ತೋವಿನಕೆರೆ: ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಕೆಲಸಗಳಿಗೆ ಕಾರ್ಮಿಕರ ಕೊರತೆ ತೀವ್ರವಾಗಿದೆ. ಊಟ, ತಿಂಡಿ ಜೊತೆ ಪುರುಷನಿಗೆ ₹800, ಮಹಿಳೆಯರಿಗೆ ₹450 ದಿನಕೂಲಿ ನೀಡಿದರೂ ಕಾರ್ಮಿಕರು ಸಿಗುತ್ತಿಲ್ಲ.
ಆಳುಗಳ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಒಂದೆಡೆ ಹಿನ್ನಡೆಯಾದರೆ, ಸಂಸ್ಕರಣೆಗೆ ಕುಡುಕರ ಹಾವಳಿ ಅಡ್ಡಿಯಾಗಿದೆ.
ಸುತ್ತಮುತ್ತಲಿನ ನೂರಾರು ಎಕರೆಯ ಪ್ರದೇಶಗಳಲ್ಲಿ ರಾಗಿ ಕಟಾವಿಗೆ ಬಂದಿದ್ದು, ಕೃಷಿ ಕಾರ್ಮಿಕರ ಕೊರತೆ, ಹೆಚ್ಚಾಗಿರುವ ದಿನಕೂಲಿ, ತುಂತುರು ಮಳೆಯಿಂದಾಗಿ ರೈತರು ಅತಂಕಗೊಂಡಿದ್ದಾರೆ.
ರಾಗಿ ಕಟಾವಿಗೆ ಮಹಿಳಾ ಕಾರ್ಮಿಕರು ಹೆಚ್ಚು ಬೇಕಾಗಿದೆ. 15-20 ಕಿ.ಮೀ ದೂರದಿಂದ ವಾಹನ ವ್ಯವಸ್ಥೆ ಮಾಡಿ ಕರೆದುಕೊಂಡು ಬರಲಾಗುತ್ತಿದೆ. ಬೆಳಿಗ್ಗೆ ತಿಂಡಿ, ಮದ್ಯಾಹ್ನದ ಊಟ, ಎರಡು ಸಮಯ ಟೀ, ಅಡಿಕೆ– ಎಲೆ, ನಾಲ್ಕು ಗಂಟೆಗೆ ಕಡ್ಲೆ, ಪುರಿ ಕಾರದ ಮಿಶ್ರಣ ನೀಡಲಾಗುತ್ತಿದೆ.
ಕೆಲವರು ಬೆಳಿಗ್ಗೆ ಏಳರಿಂದ ಸಂಜೆ ಐದು ಗಂಟೆವರೆಗೂ ಕಟಾವು ಮಾಡಲು ಸೌಲಭ್ಯ ನೀಡಿ ₹600 ಕೊಟ್ಟಿರುವ ಉದಾಹರಣೆಗಳಿವೆ. ಮುಯ್ಯಾಳು ಪದ್ಧತಿ ಅನುಸರಿಸಿಕೊಂಡು ಬಂದವರಲ್ಲಿ ಮಾತ್ರ ಕೃಷಿ ಕೆಲಸಗಳು ಸರಾಗವಾಗಿ ನಡೆಯುತ್ತಿವೆ.
ಕುರಂಕೋಟೆ, ಕೆಸ್ತೂರು ಸಿದ್ಧರಬೆಟ್ಟ, ಬುಕ್ಕಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಗೂಲಿ ಮೊದಲಿಗಿಂತ ₹150 ಹೆಚ್ಚಿದೆ.
‘ರಾಗಿ ಕಟಾವಿಗೆ ಮಹಿಳಾ ಕಾರ್ಮಿಕರಿಗೆ ₹500 ನೀಡಿದ್ದೇವೆ. ಕಟಾವಿಗೆ ಒಟ್ಟು ₹6,500 ಖರ್ಚಾಗಿದೆ. ಐದು ಮೂಟೆ ರಾಗಿ ಅಗಬಹುದು’ ಎನ್ನುತ್ತಾರೆ ತೋವಿನಕೆರೆ ರೈತ ಮಹಿಳೆ.
ಸಂಸ್ಕರಣೆಗೆ ಅಡ್ಡಿಯಾದ ಕುಡುಕರ ಹಾವಳಿ
ನೂರಾರು ವರ್ಷಗಳಿಂದ ಬಂಡೆ ಮೇಲೆ ರಾಗಿ ತೆನೆ ಶುಚಿ ಸಂಸ್ಕರಣೆ ಮಾಡುತ್ತಿದ್ದೇವೆ. ಮೂರು ವರ್ಷಗಳಿಂದ ಬಂಡೆಗಳ ರಾತ್ರಿ ವೇಳೆ ಕುಡುಕರು ಬಂದು ಕುಡಿದು ಖಾಲಿ ಬಾಟಲ್‌ಗಳನ್ನು ಅಲ್ಲಿಯೇ ಒಡೆದು ಹಾಕುತ್ತಿದ್ದಾರೆ. ಹಲವು ಬಾರಿ ತಹಶೀಲ್ದಾರ್ ಪೋಲಿಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರಾಗಿ ಜೊತೆ ಗಾಜಿನ ಚೂರು ಮಿಶ್ರಣವಾಗುವುದನ್ನು ಜ್ಞಾಪಿಸಿಕೊಂಡರೆ ಭಯವಾಗುತ್ತದೆ ಎನ್ನುತ್ತಾರೆ ಸ್ಥಳೀಯ ರೈತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.