ಹುಳಿಯಾರು: ಕಳೆದೆರಡು ವರ್ಷದ ಹಿಂದೆ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು ನಿರೀಕ್ಷಿತ ಮಟ್ಟದಲ್ಲಿ ತೆಂಗಿನ ಫಸಲು ರೈತರಿಗೆ ಲಭಿಸಿತ್ತು. ಆದರೆ ಕಳೆದ ವರ್ಷ ಮಳೆ ಸಂಪೂರ್ಣ ಕೈಕೊಟ್ಟ ಕಾರಣ ಈ ವರ್ಷ ಮರ ಉಳಿಸಿಕೊಂಡರೆ ಸಾಕು ಫಸಲು ಮುಂದಿನ ದಿನಗಳಲ್ಲಿ ನೋಡಿಕೊಳ್ಳೊಣ ಎನ್ನುವ ಸ್ಥಿತಿ ರೈತರದ್ದಾಗಿದೆ.
ಮಳೆ ಕೈಕೊಟ್ಟ ಕಾರಣ ಕೊಳವೆಬಾವಿಗಳು ಬತ್ತಿವೆ. ಹೊಸ ಕೊಳವೆ ಬಾವಿ ಕೊರೆಸಿದರೆ ನೀರು ಬರುತ್ತಿಲ್ಲ. ಬರುತ್ತಿರುವ ಕಡಿಮೆ ನೀರಿನಲ್ಲಿ ಅಡಿಕೆ ಜತೆ ತೆಂಗು ಉಳಿಸಿಕೊಳ್ಳುವುದು ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ.
ತೆಂಗು ಅಲ್ಪಸ್ವಲ್ಪ ತೇವಾಂಶ ಕೂಡಿಟ್ಟುಕೊಂಡು ತಿಂಗಳುಗಟ್ಟಲೇ ಜೀವ ಹಿಡಿದುಕೊಂಡು ಇರುವ ಮರ. ಆದರೆ ಇತ್ತೀಚಿನ ತೇವಾಂಶದ ಕೊರತೆ ಹಾಗೂ ಬಿಸಿಲಿನ ಝಳಕ್ಕೆ ಮರದ ಗರಿಗಳ ಬೆಳಗವಣಿಗೆ ಕುಂಠಿತವಾಗಿದ್ದು ಮರದಿಂದ ಜೋತು ಬೀಳುತ್ತಿವೆ. ಮರದಲ್ಲಿನ ಕಾಯಿಗಳು ಕೂಡ ನೀರಿಲ್ಲದೆ ನಿತ್ರಾಣಗೊಂಡು ಬಲಿಯುವ ಮುನ್ನವೇ ನೆಲಕ್ಕುರುಳುತ್ತಿವೆ. ಇನ್ನೂ ಕಾಯಿಯ ಜತೆ ಹಸಿ ಗರಿಗಳು ಕೂಡ ಬೀಳುತ್ತಿರುವುದು ಕೂಡ ತಲೆ ನೋವಾಗಿದೆ. ಸದ್ಯ ರೈತರು ಫಸಲಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಮರಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಹುಳಿಯಾರು ಹೋಬಳಿ ಮೊದಲಿನಿಂದಲೂ ಅರೆಮಲೆನಾಡಿನ ಸೆರಗಾಗಿದ್ದು ಎರಡು-ಮೂರು ವರ್ಷ ಮಳೆ ಬಾರದೆ ಹೋದರೂ ತೆಂಗಿನ ಮರಗಳು ಬಾಡುತ್ತಿರಲಿಲ್ಲ. ಮರಗಳಲ್ಲಿ ಒಂದಿಷ್ಟು ಫಸಲು ಕಡಿಮೆಯಾಗುತ್ತಿತ್ತು. ಅದರೆ ಕಳೆದ 10 ವರ್ಷಗಳಿಂದ ಅಡಿಕೆ ಬೆಳೆಯುವ ಧಾವಂತದಲ್ಲಿ ತೆಂಗಿನ ಮೇಲಿನ ವ್ಯಾಮೋಹ ಕಡಿಮೆಯಾಗಿತ್ತು. ಕಳೆದ 2 ವರ್ಷಗಳಿಂದ ಅಡಿಕೆ ಬೆಳೆಯವ ಪ್ರದೇಶ ಹೆಚ್ಚಾಗಿ ತೆಂಗಿಗೆ ನೀರು ಹರಿಸಲು ಕಷ್ಟವಾಗಿದೆ.
ಪ್ರಸ್ತುತ ಸ್ಥಿತಿಯಲ್ಲಿ ಅಡಿಕೆಯೂ ಒಣಗುತ್ತಿದೆ. ಇತ್ತ ತೆಂಗು ಒಣಗುತ್ತಿರುವುದು ರೈತರನ್ನು ಸಂಕಷ್ಟಕ್ಕೆದೂಡಿದೆ. ಈಗಾಗಲೇ ಹಲವಾರು ರೈತರು ದೇವರು, ಭೂಗರ್ಭಶಾಸ್ತ್ರಜ್ಞರು ಹಾಗೂ ಕಾಯಿ ಹಿಡಿದು ನೀರು ತೋರಿಸುವವರನ್ನು ನಂಬಿ ಒಬ್ಬಬ್ಬ ರೈತರು ಎರಡೆರಡು ಕೊಳವೆಬಾವಿ ಕೊರೆಯಿಸಿ ಲಕ್ಷಾಂತರ ಹಣ ಕಳೆದು ಕೊಂಡು ಸಾಲದ ಸುಳಿಗೆ ಸಿಲುಕಿದ್ದಾರೆ. ಇನ್ನೂ ಮಳೆ ಕೊರತೆ ನಡುವೆ ಈ ಬಾರಿ ಬೆಲೆ ಇಳಿಕೆ ಕೂಡ ರೈತರ ಹೈರಾಣಾಗಿಸಿದೆ.
ರೋಗಗಳ ಬಾಧೆ: ಬರದಿಂದ ತತ್ತರಿಸಿರುವ ರೈತರಿಗೆ ತೆಂಗು ಅಡಿಕೆ ಮರಗಳಿಗೆ ಕಾಣಿಸಿಕೊಳ್ಳುತ್ತಿರುವ ತರಹೇವಾರಿ ರೋಗ, ಕೀಟ ಬಾಧೆ ಗಾಯದ ಮೇಲೆ ಬರೆ ಎಳೆದಿದೆ. ಕಾಂಡಸೋರುವ, ಕಪ್ಪುತಲೆಹುಳು, ಮೂತಿ ಹುಳು ಸೇರಿದಂತೆ ಇತರ ಬಾಧೆ ರೈತರಿಗೆ ತಲೆ ನೋವಾಗಿದೆ. ಒಂದೊಂದು ತೋಟದಲ್ಲೂ ಐದಾರು ತೆಂಗಿನ ಮರಗಳು ರೋಗಕ್ಕೆ ತುತ್ತಾಗಿ ಬಲಿಯಾಗುತ್ತಿವೆ.
ಬದಲಾವಣೆ ಅಗತ್ಯ
ಅಧಿಕ ನೀರು ಬೇಡುವ ಬೆಳೆಗಳನ್ನು ಬೆಳೆಯಲು ಹೋಬಳಿ ವ್ಯಾಪ್ತಿಯಲ್ಲಿ ಪೂರಕ ವಾತಾವರಣವಿಲ್ಲ. ರೈತರು ಮಳೆಗಾಲದಲ್ಲಿ ದೊಡ್ಡ ಕೃಷಿಹೊಂಡ ನಿರ್ಮಿಸಿ ನೀರು ಶೇಖರಿಸಿಕೊಂಡು ಬೇಸಿಗೆ ಕಾಲದಲ್ಲಿ ಬಳಸುವುದು ತೋಟಗಳಲ್ಲಿ ಇಂಗುಗುಂಡಿ ಜಲ ಮರುಪೂರಣದಂತಹ ಕ್ರಮಗಳನ್ನು ಅನುಸರಿಸಬೇಕು. ಇದರ ಜತೆ ಮೊದಲಿನಿಂದಲೂ ಸಿರಿಧಾನ್ಯ ಬೆಳೆಯಲು ಸೂಕ್ತ ತಾಣವಾಗಿರುವ ಕಾರಣ ನೀರಾವರಿ ಬೆಳೆ ಬಿಟ್ಟು ಖುಷ್ಕಿ ಬೆಳೆಯಲು ರೈತರು ಮುಂದಾಗಬೇಕು. ರಾಮಕೃಷ್ಣಪ್ಪ ಸಾವಯವ ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.