ಕೊರಟಗೆರೆ: ತಾಲ್ಲೂಕಿನ ಚನ್ನರಾಯದುರ್ಗಾ ಹೋಬಳಿ ಕುರಂಕೋಟೆ ಗ್ರಾಮ ಪಂಚಾಯಿತಿಯ ಕುರುಬರಹಳ್ಳಿ ಗ್ರಾಮದ ಜಾತ್ರೆ ವಿಚಾರ ಎರಡು ಗುಂಪುಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಗ್ರಾಮದ ಮಹಿಳೆಯರ ಗುಂಪೊಂದು ಮಂಗಳವಾರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ‘ಕಾಣದ ಕೈಗಳು ರಾಜಕೀಯ ಬೆರೆಸಿ ಗುಂಪು ಹಾಗೂ ಜಾತಿ-ಜಾತಿ ನಡುವೆ ವೈಶಮ್ಯ ಬಿತ್ತುತ್ತಿದ್ದಾರೆ’ ಎಂದು ಆರೋಪಿಸಿ ಮನವಿ ಸಲ್ಲಿಸಿದರು.
ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ ಮಹಿಳೆಯರು ‘ವಿನಾ ಕಾರಣ ಗ್ರಾಮದ ಜಾತ್ರೆ ವಿಚಾರಕ್ಕೆ ಸಚಿವ ಜಿ. ಪರಮೇಶ್ವರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಹೆಸರು ಬಳಸಿ ಅವರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ. ಗ್ರಾಮಕ್ಕೂ ಇವರಿಗೂ ಸಂಬಂಧವೇ ಇಲ್ಲ. ಆದರೂ ರಾಜಕೀಯ ದುರುದ್ದೇಶದಿಂದ ಅವರ ಹೆಸರಿಗೆ ಕಳಂಕ ತರುತ್ತಿದ್ದಾರೆ. ಗ್ರಾಮದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಜಾತ್ರಾ ಮಹೋತ್ಸವದ ಕರ ಪತ್ರದಲ್ಲಿ ಹೆಸರು ಬಿಟ್ಟಿರುವ ಕಾರಣಕ್ಕೆ ಊರಿನ ಗೌಡರ ವಿರುದ್ಧ ಸುಳ್ಳು ಜಾತಿನಿಂದನೆ ಪ್ರಕರಣ ದಾಖಲಿಸಲಾಗಿದೆ’ ಎಂದು ಆರೋಪಿಸಿದರು.
ಕುರುಬರಹಳ್ಳಿ ಗ್ರಾಮದ ಇನ್ನೊಂದು ಗುಂಪು ‘ಗ್ರಾಮದಲ್ಲಿ ಜಾತ್ರೆ ಮಾಡಲು ಊರಿನ ಮುಖ್ಯಸ್ಥರು ಅನುವು ಮಾಡಿಕೊಡುತ್ತಿಲ್ಲ. ದೇವರ ಜಾತ್ರೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ. ಎರಡು ವರ್ಷದಿಂದ ಜಾತ್ರೆ ಮಾಡಲು ಆಗಿಲ್ಲ. ಜಾತ್ರೆಗೆ ಊರಿನ ಗೌಡರೆ ಅಡ್ಡಲಾಗಿದ್ದಾರೆ. ಊರಿನ ಸಮಸ್ಯೆ ಬಗೆಹರಿಸಿ ಜಾತ್ರೆಗೆ ಅನುವು ಮಾಡಿಕೊಡಬೇಕು’ ಎಂದು ತಾಲ್ಲೂಕು ಕಚೇರಿ ಎದುರು ಸೋಮವಾರ ಧರಣಿ ನಡೆಸಿ ತಹಶೀಲ್ದಾರ್‌ಗೆ ಮನವಿ ಮಾಡಿದ್ದರು.
‘ಜಾತ್ರೆ ವಿಚಾರವಾಗಿ ನನ್ನದು ಯಾವುದೇ ತಕರಾರು ಇಲ್ಲ. ಗ್ರಾಮದ ಎಲ್ಲರೂ ಸೇರಿ ಜಾತ್ರೆ ಮಾಡಲು ಮನವಿ ಮಾಡಿದ್ದೇನೆ. ಆದರೆ ಗ್ರಾಮದ ಕೆಲವರು ಗುಂಪುಗಾರಿಕೆ ಮಾಡಿಕೊಂಡು ಸಮಸ್ಯೆ ತಂದೊಡಿದ್ದಾರೆ. ಇದನ್ನು ಬಗೆಹರಿಸಿ ಗ್ರಾಮದಲ್ಲಿ ಶಾಂತಿ ಕಾಪಾಡಿ ಜಾತ್ರೆಯನ್ನು ನಿರ್ವಿಘ್ನವಾಗಿ ನಡೆಸಿಕೊಡುವಂತೆ ಊರಿನ ಮುಖ್ಯಸ್ಥರು ತಹಶೀಲ್ದಾರರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.