ADVERTISEMENT

ಮಳೆಯಾದರೂ ಭರ್ತಿಯಾಗದ ತುಮಕೂರು ಜಿಲ್ಲೆಯ ಕೆರೆಗಳು

ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 400 ಕೆರೆಗಳು, ಆದಾಯ ಕುಂಠಿತ ಸಾಧ್ಯತೆ

ಅನಿಲ್ ಕುಮಾರ್ ಜಿ
Published 22 ಆಗಸ್ಟ್ 2020, 6:23 IST
Last Updated 22 ಆಗಸ್ಟ್ 2020, 6:23 IST
ಶಿರಾ ತಾಲ್ಲೂಕು ಹೆಂದೊರೆ ಗ್ರಾಮದ ಕೆರೆಯಲ್ಲಿ ನೀರಿಲ್ಲದೇ ಜಾಲಿಗಿಡ ಬೆಳೆದಿರುವುದು
ಶಿರಾ ತಾಲ್ಲೂಕು ಹೆಂದೊರೆ ಗ್ರಾಮದ ಕೆರೆಯಲ್ಲಿ ನೀರಿಲ್ಲದೇ ಜಾಲಿಗಿಡ ಬೆಳೆದಿರುವುದು   

ತುಮಕೂರು: ಇತ್ತೀಚಿನ ವರ್ಷಗಳಿಗೆಹೋಲಿಸಿದರೆ ಈ ವರ್ಷ ಉತ್ತಮ ಮಳೆಯಾಗುತ್ತಿದ್ದರೂ ಜಿಲ್ಲೆಯ ಬಹುತೇಕ ಕೆರೆಗಳಿಗೆ ನೀರು ಹರಿದು ಬಂದಿಲ್ಲ.

ರಾಜ್ಯದ ಹಲವು ಭಾಗಗಳಲ್ಲಿ ಮಳೆಯಿಂದಾಗಿ ಕೆರೆ, ಹಳ್ಳ, ಕೊಳ್ಳ, ಕೆರೆಗಳು ತುಂಬಿ ಹರಿದು ದೊಡ್ಡ ಮಟ್ಟದ ಅನಾಹುತ ಸೃಷ್ಟಿಸುತ್ತಿದ್ದರೆ, ಜಿಲ್ಲೆಯಲ್ಲಿ ಹಳ್ಳ, ಕೊಳ್ಳಗಳು ಹರಿಯುವುದಿರಲಿ, ಬಹುತೇಕ ಕೆರೆಗಳಲ್ಲಿ ಒಂದು ಅಡಿ ನೀರು ಸಂಗ್ರಹವಾಗಿಲ್ಲ.

ಜಿಲ್ಲೆಯಲ್ಲಿ ಒಟ್ಟು 1,632 ಕೆರೆಗಳಿದ್ದು, ಅದರಲ್ಲಿ 40 ಹೆಕ್ಟೇರ್‌ ಪ್ರದೇಶಕ್ಕಿಂತ ಕಡಿಮೆ ಇರುವ 1,232 ಕೆರೆಗಳು ಗ್ರಾಮ ಪಂಚಾಯಿತಿ ಸುಪರ್ದಿಯಲ್ಲಿವೆ. ಇವುಗಳಲ್ಲಿ ಕೆಲವು ಕೆರೆಗಳು ಭರ್ತಿಯಾಗಿದ್ದರೆ, ಬಹುತೇಕ ಕೆರೆಗಳು ಶೇ 60ರಷ್ಟು ಮಾತ್ರವೇ ಭರ್ತಿಯಾಗಿವೆ. ಇನ್ನೂ 40 ಹೆಕ್ಟೇರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ 400 ಕೆರೆಗಳು ಮೀನುಗಾರಿಕೆ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಇದರಲ್ಲಿ ಪ್ರಸ್ತುತ 190 ಕೆರೆಗಳ ನವೀಕರಣಕ್ಕೆ ಮಾತ್ರವೇ ಟೆಂಡರ್‌ದಾರರು ಒಲವು ತೋರಿದ್ದಾರೆ.

ADVERTISEMENT

ಕಳೆದ ವರ್ಷ ಮಳೆಗಾಲ ಮುಗಿದರೂ 233 ಕೆರೆಗಳು ಮಾತ್ರವೇ ಮತ್ಸ್ಯ ಪಾಲನೆಗೆ ಸಹಕಾರಿಯಾಗಿದ್ದವು. ಮಳೆ ನೀರುಶೇಖರಣೆಯಾಗದ 167 ಕೆರೆಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಯಾರೊಬ್ಬರೂ ಮುಂದೆ ಬರಲಿಲ್ಲ. ಇದರಿಂದಾಗಿ ಇಲಾಖೆಗೆ ₹1 ಕೋಟಿಯಷ್ಟು ಆದಾಯ ನಷ್ಟವಾಗಿತ್ತು. ಈ ವರ್ಷವೂ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗದೆ ಕೆರೆಗಳಿಗೆ ನೀರು ಹರಿದು ಬಂದಿಲ್ಲ.

ನಿರೀಕ್ಷೆಯಂತೆ ಜಿಲ್ಲೆಯ 400 ಕೆರೆಗಳು ಭರ್ತಿಯಾದರೆ ₹2 ಕೋಟಿಗೂ ಅಧಿಕ ಆದಾಯ ಮೀನುಗಾರಿಕೆ ಇಲಾಖೆ ಕೈ ಸೇರಲಿದೆ. ಕಳೆದ ವರ್ಷ 233 ಕೆರೆಗಳಿಂದ ₹1.37 ಕೋಟಿ ಆದಾಯವಷ್ಟೇ ಇಲಾಖೆ ಕೈ ಸೇರಿತ್ತು. ಪ್ರಸ್ತುತ 190 ಕೆರೆಗಳಿಂದ ₹86 ಲಕ್ಷ ಆದಾಯ ಇಲಾಖೆಯ ಕೈ ಸೇರಿದೆ.

ಜುಲೈ, ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಬಹುಪಾಲು ಕೆರೆಗಳುತುಂಬಲಿವೆ ಎಂದೇ ಎಲ್ಲರೂ ಅಂದಾಜಿಸಿದ್ದರು. ಈಗ ಬೀಳುತ್ತಿರುವ ಮಳೆ ಹನಿ ಭೂಮಿ ಸೇರುತ್ತಿದೆ. ಕೇವಲ ತೋಟಗಾರಿಕೆ ಬೆಳೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ಕೆರೆಗಳಿಗೆ ನೀರು ಹರಿದು ಬರುವಂತಹ ಬಿರುಸು ಮಳೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಮಳೆ ಜೋರಾದರೆ ಕೆರೆಗಳು ಭರ್ತಿಯಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಈಗಾಗಲೇ 300 ಹೆಕ್ಟೇರ್‌ ಪ್ರದೇಶಕ್ಕಿಂತ ಹೆಚ್ಚಿರುವ 32 ಕೆರೆಗಳನ್ನು ಸ್ವಸಹಾಯ ಸಂಘಗಳಿಗೆ ವಹಿಸಿಕೊಡಲಾಗಿದೆ. ಉಳಿದಂತೆ 201 ಕೆರೆಗಳನ್ನು ಟೆಂಡರ್‌ ಮತ್ತು ಹರಾಜು ಪ್ರಕ್ರಿಯೆ ಮೂಲಕ ಮೀನು ಸಾಕಾಣಿಕೆಗೆ ವಿಲೇವಾರಿ ಮಾಡಲಾಗಿದೆ. ಆದರೆ, ಈವರೆಗೆ 30 ಕೆರೆಗಳನ್ನು ರಿನಿವಲ್‌ ಹಾಗೂ 160 ಕೆರೆಗಳಿಗೆ ಟೆಂಡರ್ ಮತ್ತು ಹರಾಜು ಮಾಡಲಾಗಿದೆ.

ಮುಂದಿನ ತಿಂಗಳು ಹರಾಜು: ಹೇಮಾವತಿ ನದಿ ನೀರನ್ನು ಕೆರೆಗಳಿಗೆ ಹರಿಸುತ್ತಿದ್ದು, ಎಷ್ಟು ಕೆರೆಗಳು ಭರ್ತಿಯಾಗಲಿವೆ ಎಂದು ಪರಿಶೀಲಿಸಿ ಮುಂದಿನ ತಿಂಗಳು ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಲ್.ಕುಮಾರ್ ತಿಳಿಸಿದರು.

ಟೆಂಡರ್‌ದಾರರ ಹೊಂದಾಣಿಕೆ

ಹೆಚ್ಚು ಮೊತ್ತಕ್ಕೆ ಹರಾಜು ಕೂಗಿದವರಿಗೆ ಕೆರೆಗಳನ್ನು ಗುತ್ತಿಗೆ ನೀಡಲಾಗುತ್ತದೆ. ಆದರೆ ಅನೇಕರು ಹರಾಜು ಕೂಗುವ ಮುನ್ನವೇ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಹರಾಜು ಕೂಗಲು ಮುಂದೆ ಬರುವವರ ಮನವೊಲಿಸಿ, ಇಂತಿಷ್ಟು ಹಣ ನೀಡಿ ಅವರನ್ನು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಕೂಡ ಆದಾಯ ಕುಂಠಿತವಾಗಲು ಪ್ರಮುಖ ಕಾರಣವಾಗಿದೆ.

ಮೀನು ಮರಿ ಉತ್ಪಾದನಾ ಕೇಂದ್ರಗಳ ಕೊರತೆ

ಜಿಲ್ಲೆಯಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರಗಳ ಕೊರತೆ ಎದ್ದು ಕಾಣುತ್ತಿದೆ. ಪ್ರಸ್ತುತ ಕುಣಿಗಲ್‌ ತಾಲ್ಲೂಕಿನ ಮಾರ್ಕೊನಹಳ್ಳಿಯಲ್ಲಿ ಮಾತ್ರವೇ ಏಕೈಕ ಮೀನು ಮರಿ ಉತ್ಪಾದನಾ ಕೇಂದ್ರವಿದೆ. ಉಳಿದಂತೆ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಕೊರಟಗೆರೆ, ಶಿರಾ, ಮಧುಗಿರಿ, ಗುಬ್ಬಿಯಲ್ಲಿ ಮೀನು ಪರಿಪಾಲನಾ ಕೇಂದ್ರಗಳಿವೆ.

ದೂರದ ಭದ್ರ ಜಲಾಶಯ, ಶಿವಮೊಗ್ಗ ಸೇರಿದಂತೆ ದೂರದ ಜಿಲ್ಲೆ, ಹೊರರಾಜ್ಯಗಳಿಂದ ಮೀನುಮರಿಗಳನ್ನು ತರಿಸಲಾಗುತ್ತಿದೆ. ಇದರಿಂದ ಖರ್ಚು ಸಹ ಹೆಚ್ಚಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 4.17 ಲಕ್ಷ ಮಿನು ಮರಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ.

ಆನ್‌ಲೈನ್‌ ಟೆಂಡರ್‌ಗೆ ಬೇಡಿಕೆ

ಆನ್‌ಲೈನ್‌ ಟೆಂಡರ್‌ಗೆ ಅನೇಕರು ಒತ್ತಾಯಿಸಿದ್ದಾರೆ. ಆನ್‌ಲೈನ್‌ ಟೆಂಡರ್‌ ನಡೆದರೆ ಇಲಾಖೆಗೆ ಆದಾಯ ವೃದ್ಧಿಯಾಗಲಿದೆ. ಇಲ್ಲಿ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯುವುದರಿಂದ ಟೆಂಡರ್‌ ಪ್ರಕ್ರಿಯೆಯಲ್ಲಿ ಪ್ರಭಾವಿಗಳ ಕೈವಾಡ ತಪ್ಪಲಿದೆ ಎನ್ನುವುದು ಅವಕಾಶ ವಂಚಿತರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.