ತುಮಕೂರು: ಒಲಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟುಗಳು ಪದಕಗಳ ಬೇಟೆಯಾಡುತ್ತಿದ್ದರೆ, ಜಿಲ್ಲೆಯಲ್ಲಿ ಮಾತ್ರ ಕುಸ್ತಿ ‘ಚಿಂತಾಜನಕ’ ಸ್ಥಿತಿಗೆ ತಲುಪಿದೆ. ‘ತುಮಕೂರು ದಸರಾ’ ಹೊರೆತುಪಡಿಸಿದರೆ ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಒಂದೇ ಒಂದು ಕುಸ್ತಿ ಪಂದ್ಯಾವಳಿ ನಡೆದಿಲ್ಲ.
ಇದೇ ಮೊದಲ ಬಾರಿಗೆ ಜಿಲ್ಲಾ ಆಡಳಿತದಿಂದ ಅದ್ದೂರಿಯಾಗಿ ‘ತುಮಕೂರು ದಸರಾ’ ನಡೆಯಿತು. ಎಲ್ಲ ಕ್ರೀಡೆಗಳಂತೆ ಕುಸ್ತಿಗೂ ಅವಕಾಶ ನೀಡಲಾಯಿತು. ಇದನ್ನು ಬಿಟ್ಟರೆ ಬೇರೆಲ್ಲೂ ಪ್ರತ್ಯೇಕವಾಗಿ ಪಂದ್ಯಾವಳಿಗಳು ನಡೆದಿಲ್ಲ. ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರೂ ಪಂದ್ಯಾವಳಿ ಏರ್ಪಡಿಸಿದರೆ ಕುಸ್ತಿಪಟುಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಳವಿನ ಅಂಚಿನಲ್ಲಿ ಸಾಗುತ್ತಿರುವ ಕುಸ್ತಿ ಉಳಿವಿಗೆ ಯಾರೊಬ್ಬರೂ ಇಚ್ಛಾಶಕ್ತಿ ತೋರುತ್ತಿಲ್ಲ ಎಂಬುವುದು ಕುಸ್ತಿ ತರಬೇತಿದಾರರ ಅಭಿಪ್ರಾಯ.
ವಿನೇಶ್ ಪೋಗಾಟ್, ಸಾಕ್ಷಿ ಮಲಿಕ್ ಮುಂತಾದವರು ಒಲಂಪಿಕ್ಸ್‌ನಲ್ಲಿ ಪದಕ ಪಡೆದ ನಂತರ ಯುವತಿಯರು ಕುಸ್ತಿಯ ಕಡೆಗೆ ಒಲವು ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 14 ಮಂದಿ ಯುವತಿಯರು ಕುಸ್ತಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಗಮನ ಸೆಳೆಯುತ್ತಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅನುವು ಮಾಡಿಕೊಡಲಾಗಿದೆ. ಅವರ ಸಾಮರ್ಥ್ಯ ಪರಿಶೀಲನೆಗೆ ವೇದಿಕೆ ಸಿಗುತ್ತಿಲ್ಲ.
ಕುಸ್ತಿ ಇತರೆ ಕ್ರೀಡೆಗಳಂತಲ್ಲ. ಶಕ್ತಿ, ಯುಕ್ತಿ, ದಮ್ಮು, ತಾಕತ್ತು ಎಲ್ಲವನ್ನು ಹೊಂದಿರುವವರು ನಿರಂತರವಾಗಿ ಅಖಾಡದಲ್ಲಿ ಉಳಿಯಲು ಸಾಧ್ಯ. ಒಮ್ಮೆ ಅಖಾಡಕ್ಕೆ ಇಳಿದರೆ ಕನಿಷ್ಠ 2 ಗಂಟೆಯ ಕಾಲ ಎದುರಾಳಿಯನ್ನು ಬಗ್ಗಿ ಬಡಿಯುವ ಧೈರ್ಯ, ಸ್ಥೈರ್ಯ ಇರಬೇಕು. ಇಂದಿನ ಯುವಕರಲ್ಲಿ ಇಂತಹ ಸಾಮರ್ಥ್ಯ ಕಡಿಮೆ ಇದ್ದರೂ ಬೆರಳೆಣಿಕೆಯಷ್ಟು ಜನ ಕುಸ್ತಿಯಲ್ಲಿ ಉಳಿಯುತ್ತಿದ್ದಾರೆ. ತುಂಬಾ ಜನ ಅಭ್ಯಾಸದ ನಂತರ ಪೌಷ್ಟಿಕ ಆಹಾರ ಸೇವನೆ ಸಾಧ್ಯವಾಗದೆ ಕುಸ್ತಿಯ ಕಡೆ ಬರುತ್ತಿಲ್ಲ. ಅಂತವರಿಗೆ ಉತ್ತೇಜನ ನೀಡಲು ಕುಸ್ತಿ ಬಗ್ಗೆ ಆಸಕ್ತಿ ಇರುವವರು ಮುಂದೆ ಬರಬೇಕಿದೆ ಎಂದು ಕುಸ್ತಿ ತರಬೇತುದಾರ ಸಾಲುಮಾನ್ ವಿಕ್ಟರ್ ಪ್ರತಿಕ್ರಿಯಿಸಿದರು.
ಗರಡಿ ಮನೆ ಬಂದ್: ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಗರಡಿ ಮನೆಗಳಿದ್ದವು. ಈಗ ಇವುಗಳ ಸಂಖ್ಯೆ 3ಕ್ಕೆ ಕುಸಿದಿದೆ. ನಗರದ ಹೊರಪೇಟೆ, ಚಿಕ್ಕನಾಯಕನಹಳ್ಳಿ, ಮಧುಗಿರಿಯಲ್ಲಿ ಒಂದೊಂದು ಗರಡಿ ಮನೆ ಇದೆ. ಉಳಿದಂತೆ ಎಲ್ಲ ಕಡೆ ಬಾಗಿಲು ಮುಚ್ಚಿವೆ. ಪ್ರೋತ್ಸಾಹದ ಕೊರತೆ, ಯುವಕರು ಕುಸ್ತಿಯ ಕಡೆ ಆಸಕ್ತಿ ತೋರದ ಕಾರಣ ಗರಡಿ ಮನೆಗಳು ಪಾಳು ಬಿದ್ದಿವೆ.
1842ರಲ್ಲಿ ಪೈಲ್ವಾನ್ ಪುಟ್ಟಣ್ಣ ಆರಂಭಿಸಿದ ಹೊರಪೇಟೆಯ ಗರಡಿ ಮನೆ ಇನ್ನೂ ಉಸಿರಾಡುತ್ತಿದೆ. ಇಂದಿಗೂ ಪ್ರತಿ ದಿನ ಕುಸ್ತಿಪಟುಗಳು ಇಲ್ಲಿ ಪಟ್ಟುಗಳನ್ನು ಕಲಿಯುತ್ತಾರೆ. ಹಿರಿಯ ಪೈಲ್ವಾನರು ಯುವಕರನ್ನು ಅಣಿಗೊಳಿಸುತ್ತಿದ್ದಾರೆ. ಇಲ್ಲಿಯವರೆಗೆ ನೂರಾರು ಪೈಲ್ವಾನ್‌ಗಳು ಈ ಗರಡಿ ಮನೆಯಿಂದ ಹೆಸರು ಗಳಿಸಿ ಹೊರಗಡೆ ಪ್ರಸಿದ್ಧಿ ಪಡೆದಿದ್ದಾರೆ. ಇಲ್ಲಿ ಕುಸ್ತಿ ಕಲಿತವರು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಛಾಪು ಮೂಡಿಸಿದ್ದಾರೆ.
ರಾಜ ಮಹಾರಾಜರ ಕಾಲದಿಂದಲೂ ಜಿಲ್ಲೆಯ ಕುಸ್ತಿಪಟುಗಳಿಗೆ ವಿಶೇಷವಾದ ಸ್ಥಾನವಿದೆ. ದಿನಗಳು ಕಳೆದಂತೆ ಕುಸ್ತಿಗೆ ಸಿಗುತ್ತಿರುವ ಪ್ರೋತ್ಸಾಹ ಕಡಿಮೆಯಾಯಿತು. ಇದು ಕುಸ್ತಿಪಟುಗಳನ್ನು ಗರಡಿ ಮನೆಯಿಂದ ದೂರು ಉಳಿಯುವಂತೆ ಮಾಡಿತು. ನಿರಂತರವಾಗಿ ಅಭ್ಯಾಸ ಮಾಡಿದರು ತಮ್ಮ ಸಾಮರ್ಥ್ಯ ಪ್ರದರ್ಶಕ್ಕೆ ವೇದಿಕೆ ಸಿಗದಂತಾಯಿತು. ಪಂದ್ಯಾವಳಿ ನಡೆಯದೆ ಕೇವಲ ಅಭ್ಯಾಸ ಮಾತ್ರ ಎಂಬಂತಾಯಿತು. ಇದರಿಂದ ತುಂಬಾ ಜನ ಪೈಲ್ವಾನರು ಕುಸ್ತಿ ಅಖಾಡದಿಂದ ಹಿಂದೆ ಸರಿದಿದ್ದಾರೆ.
ಪೈಲ್ವಾನರಿಗೆ ಸಾಲದ ಮಾಸಾಶನ
ಇಡೀ ಜೀವನ ಪೂರ್ತಿ ಕುಸ್ತಿಯ ಜತೆಗೆ ಸಾಗುವ ಪೈಲ್ವಾನರಿಗೆ ಸರ್ಕಾರ ಅಗತ್ಯ ನೆರವು ನೀಡುತ್ತಿಲ್ಲ. ಇತರೆ ಕ್ರೀಡೆಗಳಂತೆ ಕುಸ್ತಿಗೆ ಕನಿಷ್ಠ ಸಹಕಾರ ಸಿಗುತ್ತಿಲ್ಲ. ಈ ಹಿಂದೆ ಖಾಸಗಿ ಕಂಪನಿಗಳಲ್ಲಿ ಕುಸ್ತಿಪಟುಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಈಗ ಅದೂ ಇಲ್ಲದಂತಾಗಿದೆ. ಇದರಿಂದ ಹೆಚ್ಚಿನ ಜನರು ಕುಸ್ತಿಯ ಅಖಾಡಕ್ಕೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ. ಹಿರಿಯ ಪೈಲ್ವಾನರಿಗೆ ಸರ್ಕಾರ ಮಾಸಾಶನ ನೀಡುತ್ತಿದ್ದು ಅದು ಅವರಿಗೆ ಸಾಲುತ್ತಿಲ್ಲ. ಮಾಸಾಶನ ಹೆಚ್ಚಳಕ್ಕೆ ಒತ್ತಡ ಹೇರಿದರೂ ಸಕಾರಾತ್ಮಕ ರೀತಿಯಲ್ಲಿ ಸ್ಪಂದನೆ ದೊರೆಯಾಗಿದೆ. ಹಿರಿಯ ಜೀವಗಳು ಗರಡಿ ಮನೆಯಿಂದ ದೂರ ಉಳಿಯುತ್ತಿವೆ. ಉತ್ತರ ಕರ್ನಾಟಕದ ಮಂದಿ ಕುಸ್ತಿಯನ್ನು ಪ್ರೀತಿಸುತ್ತಾರೆ. ಅಲ್ಲಿನ ಮುಖಂಡರು ರಾಜಕಾರಣಿಗಳು ಅಗತ್ಯ ನೆರವು ನೀಡುತ್ತಾರೆ. ‘ಆರ್ಥಿಕ’ವಾಗಿಯೂ ಕುಸ್ತಿಪಟುಗಳ ಜತೆ ನಿಲ್ಲುತ್ತಾರೆ. ಜಿಲ್ಲೆಯಲ್ಲಿ ಅಂತಹ ವಾತಾವರಣ ಮಾಯವಾಗಿದೆ ಎಂದು ಕುಸ್ತಿ ತರಬೇತುದಾರ ಸಾಲುಮಾನ್ ವಿಕ್ಟರ್ ಬೇಸರ ವ್ಯಕ್ತಪಡಿಸಿದರು.
ಮಾಯವಾದ ಜಾಗ
ಈ ಹಿಂದೆ ಬಾಳನಕಟ್ಟೆಯ ಮಾರುಕಟ್ಟೆ ಜಾಗ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದ ಸರ್ಕಾರಿ ಶಾಲೆಯ ಆವರಣದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುತ್ತಿತ್ತು. ಕುಸ್ತಿ ಪಂದ್ಯ ನೋಡಲು ಟಿಕೆಟ್ ದರ ನಿಗದಿ ಪಡಿಸುತ್ತಿದ್ದರು. ಜನ ದುಡ್ಡು ಕೊಟ್ಟು ಪಂದ್ಯ ವೀಕ್ಷಿಸುತ್ತಿದ್ದರು. ಈಗ ಉಚಿತವಾಗಿ ಪಂದ್ಯಾವಳಿ ನೋಡಲು ಅವಕಾಶ ಕಲ್ಪಿಸಿದರೂ ಹೆಚ್ಚಿನ ಜನರು ಬರುತ್ತಿಲ್ಲ. ಕುಸ್ತಿ ಪಂದ್ಯಾವಳಿ ನಡೆಯುತ್ತಿದ್ದ ಜಾಗಗಳು ಮಾಯವಾಗಿವೆ.
ಜಿಲ್ಲೆಯಲ್ಲಿ ಪ್ರತ್ಯೇಕವಾದ ಕುಸ್ತಿ ಶಾಲೆ ಪ್ರಾರಂಭಿಸಿದರೆ ತುಂಬಾ ಜನರಿಗೆ ಅನುಕೂಲವಾಗುತ್ತದೆ. ಅಧಿಕಾರಿಗಳು ಜನಪ್ರತಿನಿಧಿಗಳು ಮನಸ್ಸು ಮಾಡಬೇಕು. ನಮ್ಮ ಜೀವನದ ಭಾಗ ಸಂಸ್ಕೃತಿಯ ಪ್ರತೀಕವಾದ ಕುಸ್ತಿ ಉಳಿಸಲು ಕೈ ಜೋಡಿಸಬೇಕು. ಜೂನಿಯರ್ ಕಾಲೇಜು ಮೈದಾನದಲ್ಲಿ ಕುಸ್ತಿ ಅಖಾಡ ನಿರ್ಮಿಸಿ ಅಭ್ಯಾಸದ ಜತೆಗೆ ಪಂದ್ಯಾವಳಿ ಆಯೋಜಿಸಿದರೆ ಕುಸ್ತಿಗೆ ಉತ್ತೇಜನ ನೀಡಿದಂತಾಗುತ್ತದೆ. ಈ ಬಾರಿಯಂತೆ ಪ್ರತಿ ವರ್ಷ ‘ತುಮಕೂರು ದಸರಾ’ ವೇಳೆ ಕುಸ್ತಿ ಪಂದ್ಯಾವಳಿ ನಡೆಸಬೇಕು.- ಸಾಲುಮಾನ್ ವಿಕ್ಟರ್ ಕುಸ್ತಿ ತರಬೇತುದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.