ತುಮಕೂರು: ರೈತರು, ಮಠಗಳು, ದೇವಾಲಯಗಳು, ಸರ್ಕಾರಿ ಶಾಲೆಗಳು, ಸಾರ್ವಜನಿಕರ ಆಸ್ತಿಯನ್ನು ವಕ್ಫ್‌ಗೆ ಪರಭಾರೆ ಮಾಡುತ್ತಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದ ಬಿಜಿಎಸ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ, ಅವರ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಧಿಕ್ಕಾರ, ಘೋಷಣೆಗಳು ಮೊಳಗಿದವು.
‘ನಮ್ಮ ಭೂಮಿ- ನಮ್ಮ ಹಕ್ಕು’ ಹೆಸರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ರೈತರು, ಮಠ ಮಾನ್ಯಗಳು ಸೇರಿದಂತೆ ಹಿಂದೂಗಳಿಗೆ ಸೇರಿದ ಜಮೀನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿ, ಕಬಳಿಸಲಾಗುತ್ತಿದೆ. ರೈತರಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸಿ, ಬೀದಿಗೆ ತಂದು ನಿಲ್ಲಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಅಲ್ಪಸಂಖ್ಯಾತರ ಒಲೈಕೆಗಾಗಿ ರೈತರು, ಮಠಗಳು, ದೇವಸ್ಥಾನಗಳ ಜಮೀನನ್ನು ಕಬಳಿಕೆ ಮಾಡಲಾಗುತ್ತಿದೆ. ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿ ರೈತರನ್ನು ಬೀದಿಗೆ ತಳ್ಳಲಾಗುತ್ತಿದೆ. ದೇಶದ ಭದ್ರತೆ, ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕೆಲಸದಲ್ಲಿ ಕಾಂಗ್ರೆಸ್ ಸರ್ಕಾರ ತೊಡಗಿದೆ. ವೋಟಿಗಾಗಿ ಮುಸ್ಲಿಮರಿಗೆ ದೇಶವನ್ನು ಒತ್ತೆ ಇಡಲಾಗುತ್ತಿದೆ’ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅಭಿವೃದ್ಧಿ ಶೂನ್ಯ ಸರ್ಕಾರ ಎಂಬ ಕಳಂಕ ಹೊತ್ತುಕೊಂಡಿದೆ. ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ವಕ್ಫ್ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದರು.
ಮುಖಂಡ ಎಂ.ಡಿ.ಲಕ್ಷ್ಮಿನಾರಾಯಣ, ‘ರೈತರ ಜಮೀನಿನ ಪಹಣಿಯಲ್ಲಿ ನಮೂದಿಸಿರುವ ವಕ್ಫ್ ಹೆಸರನ್ನು ತೆಗೆದು ರೈತರ ಹೆಸರು ನಮೂದಿಸಬೇಕು. ಇಂತಹ ವಿಚಾರ ಇಟ್ಟುಕೊಂಡು ರೈತರ ಜೀವನ ಹಾಳು ಮಾಡಲು ಹೊರಟಿದೆ’ ಎಂದು ಕಿಡಿಕಾರಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮುಖಂಡರಾದ ವಿನಯ್ ಬಿದರೆ, ಎಸ್.ಶಿವಪ್ರಸಾದ್, ದಿಲೀಪ್ ಕುಮಾರ್, ಅಂಬಿಕಾ, ಗಂಗರಾಜು, ಸಂದೀಪ್‍ಗೌಡ, ಎಚ್.ಎಂ.ರವೀಶಯ್ಯ, ಟಿ.ಎಚ್.ಹನುಮಂತರಾಜು, ಆಂಜನಪ್ಪ, ಹನುಮಂತರಾಯಪ್ಪ, ನವಚೇತನ್, ಬಿ.ಎಸ್.ನಾಗೇಶ್, ಭೈರಣ್ಣ, ಬೆಳ್ಳಿ ಲೋಕೇಶ್, ಸತ್ಯಮಂಗಲ ಜಗದೀಶ್, ಜ್ಯೋತಿ ತಿಪ್ಪೇಸ್ವಾಮಿ, ಬಿ.ಜಿ.ಕೃಷ್ಣಪ್ಪ, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಪುಟ್ಟರಾಜು, ಮಹೇಶ್‍ಬಾಬು, ಮಂಜುನಾಥ್, ಪ್ರೇಮಾ ಹೆಗಡೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.