ADVERTISEMENT

ಪಾವಗಡ ಸರ್ಕಾರಿ ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ: ದೂಳು ಹಿಡಿದ ಉಪಕರಣಗಳು!

ಕೆ.ಆರ್.ಜಯಸಿಂಹ
Published 28 ಫೆಬ್ರುವರಿ 2024, 5:31 IST
Last Updated 28 ಫೆಬ್ರುವರಿ 2024, 5:31 IST
<div class="paragraphs"><p>ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಕ್ಯಾನಿಂಗ್ ಯಂತ್ರವನ್ನು ಪೆಟ್ಟಿಗೆಯಲ್ಲಿ ಮುಚ್ಚಿಟ್ಟಿರುವುದು</p></div>

ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಕ್ಯಾನಿಂಗ್ ಯಂತ್ರವನ್ನು ಪೆಟ್ಟಿಗೆಯಲ್ಲಿ ಮುಚ್ಚಿಟ್ಟಿರುವುದು

   

ಪಾವಗಡ: ಜಿಲ್ಲಾ ಕೇಂದ್ರದಿಂದ ನೂರು ಕಿ.ಮೀ ದೂರವಿರುವ ತಾಲ್ಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ, ಮೂಲ ಸವಲತ್ತು ಇಲ್ಲದೆ ಮಕ್ಕಳು, ಮಹಿಳೆಯರು ಜೀವ ಕಳೆದುಕೊಳ್ಳುವಂತಾಗಿದೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಗಡಿ ಭಾಗದ ಗ್ರಾಮಗಳು, ಆಂಧ್ರದ ರೋಗಿಗಳು ಬರುತ್ತಾರೆ. ಆದರೆ, ತುರ್ತು ಸಂದರ್ಭದಲ್ಲಿ ಆರೋಗ್ಯ ಸೇವೆ ಸಿಗದೆ ಜೀವ ಕಳೆದುಕೊಂಡ ಸಾಕಷ್ಟು ಉದಾಹರಣೆ ಇಲ್ಲಿದೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಆಸ್ಪತ್ರೆಗೆ ವೈದ್ಯರಿಂದ ಡಿ ಗ್ರೂಪ್ ನೌಕರರವರೆಗೆ 94 ಹುದ್ದೆಗಳು ಮಂಜೂರಾಗಿವೆ. ಆದರೆ, ಕೇವಲ 31 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ತಜ್ಞ ವೈದ್ಯರೂ ಸೇರಿದಂತೆ 63 ಹುದ್ದೆಗಳು ಖಾಲಿ ಇವೆ.

ಆಸ್ಪತ್ರೆಯಲ್ಲಿ ಬೆರಳೆಣಿಕೆ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲ ವೈದ್ಯರು ಕಾರಣಾಂತರಗಳಿಂದ ಅನಧಿಕೃತ ಗೈರು ಹಾಜರಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯನ್ನೇ ನೆಚ್ಚಿಕೊಂಡಿರುವ ಬಹುತೇಕ ಬಡರೋಗಿಗಳು ಚಿಕಿತ್ಸೆಗಾಗಿ ದಿನವಿಡೀ ಕಾಯುವಂತಾಗಿದೆ. ಆಸ್ಪತ್ರೆಯಲ್ಲಿ ಕಿವಿ–ಮೂಗು ಗಂಟಲು ತಜ್ಞ, ಫಿಜಿಷಿಯನ್, ಅರವಳಿಕೆ ತಜ್ಞ, ಚರ್ಮರೋಗ ತಜ್ಞ, ನೇತ್ರ ತಜ್ಞ, ರೇಡಿಯಾಲಜಿಸ್ಟ್, ಮೂರು ತುರ್ತು ಚಿಕಿತ್ಸಾ ವೈದ್ಯರ ಹುದ್ದೆಗಳು ಖಾಲಿ ಇವೆ.

ಆಸ್ಪತ್ರೆ ದಾಖಲೆಗಳ ಪ್ರಕಾರ ಶಸ್ತ್ರ ಚಿಕಿತ್ಸಕ ಡಾ.ರಾಜೀವ್, ಕೀಲು ಮತ್ತು ಮೂಳೆ ತಜ್ಞ ರಮೇಶ್ ಅನಧಿಕೃತ ಗೈರು ಹಾಜರಾಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಫ್ಲೋರೈಡ್ ನೀರಿನಿಂದ ದಂತ ಸಮಸ್ಯೆಯಿಂದ ಬಳಲುವರ ಸಂಖ್ಯೆ ಹೆಚ್ಚಿದ್ದರೂ ದಂತ ಆರೋಗ್ಯಾಧಿಕಾರಿ ಸದ್ಯ ಅವರನ್ನು ಇಲ್ಲಿನ ಆಸ್ಪತ್ರೆಯಿಂದ ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ನಿಯೋಜಿಸಲಾಗಿದೆ. 

ಶುಶ್ರೂಷಕಿ ದರ್ಜೆ 2-1, ಹಿರಿಯ ಶುಶ್ರೂಷಕಿ- 2, ಶುಶ್ರೂಷಕರು-3, ಕಿರಿಯ ಫಾರ್ಮಾಸಿಸ್ಟ್, ಗ್ರೂಪ್ ಡಿ ನೌಕರರು- 40 ಹುದ್ದೆಗಳು ಖಾಲಿ ಇವೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಿದ್ದರೂ ವೈದ್ಯರು, ಸಿಬ್ಬಂದಿ ಇಲ್ಲದ ಕಾರಣ ರೋಗಿಗಳು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ರಾತ್ರಿ ವೇಳೆ, ಹಬ್ಬಗಳ ಸಂದರ್ಭದಲ್ಲಿ ವೈದ್ಯರು ಸಿಬ್ಬಂದಿಯನ್ನು ಆಸ್ಪತ್ರೆಯಲ್ಲಿ ಹುಡುಕಾಡಬೇಕು. ಅಪಘಾತ, ವಿಷ ಜಂತು ಕಡಿತ, ಕರಡಿ, ಚಿರತೆ ದಾಳಿಗೆ ಒಳಗಾದವರ ಪಾಡು ಹೇಳತೀರದು.

ಗರ್ಭಿಣಿ, ಬಾಣಂತಿಯರಿಗಿಲ್ಲ ಸವಲತ್ತು: ಹೆರಿಗೆ, ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಬಿಸಿ ನೀರು, ಆಹಾರ ವ್ಯವಸ್ಥೆ ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬಾಣಂತಿಯರಿಗೆ ಆಹಾರ ವಿತರಿಸಲು ಹರಾಜು ಕರೆಯಲಾಗುತ್ತದೆ. ಆದರೆ, ಗುಣಮಟ್ಟದ ಆಹಾರ ಪೂರೈಸಲಾಗುತ್ತಿಲ್ಲ. ಬಿಸಿ ನೀರಿಗಾಗಿ ಮನೆ ಮನೆ ಅಲೆಯಬೇಕು ಎಂಬುದು ಮಹಿಳೆಯರ ಆರೋಪ.

ಸ್ಕ್ಯಾನಿಂಗ್ ಯಂತ್ರವಿದ್ದರೂ ಪ್ರಯೋಜನವಿಲ್ಲ: ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸ್ಕ್ಯಾನಿಂಗ್ ಯಂತ್ರಗಳನ್ನು ಪೂರೈಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ತಜ್ಞರ ವೈದ್ಯರಿಲ್ಲದ ಕಾರಣ ಸಾವಿರಾರು ಮಂದಿ ಗರ್ಭಿಣಿಯರನ್ನು ಖಾಸಗಿ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಹೊಸದಾಗಿ ಪೂರೈಸಲಾದ ಸ್ಕ್ಯಾನಿಂಗ್ ಯಂತ್ರವನ್ನು ಪೆಟ್ಟಿಗೆಯಲ್ಲಿ ಭದ್ರವಾಗಿ ಇಡಲಾಗಿದೆ

ತುರ್ತು ವಾಹನ ಸಮಸ್ಯೆ: ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು, ಬೆಂಗಳೂರಿಗೆ ರೋಗಿಗಳನ್ನು ಕರೆದೊಯ್ಯಲು ತುರ್ತು ವಾಹನ ಸಿಗುವುದಿಲ್ಲ. ಒಂದು ವೇಳೆ ತುರ್ತು ವಾಹನ ಸಿಕ್ಕರೂ ಬೆಂಗಳೂರಿಗೆ ₹3 ರಿಂದ 4 ಸಾವಿರ, ತುಮಕೂರಿಗೆ ₹1500 ರಿಂದ 2 ಸಾವಿರ ಇಂಧನಕ್ಕಾಗಿ ಕೊಡಬೇಕು. ಇದು ಬಡ ಜನರಿಗೆ ಹೊರೆಯಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದೆ.

ಔಷಧ ಕೊರತೆ: ಔಷಧ ಖರೀದಿಗಾಗಿ ಆಸ್ಪತ್ರೆಗೆ ಸಾಕಷ್ಟು ಅನುದಾನ ನೀಡಿದರೂ ಕೂಡ  ಔಷಧಗಳಿಲ್ಲ ಎಂದು ಖಾಸಗಿ ಔಷಧ ಕೇಂದ್ರಗಳಿಂದ ಔಷಧ ಖರೀದಿಸಿ ತರುವಂತೆ ರೋಗಿಗಳನ್ನು ಕಳುಹಿಸಲಾಗುತ್ತಿದೆ. ಇದು ಬಡ ಜನರಿಗೆ ಹೊರೆಯಾಗಿ ಪರಿಣಮಿಸಿದೆ.

ಜ್ವರ, ಇನ್ನಿತರ ಸಮಸ್ಯೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಒಬ್ಬರಿಗೆ ನೀಡುವ ಔಷಧಿಯನ್ನು 3 ರಿಂದ 4 ಮಂದಿಗೆ ನೀಡಲಾಗುತ್ತದೆ. ಶಸ್ತ್ರ ಚಿಕಿತ್ಸೆ ನಂತರ ಬೆಳಿಗ್ಗೆ, ಸಂಜೆ ರೋಗಿಗಳ ಮೇಲ್ವಿಚಾರಣೆ ಮಾಡುವುದಿಲ್ಲ. ಇಂತಹ ನಿರ್ಲಕ್ಷ್ಯವೇ ಮೂರು ಮಂದಿ ಮಹಿಳೆಯರು ಮೃತಪಡಲು ಪ್ರಮುಖ ಕಾರಣ ಎಂಬುದು ಸಾರ್ವಜನಿಕರ ಆರೋಪ.

ಹೆರಿಗೆ, ಹೆರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರಿಂದ ₹3ರಿಂದ 5 ಸಾವಿರವರೆಗೆ ಹಣ ವಸೂಲಿ ಮಾಡಲಾಗುತ್ತದೆ. ಈ ಬಗ್ಗೆ ಪ್ರಶ್ನಿಸಿದರೆ ಹೆರಿಗೆ ಮಾಡಲು ಸಾಧ್ಯವಾಗುವುದಿಲ್ಲ ಬೇರೆಡೆ ಹೋಗಿ ಎಂದು ತುಮಕೂರು, ಬೆಂಗಳೂರಿನ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಹೀಗಾಗಿ ಯಾರಿಗೂ ದೂರು ನೀಡದರೆ ಸಿಬ್ಬಂದಿ ಕೇಳಿದಷ್ಟು ಹಣ ನೀಡಿ ಹೆರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ದೂರುಗಳಿವೆ.

ಒಂದೇ ಕೊಠಡಿಯಲ್ಲಿ ಬೆಡ್ ಗಳನ್ನು ಇಟ್ಟಿರುವುದು
ಚಿಕಿತ್ಸೆಗಾಗಿ ಕಾಯುತ್ತಿರುವ ರೋಗಿಗಳು
ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕಾಯುತ್ತಿರುವ ರೋಗಿಗಳು.
ವೈದ್ಯರು ಸಿಬ್ಬಂದಿ ನಿರ್ಲಕ್ಷ್ಯದಿಂದ ಮಹಿಳೆಯ ಮಕ್ಕಳು ಅನಾಥರಾಗಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಆಸ್ಪತ್ರೆ ಸಿಬ್ಬಂದಿ ಎಚ್ಚರ ವಹಿಸಬೇಕು
-ಎಸ್ ನಿಂಗಪ್ಪ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ರಾಜವಂತಿ
ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಸೌಲಭ್ಯ ಕೊರತೆ ಇದೆ. ಆಸ್ಪತ್ರೆಯಲ್ಲಿ ಶೇ 70ರಷ್ಟು ಹುದ್ದೆಗಳು ಖಾಲಿ ಇವೆ. ಈ ಕೂಡಲೇ ಸರ್ಕಾರ ವೈದ್ಯರು ಸಿಬ್ಬಂದಿ ನಿಯೋಜಿಸಬೇಕು
-ಗೋಪಾಲ್, ಪಾವಗಡ
ಔಷಧ ಹೊರಗಡೆಯಿಂದ ಖರೀದಿಸಿ ತರುವಂತೆ ರೋಗಿಗಳಿಗೆ ತಿಳಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
-ಮುದ್ದರಾಜು, ರಾಜವಂತಿ
ತುರ್ತು ವಾಹನ ಗರ್ಭಿಣಿ ಬಾಣಂತಿಯರಿಗೆ ಆಹಾರ ಬಿಸಿ ನೀರು ಸೇರಿದಂತೆ ರೋಗಿಗಳಿಗೆ ಮೂಲ ಸವಲತ್ತು ಕಲ್ಪಿಸಬೇಕು
-ನರಸಿಂಹ, ಪಾವಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.