ಗಂಗಾಧರ್ ವಿ. ರೆಡ್ಡಿಹಳ್ಳಿ
ಕೊಡಿಗೇನಹಳ್ಳಿ: ಹೋಬಳಿ ಕೇಂದ್ರವು ಸೂಕ್ತ ಮೂಲ ಸೌಕರ್ಯಗಳಿಲ್ಲದೆ ಸೊರುಗುತ್ತಿದೆ. ಸೂಕ್ತ ಸೌಕರ್ಯ ಹಾಗೂ ವಿವಿಧ ಸರ್ಕಾರಿ ಕಚೇರಿಗಳನ್ನು ಇಲ್ಲಿ ಆರಂಭಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.
ಮಧುಗಿರಿ ತಾಲ್ಲೂಕು ಬಯಲುಸೀಮೆ ಪ್ರದೇಶವಾಗಿರುವ ಕಾರಣ ಈ ಭಾಗದ ಜನರಿಗೆ ಮಳೆಗಾಲದಲ್ಲಿ ಬೆಳೆಯುವ ಬೆಳೆ ಬಿಟ್ಟರೆ ಇತರೆ ಆದಾಯ ಮೂಲಗಳಿಲ್ಲ. ಶಾಶ್ವತ ನೀರಾವರಿ ಸೌಲಭ್ಯ ಹಾಗೂ ಸ್ಥಳೀಯವಾಗಿ ಕೈಗಾರಿಕೆಗಳಿಲ್ಲದ ಕಾರಣ ಇಲ್ಲಿನ ಜನರು ಉದ್ಯೋಗ ಅರಸಿ ವಲಸೆ ಹೋಗುವುದು ಸಾಮಾನ್ಯವಾಗಿದೆ.
ಮಧುಗಿರಿ ಜಿಲ್ಲೆಯಾದರೆ ಕೊಡಿಗೇನಹಳ್ಳಿ ತಾಲ್ಲೂಕು ಕೇಂದ್ರವಾಗುವ ಲಕ್ಷಣಗಳನ್ನು ಹೊಂದಿದ್ದು, ಅದಕ್ಕೆ ಪೂರಕ ಸೌಲಭ್ಯ ಒದಗಿಸಬೇಕು ಎನ್ನುತ್ತಾರೆ ಸ್ಥಳೀಯರು.
ಕೊಡಿಗೇನಹಳ್ಳಿಯಲ್ಲಿರುವ ನಾಡಕಚೇರಿ ಕಟ್ಟಡ ಹಳೆ ಸರ್ಕಾರಿ ಆಸ್ಪತ್ರೆಯ ಜಾಗವಾಗಿದ್ದು, ಇದು ಒಂದು ಎಕರೆ ವಿಸ್ತೀರ್ಣ ಹೊಂದಿದೆ. ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಕಟ್ಟಡ ಈಗಾಗಲೇ ಮಧುಗಿರಿ ರಸ್ತೆಯಲ್ಲಿ (ಗ್ರಾಮ ಪಂಚಾಯಿತಿ ಪಕ್ಕ) ಸುಸಜ್ಜಿತವಾಗಿ ನಿರ್ಮಾಣವಾಗಿರುವ ಕಾರಣ ಈಗಿನ ಶಿಥಿಲಗೊಂಡಿರುವ ನಾಡಕಚೇರಿ ಕಟ್ಟಡ ಮತ್ತು ನಾಡಕಚೇರಿ ಹಿಂಭಾಗ ಪಾಳು ಬಿದ್ದಿರುವ ನಾಲ್ಕು ಕಟ್ಟಡಗಳನ್ನು ಕೆಡವಿ ಆ ಸ್ಥಳದಲ್ಲಿ ಎಲ್ಲ ಇಲಾಖೆಗಳು ಸೇರಿ ಕೆಲಸ-ಕಾರ್ಯಗಳನ್ನು ಮಾಡಲು ಮಿನಿ ವಿಧಾನಸೌದ ನಿರ್ಮಿಸಬೇಕು ಎನ್ನುವ ಬೇಡಿಕೆ ಇದೆ.
ಕೇಂದ್ರ ಸ್ಥಾನದಲ್ಲಿನ ಹಳೆಯ ಕಟ್ಟಡದ ನಾಡಕಚೇರಿಯಲ್ಲಿ ಕೊಠಡಿ ಸಮಸ್ಯೆಯಿಂದಾಗಿ ಕೆಲ ಗ್ರಾಮ ಲೆಕ್ಕಿಗರು, ಕಂದಾಯ ತನಿಕಾಧಿಕಾರಿ ಮತ್ತು ಹಲವು ಸಿಬ್ಬಂದಿ ವಿವಿಧೆಡೆ ಕೊಠಡಿಗಳನ್ನು ಬಾಡಿಗೆ ಪಡೆದು ತಮ್ಮ ಕಾರ್ಯ ನಡೆಸುತ್ತಿದ್ದಾರೆ. ಇದರಿಂದ ಸಂಧ್ಯಾ ಸುರಕ್ಷ, ವಿಧವಾ ವೇತನ, ಜಾತಿ ಹಾಗೂ ವರಮಾನ ದೃಢಿಕರಣ ಪತ್ರ, ಪಹಣಿ, ನೂತನ ಆದಾರ್ ಕಾರ್ಡ್ ಮತ್ತು ತಿದ್ದುಪಡಿಗೆ ಜನರಿಗೆ ತೊಂದರೆಯಾಗುತ್ತಿದೆ ಎಂಬ ದೂರು ಇದೆ.
ಕೊಡಿಗೇನಹಳ್ಳಿ ಹೋಬಳಿ ಕೇಂದ್ರವಾಗಿದ್ದು, 58 ಗ್ರಾಮಗಳು ಮತ್ತು ಪೊಲೀಸ್ ಠಾಣೆ ವ್ಯಾಪ್ತಿಗೆ 112 ಗ್ರಾಮಗಳು ಇರುವುದರಿಂದ ಕಂದಾಯ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ ಮತ್ತು ಇತರೆ ಇಲಾಖೆಗಳು ಒಂದೆಡೆ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದ್ವಿಪಥ ಅಭಿವೃದ್ಧಿಗೆ ಮನವಿ
ಕೊಡಿಗೇನಹಳ್ಳಿ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಮಿನಿ ವಿಧಾನಸೌದ ನೂತನ ಪೊಲೀಸ್ ಠಾಣೆ ಕಟ್ಟಡ ಸಂತೆ ಮೈದಾನ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯ ಮತ್ತು ಮಧುಗಿರಿಯಿಂದ ಮುದ್ದೇನಹಳ್ಳಿವರೆಗೆ ದ್ವಿಪಥ ಅಭಿವೃದ್ಧಿಪಡಿಸುವಂತೆ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ.
ಕೆ.ವಿ. ವೆಂಕಟೇಶ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಡಿಗೇನಹಳ್ಳಿ ಕೈಗಾರಿಕೆ ಅಗತ್ಯ ಸ್ಥಳೀಯರು ಉದ್ಯೋಗ ಅರಸಿ ಆಂಧ್ರದ ಚೆಕ್ ಪೋಸ್ಟ್ ಗೌರಿಬಿದನೂರು ಮತ್ತು ಬೆಂಗಳೂರು ಕಡೆಗೆ ಪ್ರತಿದಿನ ಹೋಗಿ ಬರುತ್ತಿದ್ದಾರೆ. ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೊಡಿಗೇನಹಳ್ಳಿಯಲ್ಲಿಯೇ ಕಾರ್ಖಾನೆ ಹಾಗೂ ಪ್ರಥಮ ದರ್ಜೆ ಕಾಲೇಜು ತೆರಯಬೇಕಾಗಿದೆ.
ರಾಜಶೇಖರ್ ರೆಡ್ಡಿ ಕಡಗತ್ತೂರು ವಯೋವೃದ್ಧರಿಗೆ ಸವಾಲು ಅಲ್ಲಲ್ಲಿ ಕೊಠಡಿ ಮಾಡಿಕೊಂಡಿರುವ ಅಧಿಕಾರಿಗಳನ್ನು ಹುಡುಕುವುದೇ ವಯೋವೃದ್ಧರಿಗೆ ಸವಾಲಾಗಿದೆ. ಎಲ್ಲ ಇಲಾಖೆ ಅಧಿಕಾರಿಗಳು ಒಂದಡೆ ಕಾರ್ಯನಿರ್ವಹಿಸುವಂತೆ ಸಮುಚ್ಛಯ ನಿರ್ಮಿಸಿದರೆ ಅನುಕೂಲವಾಗಲಿದೆ ಎಂದು ಎಸ್.ಎನ್. ಬಾಬು ಶ್ರಾವಂಡನಹಳ್ಳಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.