ADVERTISEMENT

ತುಮಕೂರು: ಹಾಸ್ಟೆಲ್‌ಗೆ ಬೇಕಿದೆ ‘ತುರ್ತು ಚಿಕಿತ್ಸೆ’

ಕೊಳಕು ನಾರುತ್ತಿವೆ ಹಾಸ್ಟೆಲ್‌; ಹಲವೆಡೆ ಶೌಚಾಲಯದ ಕೊರತೆ; ಹಾಸ್ಟೆಲ್‌ ಆವರಣ ಕಸದ ಮಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 5:10 IST
Last Updated 23 ನವೆಂಬರ್ 2024, 5:10 IST
ತುಮಕೂರು ರಾಧಾಕೃಷ್ಣ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಹಾಸ್ಟೆಲ್ ಆವರಣದಲ್ಲಿ ಕಸದ ರಾಶಿ
ತುಮಕೂರು ರಾಧಾಕೃಷ್ಣ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಹಾಸ್ಟೆಲ್ ಆವರಣದಲ್ಲಿ ಕಸದ ರಾಶಿ   

ತುಮಕೂರು: 10ರಿಂದ 12 ಜನ ಇರಬೇಕಾದ ಕಡೆ 20 ಮಂದಿ ವಾಸ, ಗಬ್ಬು ನಾರುವ ಶೌಚಾಲಯ, ಮೂಲೆ ಸೇರಿದ ಶುದ್ಧ ಕುಡಿಯುವ ನೀರಿನ ಘಟಕ, ಅನೈರ್ಮಲ್ಯದ ಮಧ್ಯೆ ದಿನ ದೂಡುವ ವಿದ್ಯಾರ್ಥಿಗಳು. ಇದು ನಗರದ ವಿದ್ಯಾರ್ಥಿ ನಿಲಯಗಳ ಸ್ಥಿತಿಗತಿಯ ಒಂದು ಕಿರು ನೋಟ.

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗಳಿಂದ ನಡೆಯುತ್ತಿರುವ ಹಾಸ್ಟೆಲ್‌ಗಳಲ್ಲಿ ಅವ್ಯವಸ್ಥೆ ಹೆಚ್ಚುತ್ತಿದೆ. ರಕ್ಷಣೆ, ಅಗತ್ಯ ಸೌಲಭ್ಯ ಕಲ್ಪಿಸಬೇಕಾದ ಇಲಾಖೆಯ ಅಧಿಕಾರಿಗಳು ಹಾಸ್ಟೆಲ್‌ ದಾರಿ ಮರೆತಿದ್ದಾರೆ. ಹಿಂದುಳಿದ, ತಳ ಸಮುದಾಯದ ‘ಕಲ್ಯಾಣ’ಕ್ಕಾಗಿ ಇರುವ ಇಲಾಖೆಗಳ ಜಾಣ ಮೌನ, ನಿರ್ಲಕ್ಷ್ಯದಿಂದ ಮಕ್ಕಳು ಬಳಲುತ್ತಿದ್ದಾರೆ.

‘ಜಿಲ್ಲಾಧಿಕಾರಿ, ಹಿರಿಯ ಅಧಿಕಾರಿಗಳು ಭೇಟಿ ನೀಡುವ ಮುನ್ನ ಹಾಸ್ಟೆಲ್‌ ಸ್ವಚ್ಛಗೊಳಿಸುತ್ತಾರೆ. ಅವರ ಜತೆ ಬಂದು ವೀಕ್ಷಿಸಿ ‘ಎಲ್ಲ ಚೆನ್ನಾಗಿದೆ’ ಎಂದು ಅವರನ್ನೂ ಹಾದಿ ತಪ್ಪಿಸುತ್ತಾರೆ. ಒಮ್ಮೊಮ್ಮೆ ಕುಡಿಯಲು ನೀರು ಸಹ ಇರುವುದಿಲ್ಲ. ಕನಿಷ್ಠ ಚಳಿಗಾಲದಲ್ಲಾದರೂ ಬಿಸಿ ನೀರಿನ ವ್ಯವಸ್ಥೆ ಮಾಡಲಿ’ ಎಂದು ರಾಧಾಕೃಷ್ಣ ರಸ್ತೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್‌ನ ಮಕ್ಕಳು ಮನವಿ ಮಾಡಿದರು.

ADVERTISEMENT

ನಗರದ ಬಟವಾಡಿಯ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ 12 ಜನ ಇರಬೇಕಾದ ಕೊಠಡಿಗೆ 20 ವಿದ್ಯಾರ್ಥಿನಿಯರನ್ನು ತುಂಬಿಸಿದ್ದಾರೆ. ಇದರಿಂದ ಕೊಠಡಿಯಲ್ಲಿ ಕೂತು ಓದುವುದು ಕಷ್ಟವಾಗುತ್ತಿದೆ. ಕುರಿ ಮಂದೆಯಂತೆ ಎಲ್ಲರನ್ನು ಒಂದೇ ಕಡೆ ಹಾಕಿದ್ದಾರೆ.

ನಗರದ ಎಸ್‌ಎಸ್‌ಐಟಿ ಕಾಲೇಜಿನ ಬಳಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಒಂದೊಂದು ಸಲ ಇಡೀ ದಿನ ನೀರು ಬರುವುದಿಲ್ಲ. ಕುಡಿಯಲು ಸಹ ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನೀರು ಕಾಯಿಸಲು ಉಪಯೋಗಿಸುವ ಗೀಸರ್‌ ಕೆಟ್ಟು ಮೂಲೆ ಸೇರಿವೆ. ಮೂರು ಗೀಸರ್‌ನಲ್ಲಿ ಒಂದು ಮಾತ್ರ ಸರಿಯಾಗಿದೆ. ಫ್ಯಾನ್‌ಗಳು ಸಹ ಹಾಳಾಗಿದ್ದು, ಕನಿಷ್ಠ ರಿಪೇರಿ ಸಹ ಮಾಡಿಸಿಲ್ಲ.

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಹಾಸ್ಟೆಲ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ತುಂಬಾ ಕಡೆ ಸಿಬ್ಬಂದಿ, ವಾರ್ಡನ್‌ಗಳ ಕೊರತೆ ಇದೆ. ಅಡುಗೆ ಮಾಡುವವರೇ ಶೌಚಾಲಯ ಸ್ವಚ್ಛಗೊಳಿಸಬೇಕಾದ ಪರಿಸ್ಥಿತಿ ಇದೆ. ಸೆಕ್ಯೂರಿಟಿ ಕೊರತೆ ತುಂಬಾ ಕಾಡುತ್ತಿದೆ. ಯಾರು, ಯಾವಾಗ ಬೇಕಾದರೂ ಹಾಸ್ಟೆಲ್‌ಗೆ ಪ್ರವೇಶ ಪಡೆಯಬಹುದಾಗಿದೆ. ಹೊಸಬರು ಬಂದರೂ ಅವರನ್ನು ವಿಚಾರಿಸಲು ಯಾರೊಬ್ಬರೂ ಇರುವುದಿಲ್ಲ. ಕೆಲವು ಹಾಸ್ಟೆಲ್‌ಗಳು ಅಕ್ರಮ ಚಟುವಟಿಕೆಗಳ ತಾಣಗಳಾಗಿ ಬದಲಾಗಿವೆ.

‘ಹಾಸ್ಟೆಲ್‌ನ ಬಹುತೇಕ ವಿದ್ಯಾರ್ಥಿಗಳು ರಾತ್ರಿ ಸಮಯದಲ್ಲಿ ಹೊರಗಡೆ ಇರುತ್ತಾರೆ. ತಮಗೆ ತಿಳಿದಾಗ ಹಾಸ್ಟೆಲ್‌ ಸೇರಿಕೊಳ್ಳುತ್ತಾರೆ. ಇದಕ್ಕೆ ಕಡಿವಾಣ ಬೀಳುತ್ತಿಲ್ಲ. ಇದರಿಂದ ಚೆನ್ನಾಗಿ ಓದಬೇಕು, ಉತ್ತಮ ಅಂಕ ಪಡೆದು ಒಳ್ಳೆಯ ಉದ್ಯೋಗ ಗಳಿಸಬೇಕು ಎಂಬ ಕನಸು ಹೊತ್ತು ಹಾಸ್ಟೆಲ್‌ ಸೇರಿದ ವಿದ್ಯಾರ್ಥಿಗಳೂ ಹಾಳಾಗುತ್ತಿದ್ದಾರೆ’ ಎಂದು ಹೆಸರೇಳಲು ಬಯಸದ ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ರಾಧಾಕೃಷ್ಣ ರಸ್ತೆಯ ಹಾಸ್ಟೆಲ್‌ನಲ್ಲಿ ಮೂಲೆ ಸೇರಿದ ಶುದ್ಧ ಕುಡಿಯುವ ನೀರಿನ ಘಟಕ
ಎಸ್‌ಎಸ್‌ಐಟಿ ಕಾಲೇಜು ಹತ್ತಿರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಕೆಟ್ಟು ನಿಂತ ಗೀಸರ್‌
ನಡೆಯದ ಆರೋಗ್ಯ ತಪಾಸಣೆ
ನಗರದ ಬಹುತೇಕ ಹಾಸ್ಟೆಲ್‌ಗಳಲ್ಲಿ ಆರೋಗ್ಯ ತಪಾಸಣೆ ಮಾಡುತ್ತಿಲ್ಲ. ಅನೈರ್ಮಲ್ಯದಿಂದ ವಿದ್ಯಾರ್ಥಿಗಳು ಬಳಲುತ್ತಿದ್ದರೂ ಯಾರೊಬ್ಬರು ತಲೆ ಕೆಡಿಸಿಕೊಳ್ಳುವುದಿಲ್ಲ. ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಬೇಕು. ಆದರೆ ತಪಾಸಣೆ ಆಯಾ ಇಲಾಖೆಯ ಪುಸ್ತಕಗಳಲ್ಲಿ ಮಾತ್ರ ಉಳಿದಿದೆ. ನಿಜವಾಗಿಯೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಕನಿಷ್ಠ ಪ್ರಥಮ ಚಿಕಿತ್ಸೆಯ ಸೌಲಭ್ಯವೂ ಇಲ್ಲ. ಕೆಲವು ಹಾಸ್ಟೆಲ್‌ಗಳಲ್ಲಿ ಮೆನು ಪ್ರಕಾರ ಊಟ ಕೊಡುತ್ತಿಲ್ಲ. ಮೆನು ಬೋರ್ಡ್‌ನಲ್ಲಿ ಒಂದು ಊಟ ಇದ್ದರೆ ವಿದ್ಯಾರ್ಥಿಗಳ ತಟ್ಟೆಯಲ್ಲಿ ಬೇರೊಂದು ಊಟ ಬಡಿಸುತ್ತಾರೆ. ಇದನ್ನು ಪ್ರಶ್ನೆ ಮಾಡಿದವರನ್ನು ಅಲ್ಲಿನ ವಾರ್ಡನ್‌ ಗುರಿಯಾಗಿಸಿಕೊಂಡು ಸುಖಾ ಸುಮ್ಮನೆ ಕಿರುಕುಳ ನೀಡುತ್ತಾರೆ ಎಂಬುವುದು ಇಲ್ಲಿನ ವಿದ್ಯಾರ್ಥಿಗಳ ಆರೋಪ.
ಗ್ರಂಥಾಲಯ ನಾಮಕಾವಸ್ತೆ
ವಿದ್ಯಾರ್ಥಿ ನಿಲಯಗಳಲ್ಲಿ ಗ್ರಂಥಾಲಯದ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಮಹಡಿ ಮೇಲೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ಸಂಜೆಯ ತನಕ ಕಾಲೇಜಿನಲ್ಲೇ ಇದ್ದು ಓದಿಕೊಳ್ಳುತ್ತಾರೆ. ನಗರದ ಹನುಮಂತಪುರದ ಕಲಾ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಗ್ರಂಥಾಲಯದ ಸೌಲಭ್ಯವಿದ್ದರೂ ಅಗತ್ಯ ಪುಸ್ತಕಗಳಿಲ್ಲ. ಆಗೊಮ್ಮೆ ಈಗೊಮ್ಮೆ ಎಂಬಂತೆ ಬಾಗಿಲು ತೆಗೆಯುತ್ತಾರೆ. ‘ಮನೆಯಲ್ಲಿ ಇದ್ದರೆ ಸರಿಯಾಗಿ ಓದುವುದಿಲ್ಲ. ಓಡಾಟಕ್ಕೆ ಕಷ್ಟವಾಗುತ್ತದೆ ಎಂದು ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸುತ್ತೇವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಆಶ್ರಯ ಆಹಾರ ನೀಡಿ ಒಳ್ಳೆಯ ಪ್ರಜೆಯನ್ನಾಗಿ ರೂಪಿಸುವಲ್ಲಿ ಹಾಸ್ಟೆಲ್‌ಗಳ ಪಾತ್ರ ತುಂಬಾ ಮುಖ್ಯ. ಇಂತಹ ಹಾಸ್ಟೆಲ್‌ಗಳು ದಯನೀಯ ಸ್ಥಿತಿಯಲ್ಲಿವೆ. ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠ ವಾರಕ್ಕೊಮ್ಮೆಯಾದರೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಊರ್ಡಿಗೆರೆಯ ಪ್ರಸನ್ನಕುಮಾರ್‌ ಒತ್ತಾಯಿಸಿದರು.
100 ಜನರಿಗೆ ನಾಲ್ಕು ಶೌಚಾಲಯ
ನಗರದ ಕುಣಿಗಲ್‌ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ವಿದ್ಯಾರ್ಥಿ ನಿಲಯದಲ್ಲಿ 100ಕ್ಕೂ ಹೆಚ್ಚು ಮಕ್ಕಳಿದ್ದು ಕೇವಲ ನಾಲ್ಕು ಶೌಚಾಲಯಗಳು ಮಾತ್ರ ಇವೆ. ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್‌ ನಡೆಯುತ್ತಿದ್ದು ಇಲ್ಲಿ ವಿದ್ಯಾರ್ಥಿಗಳಿಗೆ ಕನಿಷ್ಠ ಸೌಲಭ್ಯ ಕಲ್ಪಿಸಿಲ್ಲ. ಎಲ್ಲರು ಕುಳಿತು ಓದಿಕೊಳ್ಳಲು ಬೇಕಾದ ಜಾಗವೇ ಇಲ್ಲ. ಮೂರು ಅಂತಸ್ತಿನ ಕಟ್ಟಡದ ಮಹಡಿ ಮೇಲೆ ಶೌಚಾಲಯ ಇದ್ದು ಎಲ್ಲ ವಿದ್ಯಾರ್ಥಿಗಳು ಈ ನಾಲ್ಕು ಶೌಚಾಲಯ ಬಳಸಬೇಕಿದೆ.
ಬಸ್‌ ಕೊರತೆ
ಬಟವಾಡಿ ಶೆಟ್ಟಿಹಳ್ಳಿ ಎಸ್‌ಎಸ್‌ಐಟಿ ಮೈದಾಳ ಮತ್ತು ನಗರ ಹೊರವಲಯದ ಹಾಸ್ಟೆಲ್‌ಗಳಿಂದ ಕಾಲೇಜುಗಳಿಗೆ ತೆರಳಲು ಬೆಳಿಗ್ಗೆ ಸಮಯದಲ್ಲಿ ಬಸ್‌ಗಳು ಇರುವುದಿಲ್ಲ. ವಿದ್ಯಾರ್ಥಿಗಳು ಪ್ರತಿ ದಿನ ತಡವಾಗಿ ತರಗತಿಗೆ ಹೋಗುತ್ತಿದ್ದಾರೆ. ಹಾಸ್ಟೆಲ್‌ಗಳ ಬಳಿ ಪ್ರಯಾಣಿಕರ ತಂಗುದಾಣದ ವ್ಯವಸ್ಥೆ ಇಲ್ಲ. ಮರದ ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಜೋರಾಗಿ ಮಳೆ ಸುರಿದರೆ ಹಾಸ್ಟೆಲ್‌ ಕಡೆಗೆ ಓಡುತ್ತಾರೆ. ‘ಸರಿಯಾದ ಸಮಯಕ್ಕೆ ತರಗತಿಗೆ ಹೋಗಬೇಕು ಎಂಬ ಉದ್ದೇಶದಿಂದ ಹಾಸ್ಟೆಲ್‌ಗೆ ದಾಖಲಾಗಿದ್ದೇವೆ. ಇಲ್ಲಿಯೂ ಅಂತಹದ್ದೇ ಸ್ಥಿತಿ ಇದೆ. ಕೆಲವೊಮ್ಮೆ ಅನಿವಾರ್ಯವಾಗಿ ಆಟೊದಲ್ಲಿ ಹೋಗಬೇಕಾಗುತ್ತಿದೆ’ ಎಂದು ಹಾಸ್ಟೆಲ್‌ ವಿದ್ಯಾರ್ಥಿನಿಯೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.