ADVERTISEMENT

ಹೊಳಪು ಕಳೆದುಕೊಂಡ ಪತ್ರಿಕೋದ್ಯಮ: ಪ್ರೊ.ಕೆ.ವಿ.ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 6:09 IST
Last Updated 20 ಜುಲೈ 2024, 6:09 IST
<div class="paragraphs"><p>ತುಮಕೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಧ್ಯಮ ಹಬ್ಬ ಕಾರ್ಯಕ್ರಮಕ್ಕೆ ನಿವೃತ್ತ ಪ್ರಾಧ್ಯಾಪಕ ಕೆ.ವಿ.ನಾಗರಾಜ್‌ ಚಾಲನೆ ನೀಡಿದರು. </p></div>

ತುಮಕೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಧ್ಯಮ ಹಬ್ಬ ಕಾರ್ಯಕ್ರಮಕ್ಕೆ ನಿವೃತ್ತ ಪ್ರಾಧ್ಯಾಪಕ ಕೆ.ವಿ.ನಾಗರಾಜ್‌ ಚಾಲನೆ ನೀಡಿದರು.

   

ತುಮಕೂರು: ಪ್ರತಿಯೊಬ್ಬರೂ ಡಿಜಿಟಲ್‌ ಪ್ರಜಾಪ್ರಭುತ್ವ ಬಯಸುತ್ತಿದ್ದಾರೆ. ಉತ್ಕೃಷ್ಟರಾಗಲು ತಂತ್ರಜ್ಞಾನ ಬಳಸಿಕೊಂಡರೆ ಕೆಡುಕು ಇರುವುದಿಲ್ಲ. ತಂತ್ರಜ್ಞಾನದ ರೂಪಾಂತರದಿಂದ ಉತ್ತರ ಭಾರತದಲ್ಲಿ ಡಿಜಿಟಲ್ ಅನಾಗರಿಕತೆ ನೋಡುತ್ತೇವೆ ಎಂದು ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಪ್ರೊ.ಕೆ.ವಿ.ನಾಗರಾಜ್‌ ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ‘ವಿಕಸಿತ್ ಭಾರತ್@2047: ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಡಿಜಿಟಲ್‌ ರೂಪಾಂತರ ಮತ್ತು ಮಾಧ್ಯಮ ಸಂಗಮದ ಪಾತ್ರ’ ಕುರಿತ ಬಹುಶಿಸ್ತೀಯ ಸಮ್ಮೇಳನ, ಮಾಧ್ಯಮ ಹಬ್ಬ ‘ಇಂಪ್ರೆಶನ್-2024’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

ತಂತ್ರಜ್ಞಾನದ ಕ್ರಾಂತಿಯಿಂದ ಮಾಧ್ಯಮಗಳು ‘ಡಿ ಗ್ಲಾಮರೈಸ್’ ಆಗಿವೆ. ಎಲ್ಲರೂ ಸಂವಹನಕಾರರಾಗಿದ್ದು, ಪತ್ರಿಕೋದ್ಯಮ ಪದ ‘ಸಂವಹನಕಾರ’ ಎಂದು ಬದಲಾಗುತ್ತಿದೆ. ಮುಂದುವರಿದ ದೇಶಗಳಲ್ಲಿ ಸಂವಹನ ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಭಾರತದ ಅನೇಕ ಪತ್ರಕರ್ತರು ಸವಲತ್ತು ಹುಡುಕುತ್ತಾರೆ. ಇದರಿಂದ ವೃತ್ತಿಯು ತನ್ನ ಹೊಳಪು ಕಳೆದುಕೊಳ್ಳುತ್ತದೆ ಎಂದರು.

ಭಾರತೀಯ ಪತ್ರಿಕೋದ್ಯಮದಲ್ಲಿ ಈಚೆಗೆ ಪಾಶ್ಚಾತ್ಯೀಕರಣ ಪ್ರವೇಶಿಸಿದೆ. ಆದರೆ ಏಷ್ಯಾದ ಪತ್ರಿಕೋದ್ಯಮ ಸಂಸ್ಕೃತಿ ಮತ್ತು ನಂಬಿಕೆಗೆ ಋಣಿಯಾಗಿರುವುದರಿಂದ, ಇಲ್ಲಿ ನಾವು ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಕೆ.ರವಿ, ‘ಕೃತಕ ಬುದ್ಧಿಮತ್ತೆ ಪ್ರಪಂಚವನ್ನು ಆಳುತ್ತದೆ ಎಂಬ ಭ್ರಮೆ ಬೇಡ. ಅದು ಮನುಷ್ಯನ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತದೆ’ ಎಂದು ಹೇಳಿದರು.

ಪತ್ರಕರ್ತ ಎ.ಹರಿಪ್ರಸಾದ್‌, ‘ಪತ್ರಕರ್ತ ಭ್ರಷ್ಟಾಚಾರಿ, ಕೋಮುವಾದಿ, ಜಾತಿವಾದಿ ಆಗಬಾರದು. ಧ್ವನಿ ಇಲ್ಲದ, ಶೋಷಿತರ ಪರ ನಿಲ್ಲಬೇಕು. ಪತ್ರಿಕೋದ್ಯಮವಷ್ಟೇ ಎಲ್ಲರನ್ನೂ ಸಮಾನವಾಗಿ ಕಾಣಲು ಸಾಧ್ಯ’ ಎಂದು ತಿಳಿಸಿದರು.

ಭೋಪಾಲ್‍ನ ಮಖನ್‍ಲಾಲ್‌ ಚತುರ್ವೇದಿ ಪತ್ರಿಕೋದ್ಯಮ ವಿ.ವಿ ಕುಲಪತಿ ಪ್ರೊ.ಕೆ.ಜಿ.ಸುರೇಶ್‌ ಉಪನ್ಯಾಸ ನೀಡಿದರು. ಸಮ್ಮೇಳನದಲ್ಲಿ ವಿವಿಧ ವಿಷಯ ಕುರಿತು ಗೋಷ್ಠಿಗಳು ನಡೆದವು. ಬೆಂಗಳೂರು ಉತ್ತರ ವಿ.ವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ಪ್ರೊ.ಬಿಪ್ಲಬ್ ಲೋಹೋ ಚೌಧರಿ, ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ, ಯು.ಬಿ.ಪವನಜ, ಪ್ರೊ.ರಮೇಶ್ ಸಾಲಿಯಾನ್, ಸಂಸ್ಕೃತಿ ಗುಲ್ವಾಡಿ, ಪ್ರೊ.ಎಂ.ಎಸ್‌.ಸಪ್ನಾ ಸಂವಾದದಲ್ಲಿ ಭಾಗವಹಿಸಿದ್ದರು.

ತುಮಕೂರು ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್‌ ಜಮ್‌, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್‌, ಒಡಿಶಾದ ಉತ್ಕಲ್‌ ವಿ.ವಿ ಮಾಧ್ಯಮ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಉಪೇಂದ್ರ ಪಾಢಿ, ಮಾಧ್ಯಮ ಹಬ್ಬದ ಸಂಘಟನಾ ಕಾರ್ಯದರ್ಶಿ ಕೆ.ವಿ.ಸಿಬಂತಿ ಪದ್ಮನಾಭ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.