ADVERTISEMENT

ಶಿರಾ | ರಾಷ್ಟ್ರೀಯ ಹಬ್ಬಕ್ಕೆ ಸೀಮಿತವಾದ ಸ್ವಾಮಿ ವಿವೇಕಾನಂದ ಕ್ರೀಡಾಂಗಣ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 7:20 IST
Last Updated 31 ಜುಲೈ 2023, 7:20 IST
ಶಿರಾದ ಸ್ವಾಮಿ ವಿವೇಕಾನಂದ ತಾಲ್ಲೂಕು ಕ್ರೀಡಾಂಗಣ
ಶಿರಾದ ಸ್ವಾಮಿ ವಿವೇಕಾನಂದ ತಾಲ್ಲೂಕು ಕ್ರೀಡಾಂಗಣ   

ಎಚ್.ಸಿ.ಅನಂತರಾಮು

ಶಿರಾ: ಕ್ರೀಡಾ ಚಟುವಟಿಕೆಗಳ ಕೇಂದ್ರವಾಗಬೇಕಿದ್ದ ಸ್ವಾಮಿ ವಿವೇಕಾನಂದ ತಾಲ್ಲೂಕು ಕ್ರೀಡಾಂಗಣ ಕೇವಲ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಸೀಮಿತವಾಗುತ್ತಿರುವುದು ಕ್ರೀಡಾ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ವಿವೇಕಾನಂದ ಕ್ರೀಡಾಂಗಣ ತಾಲ್ಲೂಕಿನಲ್ಲಿರುವ ಏಕೈಕ ಕ್ರೀಡಾಂಗಣ. ಅನೇಕ ಕ್ರೀಡಾಪಟುಗಳು ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದರೂ ಅವರಿಗೆ ತರಬೇತಿ ನೀಡುವವರು ಯಾರು ಇಲ್ಲದಂತಾಗಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರೆಯದಂತಾಗಿದೆ.

ADVERTISEMENT

ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ಅಧಿಕಾರಿ ಇಲ್ಲದೆ ನಿರ್ವಹಣೆಯ ಕೊರತೆಯಿಂದ ಕ್ರೀಡಾ ಚಟುವಟಿಕೆಗಳಿಗೆ ಮಂಕು ಕವಿಯುವಂತಾಗಿದೆ. ಹಾಲಿ ಕ್ರೀಡಾಧಿಕಾರಿಯನ್ನು ಜಿಲ್ಲಾ ಕ್ರೀಡಾಂಗಣಕ್ಕೆ ನಿಯೋಜಿಸಿದ್ದಾರೆ. ಕಾವಲುಗಾರರನ್ನು ಹೊರತುಪಡಿಸಿದರೆ ಯಾವುದೇ ಸಿಬ್ಬಂದಿ ಇಲ್ಲದೆ ನಿರ್ವಹಣೆ ಕುಸಿದಿದೆ.

ಸೌಕರ್ಯ ಕೊರತೆ

ಕ್ರೀಡಾಂಗಣದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯುತ್ತವೆ. ಆದರೆ ಇಲ್ಲಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಗೃಹ, ಬಟ್ಟೆ ಬದಲಿಸಲು ಕೊಠಡಿ ವ್ಯವಸ್ಥೆ ಇಲ್ಲ. ಇದರಿಂದ ಮಹಿಳಾ ಕ್ರೀಡಾ ಪಟುಗಳಿಗೆ ತೊಂದರೆಯಾಗುತ್ತಿದೆ. ಇಷ್ಟೆಲ್ಲಾ ಅವ್ಯವಸ್ಥೆಯ ಅಗರವಾಗಿರುವ ಕ್ರೀಡಾಂಗಣದ ಅಭಿವೃದ್ಧಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮಕೈಗೊಂಡಿಲ್ಲ ಎಂಬ ದೂರೂ ಇದೆ.

ನಿತ್ಯ ನೂರಾರು ಮಂದಿ ಕ್ರೀಡಾಂಗಣದಲ್ಲಿ ವಾಯು ವಿಹಾರ ನಡೆಸುತ್ತಿದ್ದಾರೆ. ಅದರೆ ಕ್ರೀಡಾಂಗಣದಲ್ಲಿ ಶೌಚಾಲಯ ಇಲ್ಲ. ಸ್ವಚ್ಛತೆ ಮರೀಚಕೆಯಾಗಿದೆ ಇಲ್ಲಿ ಬಯಲೇ ಶೌಚಾಲಯವಾಗಿದೆ. ವಾಯುವಿಹಾರ ಮಾಡುವರಿಗೆ ಕಿರಿಕಿರಿಯಾಗುತ್ತಿದೆ. ಜಿಮ್‌ನಲ್ಲಿ ತರಬೇತಿ ನೀಡುವವರು ಯಾರು ಇಲ್ಲ.

ಕ್ರೀಡಾಂಗಣದಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟ ನಡೆಯುತ್ತಿದ್ದು ಊಟ ಮಾಡಿದ ತಟ್ಟೆಗಳನ್ನು ದೂರ ಹಾಕುವ ಸೌಜನ್ಯ ಸಹ ಇಲ್ಲದೆ ಧ್ವಜ ಕಂಬದ ಬಳಿಯೇ ಎಸೆದಿದ್ದಾರೆ.

ಜಾಗದ ಕೊರತೆ

ವಿವೇಕಾನಂದ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಗುರುಭವನ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ ಈ ಹಿಂದೆ ಜಾಗ ನೀಡಲಾಗಿದೆ. ಶಿಕ್ಷಕರು ಗುರು ಭವನ ನಿರ್ಮಾಣ ಮಾಡುವ ಸಮಯದಲ್ಲಿ ಜಾಗವನ್ನು ಸರಿಯಾಗಿ ಗುರುತಿಸಲಾಗದೆ ಬೇರೆ ಕಡೆ ಗುರು ಭವನ ನಿರ್ಮಾಣಕ್ಕೆ ಮುಂದಾದ ಕಾರಣ ಖಾಸಗಿ ಅವರು ನ್ಯಾಯಾಲಯಕ್ಕೆ ಹೋಗಿದ್ದು, ಗುರುಭವನ ನಿರ್ಮಾಣ ಸ್ಥಗಿತಗೊಂಡಿತು. ಈಗ ಅವರು ನಿಗದಿಪಡಿಸಿದ ಜಾಗದಲ್ಲಿ ಗುರುಭವನ ನಿರ್ಮಾಣವಾದರೆ ಕ್ರೀಡಾಂಗಣಕ್ಕೆ ಜಾಗದ ಕೊರತೆಯಾಗುವುದು. ಕ್ರೀಡಾಂಗಣ ಉಳಿಸುವ ದೃಷ್ಟಿಯಿಂದ ಇಲ್ಲಿ ಗುರುಭವನ ನಿರ್ಮಾಣ ಬೇಡ ಬೇರೆ ಕಡೆ ನಿರ್ಮಿಸಲು ಸರ್ಕಾರ ಜಾಗ ನೀಡಲಿ ಎನ್ನುವುದು ಕ್ರೀಡಾ ಆಸಕ್ತರ ಒತ್ತಾಯ.

ಒಳಾಂಗಣ ಕ್ರೀಡಾಂಗಣ ನಿರ್ಮಾಣ

ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ಶಾಸಕ ಟಿ.ಬಿ.ಜಯಚಂದ್ರ ಅವರು ವಿವೇಕಾನಂದ ಕ್ರೀಡಾಂಗಣದಲ್ಲಿ ₹1 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಭರವಸೆ ನೀಡಿದ್ದಾರೆ. ಕ್ರೀಡಾಂಗಣ ನಿರ್ಮಾಣಕ್ಕೆ‌ ಮೊದಲು ಜಾಗದ ಸಮಸ್ಯೆ ಬಗೆಹರಿಸಬೇಕಿದೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರೀಡಾಂಗಣದ ಅಭಿವೃದ್ಧಿಗೆ ಗಮನಹರಿಸಬೇಕು ಎನ್ನುವುದು ಕ್ರೀಡಾಭಿಮಾನಿಗಳ ಅಗ್ರಹ.

ವಿವೇಕಾನಂದ ಕ್ರೀಡಾಂಗಣದಲ್ಲಿ ಊಟದ ತಟ್ಟೆಗಳನ್ನು‌ ಧ್ವಜ ಕಂಬದ ಬಳಿ ಎಸೆಯಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.