ಕುಣಿಗಲ್: ಪಟ್ಟಣದ ಹೃದಯಭಾಗದಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಜಮೀನು ಬಳಕೆಯಾಗದೆ ತ್ಯಾಜ್ಯ ಸಂಗ್ರಹ ತಾಣವಾಗಿದೆ.
1989ರಲ್ಲಿ ಸ್ಟಡ್ ಫಾರಂ ವಶದಲ್ಲಿದ್ದ ಐದು ಎಕರೆ ಪ್ರದೇಶದಲ್ಲಿ ಸರ್ಕಾರಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಅಂದಿನ ಶಾಸಕ ಕೆ.ಲಕ್ಕಪ್ಪ ಶ್ರಮಿಸಿದ್ದರು. ಪಟ್ಟಣದ ಮೂಲಕವೇ ರಾಷ್ಟ್ರೀಯ ಹೆದ್ದಾರಿ 48 ಹಾದುಹೋಗಿದ್ದು, ವಿಶಾಲ ನಿಲ್ದಾಣ ನಿರ್ಮಾಣದ ಉದ್ದೇಶಕ್ಕೆ ಐದು ಎಕರೆ ಜಾಗ ಮಂಜೂರಾಗಿತ್ತು. ಮುಂದಿನ ದಿನಗಳಲ್ಲಿ ವಿಸ್ತರಿಸುವ ಉದ್ದೇಶದಿಂದ ಅರ್ಧ ಭಾಗದಲ್ಲಷ್ಟೇ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು.
ದಿನಕಳೆದಂತೆ ರಾಷ್ಟ್ರೀಯ ಹೆದ್ದಾರಿ 48 ಬದಲಾಗಿ 75 ಆಗಿದ್ದು, ಬೈಪಾಸ್ ರಸ್ತೆ ನಿರ್ಮಾಣವಾದ ನಂತರ ಬಸ್ ನಿಲ್ದಾಣ ವಿಸ್ತರಣೆಯ ಉದ್ದೇಶವನ್ನು ಕೈಬಿಡಲಾಯಿತು. ಸದ್ಯ ಉಳಿದಿರುವ 2.5 ಎಕರೆ ಪ್ರದೇಶವೂ ಬಸ್ ನಿಲ್ದಾಣ ಮತ್ತು ನ್ಯಾಯಾಲಯಗಳ ಮಧ್ಯಭಾಗದಲ್ಲಿದೆ. ಶಾಸಕರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಈ ಭಾಗದಲ್ಲಿ ಮಿನಿ ವಿಧಾನಸೌದ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ಪ್ರಯೋಜನವಾಗಲಿಲ್ಲ.
ಈ ಭಾಗದಲ್ಲಿ ಗಿಡಗಂಟಿ ಬೆಳೆದು ನಿಂತಿವೆ. ಆವರಣದ ತಂತಿ ಬೇಲಿ ಮುರಿದು ಬಿದ್ದಿದೆ. ಸುತ್ತಲಿನ ಮನೆಯವರು, ಮಳಿಗೆಯವರು, ಕೋಳಿ ಅಂಗಡಿಯವರು ನಿತ್ಯ ತ್ಯಾಜ್ಯವನ್ನು ಸುರಿಯುತ್ತಿರುವ ಕಾರಣ ಮಲಮೂತ್ರ ವಿಸರ್ಜನಾ ತಾಣವಾಗಿ ಮಾರ್ಪಟ್ಟಿದೆ.
ಬಸ್ ನಿಲ್ದಾಣ ಜಾಗದಲ್ಲಿ ಸಂಸ್ಥೆಯವರು ದ್ವಿಚಕ್ರ ವಾಹನ ನಿಲ್ದಾಣ ನಿರ್ಮಿಸಿದ್ದು, ಪ್ರತಿ ತಿಂಗಳು ₹1.36 ಸಾವಿರಕ್ಕೆ ಟೆಂಡರ್ ನೀಡಿ ಆದಾಯ ಹೆಚ್ಚಿಸಿಕೊಂಡಿದ್ದಾರೆ. ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ದ್ವಿಚಕ್ರ ಮತ್ತು ಕಾರುಗಳ ನಿಲುಗಡೆಗೆ ಸರಿಯಾದ ಜಾಗವಿರದ ಕಾರಣ ಎಲ್ಲರೂ ಪಾದಚಾರಿ ಮಾರ್ಗ ಬಳಕೆ ಮಾಡಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದಾರೆ. ಬಳಕೆಯಾಗದೆ ಉಳಿದಿರುವ ಜಾಗವನ್ನು ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಬಳಸಿಕೊಂಡು ಸಂಸ್ಥೆಯೂ ಆದಾಯ ಹೆಚ್ಚಿಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಪುರಸಭೆ ಮಾಜಿ ಉಪಾಧ್ಯಕ್ಷೆ ಎಸ್.ಟಿ.ಡಿ ಶ್ರೀನಿವಾಸ್, ಕರವೇ ಅಧ್ಯಕ್ಷ ಮಂಜುನಾಥ್, ವಿಶ್ವಕರ್ಮ ಸಮಾಜದ ಕೆ.ಬಿ.ಕುಮಾರ್ ಮನವಿ ಮಾಡಿದ್ದಾರೆ.
ಬೈಕ್ ಕಾರು ನಿಲುಗಡೆಗೆ ಅವಕಾಶ ಕಲ್ಪಿಸಿ
ಸಾರ್ವಜನಿಕ ಸ್ಥಳಗಳಲ್ಲಿ ದಿನಗಟ್ಟಲೆ ವಾಹನಗಳನ್ನು ನಿಲ್ಲಿಸಿ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು ದ್ವಿಚಕ್ರ ವಾಹನ ಕಳ್ಳತನವೂ ಹೆಚ್ಚುತ್ತಿದೆ. ವಾಹನಗಳ ನಿಲುಗಡೆಗೆ ಸುರಕ್ಷಿತ ಜಾಗದ ಅಗತ್ಯವಿದ್ದು ಬಳಕೆಯಾಗದೆ ಉಳಿದಿರುವ ಜಾಗದಲ್ಲಿ ಬೈಕ್ ಮತ್ತು ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಬೇಕು. ಮಲ್ಲಿಪಾಳ್ಯ ಶ್ರೀನಿವಾಸ್ ಪುರಸಭೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.