ADVERTISEMENT

ತುಮಕೂರು ವಿ.ವಿ ಘಟಿಕೋತ್ಸವ: ಕೂಲಿಕಾರರ ಮಗಳಿಗೆ 3 ಚಿನ್ನ

ತುಮಕೂರು ವಿ.ವಿಯಲ್ಲಿ ಇಂದು ನಡೆಯುವ ಘಟಿಕೋತ್ಸವದಲ್ಲಿ ಪದಕ ಪ್ರದಾನ

ಪೀರ್‌ ಪಾಶ, ಬೆಂಗಳೂರು
Published 25 ಫೆಬ್ರುವರಿ 2020, 19:30 IST
Last Updated 25 ಫೆಬ್ರುವರಿ 2020, 19:30 IST
ಟಿ.ಡಿ.ಲಾವಣ್ಯ
ಟಿ.ಡಿ.ಲಾವಣ್ಯ   

ತುಮಕೂರು: ನಗರದ ಎಂ.ಜಿ.ರಸ್ತೆಯ ಚಿನ್ನದ ಅಂಗಡಿಯೊಂದರಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವ ದಶರಥ ಅವರಿಗೆ ಸೋಮವಾರ ಸಿಹಿ ಸುದ್ದಿಯೊಂದು ತಲುಪಿತು. ತಮ್ಮ ಮಗಳು ಟಿ.ಡಿ.ಲಾವಣ್ಯ, ಕನ್ನಡ ಸ್ನಾತಕೋತ್ತರ ಪದವಿಯಲ್ಲಿ 3 ಚಿನ್ನದ ಪದಕಗಳನ್ನು ಪಡೆದಿದ್ದಾಳೆ ಎಂದು ಕೇಳಿದ ತಕ್ಷಣ ಅವರ ಕಣ್ಣುಗಳಲ್ಲಿ ನೀರು ಜಿನುಗಿತು.

ದಶರಥ–ನಾಗರತ್ನ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳು. ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ವಿವಾಹವಾಗಿದೆ. ಪೋಷಕರ ಪ್ರೋತ್ಸಾಹದಿಂದ ಉನ್ನತ ಶಿಕ್ಷಣಕ್ಕಾಗಿ ಲಾವಣ್ಯ ತುಮಕೂರು ವಿಶ್ವವಿದ್ಯಾನಿಲಯದ ಮೆಟ್ಟಿಲು ಹತ್ತಿದರು.

ದಶರಥ ದಂಪತಿ ಅನಕ್ಷರಸ್ಥರಾದರೂ ಅಕ್ಷರದ ಮೌಲ್ಯ ಅರಿತು ಮಗಳ ಬೆನ್ನು ತಟ್ಟಿದರು. ದಿನಗೂಲಿಯಲ್ಲೇ ಮನೆ ನಿಭಾಯಿಸಿಕೊಂಡು, ಮಗಳ ಕಲಿಕೆಗೆ ಕೊರತೆ ಆಗದಂತೆ ನೋಡಿಕೊಂಡರು.

ADVERTISEMENT

‘ಸಾಹಿತ್ಯದ ಓದು ನನಗೆ ಬಹಳ ಇಷ್ಟ. ಈ ಕಾರಣದಿಂದ ಕನ್ನಡ ಆಯ್ದುಕೊಂಡಿದ್ದೆ. ಈಗಾಗಲೇ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ)ಯಲ್ಲಿ ಅರ್ಹತೆ ಗಳಿಸಿದ್ದೇನೆ. ಮುಂದೆ ಜೆಆರ್‌ಎಫ್‌ (ಜೂನಿಯರ್‌ ರಿಸರ್ಚ್‌ ಫೆಲೋಷಿಪ್‌)ಗೆ ಓದುತ್ತಿದ್ದೇನೆ. ಹಳಗನ್ನಡ ಅಂದರೆ ಇಷ್ಟ. ಅದರಲ್ಲೇ ಪಿಎಚ್‌.ಡಿ ಪದವಿ ಪಡೆಯಬೇಕು. ಉತ್ತಮ ಅಧ್ಯಾಪಕಿ ಆಗಬೇಕು ಎಂಬುದು ನನ್ನ ಗುರಿ’ ಎಂದು ಲಾವಣ್ಯ ಸಂತಸ ಹಂಚಿಕೊಂಡರು.

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕುಣಿಗಲ್‌ನ ಎಸ್.ಎಚ್‌.ಮನೋಹರ್‌ 5 ಚಿನ್ನದ ಪದಕ ಪಡೆದಿದ್ದಾರೆ. ವಿ.ವಿಯಲ್ಲಿ ಈ ಬಾರಿ ಅತಿ ಹೆಚ್ಚು ಪದಕ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನೋಹರ್ ಅವರ ತಂದೆ ತೀರಿಕೊಂಡಿದ್ದಾರೆ. ತಾಯಿ ಸ್ಟೇಷನರಿ ಅಂಗಡಿ ನಡೆಸುತ್ತಿದ್ದು ಅವರಿಗೆ ನೆರವಾಗುತ್ತಲೇ ಈ ಸಾಧನೆ ಮಾಡಿದ್ದಾರೆ ಮನೋಹರ್.

ತುಮಕೂರು ತಾಲ್ಲೂಕಿನ ಮಸ್ಕಲ್‌ ಗ್ರಾಮದ ಎಂ.ಸಿ.ದಿವ್ಯಾಮಣಿ ಎಂ.ಕಾಂ.ನಲ್ಲಿ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ. ಇವರು ರೈತ ಕುಟುಂಬದ ಹಿನ್ನೆಲೆಯವರು.

ರ‍್ಯಾಂಕ್ ವಿಜೇತರ ಪಟ್ಟಿ ಓದುವಾಗ ಗೊಂದಲ

ಚಿನ್ನದ ಪದಕ ಪ್ರದಾನ ಹಾಗೂ ರ‍್ಯಾಂಕ್ ವಿಜೇತರ ಪಟ್ಟಿ ಓದುವಾಗ ಕ್ಷಣ ಕಾಲ ಗೊಂದಲ ಉಂಟಾಯಿತು. ಹೆಸರುಗಳನ್ನು ಹಿಂದು–ಮುಂದು ಓದಿದ ಕಾರಣ ಪ್ರಮಾಣಪತ್ರಗಳು ಅದಲು ಬದಲಾಗಿ ಬೇರೆ, ಬೇರೆ ವಿದ್ಯಾರ್ಥಿಗಳ ಕೈಗೆ ಸೇರಿದವು. ಇದರಿಂದ ಗೊಂದಲ ಉಂಟಾದರೂ ಪರೀಕ್ಷಾಂಗ ವಿಭಾಗದ ಕುಲಸಚಿವರು ಕೈಸನ್ನೆ ಮಾಡಿ ಕಾರ್ಯಕ್ರಮ ಮುಂದುವರಿಸುವಂತೆ ತಿಳಿಸಿದರು.

ಶೈಕ್ಷಣಿಕ ಸಾಧಕರ ಮನದ ಮಾತು

ಪಿಎಚ್‌.ಡಿ ಗುರಿ

ಪಿಯು ಓದುತ್ತಿರುವಾಗಲೇ ನನಗೆ ರಾಜ್ಯಶಾಸ್ತ್ರದ ಬಗ್ಗೆ ಆಸಕ್ತಿ ಬೆಳೆಯಿತು. ಅಧ್ಯಾಪಕರು ಪಾಠ ಮಾಡುತ್ತಿದ್ದ ಶೈಲಿ ಹಾಗೂ ಅವರು ವಿಷಯವನ್ನು ಮನದಟ್ಟು ಮಾಡುತ್ತಿದ್ದ ಪರಿ ನೋಡಿ ನಾನೂ ಅವರಂತೆ ಅಧ್ಯಾಪಕಿ ಆಗಬೇಕು ಅಂದುಕೊಂಡೆ. ನನ್ನ ಈ ಆಸೆಗೆ ನೀರೆರೆದು ಪೋಷಿಸಿದವರು ನಮ್ಮ ವಿಭಾಗದ ಮುಖ್ಯಸ್ಥರಾದ ಮೀನಾಕ್ಷಿ ಮೇಡಂ. ಅವರ ಮಾರ್ಗದರ್ಶನದಿಂದ ಚಿನ್ನದ ಪದಕಗಳನ್ನು ಗಳಿಸಲು ಸಾಧ್ಯವಾಯಿತು. ಮುಂದೆ ಪಿಎಚ್‌.ಡಿ ಮಾಡಬೇಕು ಅಂದುಕೊಂಡಿರುವೆ.

ಎಂ.ಭಾನುಮತಿ, 2 ಚಿನ್ನದ ಪದಕ, ರಾಜ್ಯಶಾಸ್ತ್ರ

ಪರಿಸ್ಥಿತಿಯೇ ಪ್ರೇರಣೆ

ಮನೆಯ ಪರಿಸ್ಥಿತಿಯೇ ಸಾಧನೆ ಮಾಡಲು ಪ್ರೇರಣೆ. ನಮ್ಮ ತಂದೆ ಲಾರಿ ಚಾಲಕರು. ಕಷ್ಟ ನೋಡಿ ಬೆಳೆದವನು ನಾನು.ಆದ ಕಾರಣ ಓದು ಮುಗಿದ ತಕ್ಷಣ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಪದಕ ಬರುವ ನಿರೀಕ್ಷೆ ಇರಲಿಲ್ಲ. ಇದರಿಂದ ನಮ್ಮ ತಂದೆ– ತಾಯಿ ಹೆಚ್ಚು ಸಂತೋಷವಾಗಿದ್ದಾರೆ. ನನ್ನ ಈ ಸಾಧನೆಗೆ ಅಧ್ಯಾಪಕರು ಹಾಗೂ ಸ್ನೇಹಿತರ ಪ್ರೋತ್ಸಾಹವೂ ಕಾರಣ.

ಎಸ್‌.ಸಾಧಿಕ್‌ ಪಾಷಾ, 2 ಚಿನ್ನದ ಪದಕ, ಎಂ.ಎಸ್‌.ಡಬ್ಲ್ಯೂ.

ತಂದೆಗೆ ಸಹಾಯ ಮಾಡುವೆ

ನಮ್ಮದು ವ್ಯವಸಾಯದ ಹಿನ್ನೆಲೆಯ ಕುಟುಂಬ. ಸತತ ಬರಗಾಲದಿಂದ ಪಾವಗಡದ ಕಡೆ ಸರಿಯಾಗಿ ಏನನ್ನೂ ಬೆಳೆಯದ ಸ್ಥಿತಿ ಇದೆ. ಆದ ಕಾರಣ ನಾನು ಓದಿನ ಕಡೆ ಹೆಚ್ಚು ಗಮನ ಹರಿಸಿದೆ. ದುಡಿಯಬೇಕು, ನಮ್ಮ ತಂದೆಗೆ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ಓದಿದೆ. ಇದರಿಂದ ಚಿನ್ನದ ಪದಕ ಬರುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. ಪ್ರಸ್ತುತ ಪಾವಗಡದ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೇನೆ.

ಪಿ.ಎನ್‌.ಶೋಭಾ, 2 ಚಿನ್ನದ ಪದಕ, ಪ್ರಾಣಿವಿಜ್ಞಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.