ಕೊಡಿಗೇನಹಳ್ಳಿ: ಬಿಸಿಲಿನ ಧಗೆಗೆ ಜನ, ಜಾನುವಾರು ಹೈರಾಣಾಗುತ್ತಿದ್ದರೆ ಮತ್ತೊಂದಡೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ರೈತರು ತಮ್ಮ ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ನೀರು ನಿಂತು ಹೋಗುತ್ತಿರುವುದರಂದ ಕಂಗಾಲಾಗಿದ್ದಾರೆ,
2022ರಲ್ಲಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದರ ಪರಿಣಾಮ ಕೆರೆ, ಕುಂಟೆ, ಹಳ್ಳಕೊಳ್ಳ ಹಾಗೂ ನದಿಗಳು ತುಂಬಿ ಹರಿದು ಬತ್ತಿದ್ದ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಕೃಷಿ ಚಟುವಟಿಕೆಗೆ ಜೀವಕಳೆ ಬಂದಿತ್ತು.
ಆದರೆ 2023 ರಲ್ಲಿ ಸರಿಯಾದ ಮಳೆಯಾಗದ ಕಾರಣ 2024ರ ಫೆಬ್ರುವರಿ, ಮಾರ್ಚ್ ತಿಂಗಳಲ್ಲೆ ಹಲವು ಕೊಳವೆ ಬಾವಿಗಳು ಕೈಕೊಟ್ಟವು. ಈಗ ಏಪ್ರಿಲ್ ತಿಂಗಳ ರಣಬಿಸಿಲಿನ ತಾಪಕ್ಕೆ ನದಿ ಹಾಗೂ ಕೆರೆ ಪಾತ್ರದಲ್ಲಿ ಹೊರತುಪಡಿಸಿ ಇತರೆ ಪ್ರದೇಶದಲ್ಲಿರುವ ಕೊಳವೆ ಬಾವಿಗಳಲ್ಲಿ ನೀರು ನಿಲ್ಲುತ್ತಿವೆ.
ಸಾಲ ಮಾಡಿ ಮತ್ತೊಂದು ಕೊಳವೆ ಬಾವಿ ಕೊರಸೋಣವೆಂದರೆ ಅದರಲ್ಲಿ ನೀರು ದೊರೆತರೂ ಅವು ಎಷ್ಟು ದಿವಸ ಬರುತ್ತವೆ ಎಂದು ಗ್ಯಾರಂಟಿ ಇಲ್ಲ. ಕೂಲಿ ಕಾರ್ಮಿಕರ ಕೊರತೆ, ರಸಗೊಬ್ಬರ ಬೆಲೆ ದುಪ್ಪಟ್ಟಿನ ಜತೆಗೆ ವ್ಯವಸಾಯಕ್ಕೆ ಹಾಕಿರುವ ಬಂಡವಾಳ ವಾಪಸ್ಸು ಬರುವುದು ಕಷ್ಟ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಈ ರೀತಿ ನೀರಿನ ಸಮಸ್ಯೆಯಾದರೆ ಹೇಗೆ ವ್ಯವಸಾಯ ಮಾಡುವುದು ಎಂದು ಅಳಲು ತೋಡಿಕೊಳ್ಳುತ್ತಾರೆ ಕಾಳೇನಹಳ್ಳಿ ಗ್ರಾಮದ ರೈತ ಲಕ್ಷ್ಮಿನಾರಾಯಣ.
ಸರ್ಕಾರ ರೈತರಿಗಾಗಿ ವಿಶೇಷ ಯೋಜನೆ ರೂಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರನ್ನು ಹುಡುಕಬೇಕಾಗುತ್ತದೆ. ನೀರು, ರಸಗೊಬ್ಬರ ಹಾಗೂ ಬೆಲೆ ನಿಗದಿಯಂತಹ ಸಮಸ್ಯೆ ಪರಿಹರಿಸದಿದ್ದರೆ ರೈತನ ಗೋಳು ಹೇಳತೀರದಂತಾಗಲಿದೆ ಎಂದು ರೈತ ದಯಾನಂದ ಹೇಳಿದರು.
ಜನರು ಪಟ್ಟಣಗಳತ್ತ ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರ ಬರ ಪರಿಹಾರ ಕಾಮಗಾರಿ, ಆಹಾರ ಭದ್ರತೆ ಬಲಪಡಿಸುವುದು, ಪಂಚಾಯಿತಿಗೊಂದು ಗೋಶಾಲೆ ತೆರೆಯುವುದು, ಕುಡಿಯುವ ನೀರು ಒದಗಿಸಬೇಕು. ಎಕರೆಗೆ ಕನಿಷ್ಠ ₹10 ಸಾವಿರ ಪರಿಹಾರ ನೀಡುವ ಕಾರ್ಯ ತುರ್ತಾಗಿ ಮಾಡಬೇಕು ಎಂದು ಜಿಲ್ಲಾ ರೈತ ಸಂಘದ ಪ್ರದಾನ ಕಾರ್ಯದರ್ಶಿ ಶಂಕರಪ್ಪ ಗಿರೇಗೌಡನಹಳ್ಳಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.