನೂರಾರು ರೂಪಾಯಿ ವೆಚ್ಚವಾಗಿದೆ. ನಿವೇಶನದ ಬಗ್ಗೆ ಯಾರಿಂದಲೂ ಯಾವ ಮಾಹಿತಿಯೂ ಬಂದಿಲ್ಲ. ನನ್ನ ಜತೆ ಅರ್ಜಿ ಸಲ್ಲಿಸಿದ ಕೆಲವರು ಆಶ್ರಯ ನಿವೇಶನದ ಆಸೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ ಎನ್ನುತ್ತಾರೆ ಮಲ್ಲಿಪಾಳ್ಯ ನಿವಾಸಿಯ ಆಂಜನಮ್ಮ.
ಖುದ್ದು ಭೇಟಿ ನೀಡಿ ಪರಿಶೀಲನೆ
ಶಾಸಕ ಡಾ.ರಂಗನಾಥ್ ಪ್ರತಿಕ್ರಿಯಿಸಿ, ಆಶ್ರಯ ಫಲಾನುಭವಿಗಳ ಆಯ್ಕೆ ಸುಲಭದ ಕಾರ್ಯವಲ್ಲ. ಪಟ್ಟಣದಲ್ಲಿ ಬಡವರು ಹೆಚ್ಚಿದ್ದಾರೆ. ಎಲ್ಲರಿಗೂ ನಿವೇಶನ ನೀಡಬೇಕು ಎಂಬ ಮಹದಾಸೆ ಇದೆ. ಈಗಾಗಲೇ ಐದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಪ್ರತಿಯೊಬ್ಬ ಅರ್ಜಿದಾರನ ಮನೆಗೂ ಖುದ್ದು ಭೇಟಿ ನೀಡಿ ಪರಿಶೀಲಿಸಿ ಅರ್ಹರನ್ನು ಗುರುತಿಸಲಾಗುವುದು. ಈಗಾಗಲೇ ಗುರುತಿಸಲಾಗಿರುವ 24 ಎಕರೆ ಜಮೀನು ಜತೆಗೆ ಇನ್ನೂ ಹತ್ತು ಎಕರೆ ಜಾಗ ಗುರುತಿಸಿ ಅರ್ಹರಿಗೆಲ್ಲ ನಿವೇಶನ ನೀಡಲು ಚಿಂತಿಸಲಾಗಿದೆ. ಜಮೀನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಲೇಔಟ್ ನಿರ್ಮಾಣದಲ್ಲಿ ಅವ್ಯವಹಾರ
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಪ್ರತಿಕ್ರಿಯಿಸಿ, 2003ರಲ್ಲಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ ಚುನಾವಣೆಗೂ ಮುನ್ನ ಆತುರದಲ್ಲಿ ಆಶ್ರಯ ನಿವೇಶನಗಳನ್ನು ವ್ಯವಸ್ಥಿತವಾಗಿ ಹಂಚದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ನಂತರ ಬಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹ ಬಡವರಿಗೆ ನಿವೇಶನಗಳನ್ನು ನೀಡಲು ಇಚ್ಛಾಶಕ್ತಿ ತೋರದೆ ಸಮಸ್ಯೆ ಮುಂದುವರೆದಿದೆ. ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಡಾ.ರಂಗನಾಥ್ ಪ್ರತಿ ಚುನಾವಣೆಗೂ ಮುನ್ನ ಪಟ್ಟಣದ ಜನರಿಗೆ ಆಶ್ರಯ ನಿವೇಶನಗಳ ಹೆಸರಲ್ಲಿ ವಂಚಿಸುತ್ತಿದ್ದಾರೆ. 24 ಎಕರೆ ಜಾಗವನ್ನು ₹6 ಕೋಟಿ ವೆಚ್ಚದಲ್ಲಿ ಲೇಔಟ್ ಮಾಡುವ ನೆಪದಲ್ಲಿ ವ್ಯಾಪಕ ಅವ್ಯವಹಾರ ಮಾಡಿದ್ದಾರೆ. ಲೇಔಟ್ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ದಾಖಲೆಗಳೊಂದಿಗೆ ಹೋರಾಟ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.