ADVERTISEMENT

ಚಿಕ್ಕನಾಯಕನಹಳ್ಳಿ: ಸಂತೆ ಮೈದಾನದಲ್ಲಿ ಸೌಕರ್ಯ ಕೊರತೆ

ಚಿಕ್ಕನಾಯಕನಹಳ್ಳಿ: ಸಂತೆ ಮೈದಾನ ಎಪಿಎಂಸಿ ಜಾಗಕ್ಕೆ ಸ್ಥಳಾಂತರ

ಸಿ.ಗುರುಮೂರ್ತಿ
Published 3 ಫೆಬ್ರುವರಿ 2021, 2:17 IST
Last Updated 3 ಫೆಬ್ರುವರಿ 2021, 2:17 IST
ಚಿಕ್ಕನಾಯಕನಹಳ್ಳಿ ಎಪಿಎಂಸಿ ಜಾಗದಲ್ಲಿ ನಡೆಯುವ ಸಂತೆ
ಚಿಕ್ಕನಾಯಕನಹಳ್ಳಿ ಎಪಿಎಂಸಿ ಜಾಗದಲ್ಲಿ ನಡೆಯುವ ಸಂತೆ   

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಪಾದಚಾರಿ ಮಾರ್ಗ ಹಾಗೂ ತೀನಂಶ್ರೀ ಸಭಾ ಭವನದ ಬಳಿ ನಡೆಯುತ್ತಿದ್ದ ಸಂತೆ ಎಪಿಎಂಸಿ ಜಾಗಕ್ಕೆ ಸ್ಥಳಾಂತರಗೊಂಡಿದೆ. ಹೊಸ ಜಾಗದಲ್ಲಿ ಮೂಲ ಸೌಕರ್ಯಗಳಿಲ್ಲದೆ ವ್ಯಾಪಾರಸ್ಥರು, ಗ್ರಾಹಕರು ಪರದಾಡುವಂತಾಗಿದೆ.

ಪಟ್ಟಣದಲ್ಲಿ ಪ್ರತಿ ಸೋಮವಾರ ಎಪಿಎಂಸಿ ಆವರಣದಲ್ಲಿ ಕುರಿ ಸಂತೆ ಹಾಗೂ ತರಕಾರಿ ಸಂತೆ ನಡೆಯುತ್ತಿದೆ. ಈ ಹಿಂದೆ ಸಂತೆ ನಡೆಯುತ್ತಿದ್ದ ಸ್ಥಳದ ಸಮೀಪ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವಿತ್ತು. ಅಲ್ಲಿಯೇ ಸುಲಭ ಶೌಚಾಲಯವಿದ್ದ ಕಾರಣ ವ್ಯಾಪಾರಸ್ಥರಿಗೂ ಅನುಕೂಲವಿತ್ತು. ಈಗ ನಡೆಯುತ್ತಿರುವ ಸಂತೆ ಜಾಗದಲ್ಲಿ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಶೌಚಾಲಯದ ಸಮಸ್ಯೆ
ಕಾಡುತ್ತಿದೆ.

ಸಂತೆ ಸ್ಥಳದ ಸುತ್ತಮುತ್ತ ಯಾವುದೇ ಸಾರ್ವಜನಿಕ ಶೌಚಾಲಯವಿಲ್ಲ. ಇದರಿಂದ ಸಂತೆಗೆ ಬರುವ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ.

ADVERTISEMENT

ಪ್ರತಿ ಸೋಮವಾರ ನಡೆಯುವ ಸಂತೆಯಲ್ಲಿ ಪುರಸಭೆಯಿಂದ ಹರಾಜು ಕೂಗಿಕೊಂಡವರು ಸುಂಕವೆಂದು ವ್ಯಾಪಾರಸ್ಥರಿಂದ ಹಣ ಸಂಗ್ರಹಿಸುತ್ತಾರೆ. ಹಣ ಪಡೆಯುವಾಗ ಹೆಚ್ಚು ಮುತುವರ್ಜಿ ವಹಿಸುವವರು ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಸಂತೆಗೆ ಬರುವ ವ್ಯಾಪಾರಸ್ಥರು ದೂರುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಿಂದ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ರೈತರು ಸಂತೆಗೆ ಬರುತ್ತಾರೆ. ಕುರಿ ಸಂತೆಗೆ ತಾಲ್ಲೂಕಿನಿಂದ ಮಾತ್ರವಲ್ಲದೆ ತಿಪಟೂರು, ಕೆ.ಬಿ.ಕ್ರಾಸ್, ಗುಬ್ಬಿ, ಹೊಸದುರ್ಗ, ಶಿರಾ, ಹಾಸನ, ಮಂಡ್ಯದಿಂದಲೂ ಜನರು ಬರುತ್ತಾರೆ. ಅವರೆಲ್ಲರೂ ಮೂಲ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಎಪಿಎಂಸಿ ಆವರಣದಲ್ಲಿ ಕೊಬ್ಬರಿ ವರ್ತಕರ ಮಂಡಿ, ರಾಗಿ ಸೇರಿದಂತೆ ಹಲವು ಧಾನ್ಯಗಳ ಮಂಡಿ, ಎಪಿಎಂಸಿ ಕಚೇರಿ, ಹಾಲಿನ ಡೇರಿ ನಿರ್ಮಾಣವಾಗುತ್ತಿದೆ. ಸಮೀಪವೇ ನ್ಯಾಯಾಲಯವಿದೆ. ಸಾರ್ವಜನಿಕ ಆಸ್ಪತ್ರೆಯಿದೆ. ಕೃಷಿ ಇಲಾಖೆ, ಅರಣ್ಯ ಇಲಾಖೆ ಇರುವುದರಿಂದ ಜನದಟ್ಟಣೆ ಹೆಚ್ಚಾಗಿದ್ದು, ಶೌಚಾಲಯ ಅಗತ್ಯವಾಗಿದೆ.

ಸಂತೆಯ ದಿನ ವ್ಯಾಪಾರಿಗಳು ಬೆಳಿಗ್ಗೆ 7ಕ್ಕೆ ಬಂದರೆ ವ್ಯಾಪಾರ ಮುಗಿಸಿಕೊಂಡು ಹಿಂತಿರುಗುವುದು ಸಂಜೆ 7ಕ್ಕೆ. ಊಟ, ತಿಂಡಿ ಮನೆಯಿಂದ ತರುತ್ತಾರೆ. ಆದರೆ ಶೌಚಕ್ಕೆ ಹೋಗಲು ಸಮಸ್ಯೆಯಾಗುತ್ತದೆ. ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿ ಸಿ.ಟಿ.ನಾಗರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.