ADVERTISEMENT

ಉಪಜಾತಿ ಬಿಡಿ, ‘ಬ್ರಾಹ್ಮಣ’ ಎಂದು ನಮೂದಿಸಿ

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 6:32 IST
Last Updated 8 ಜನವರಿ 2021, 6:32 IST
ಮಧುಗಿರಿಯಲ್ಲಿ ಗುರುವಾರ ಶಂಕರ ಸೇವಾ ಸಮಿತಿಯಿಂದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಅವರನ್ನು ಸನ್ಮಾನಿಸಲಾಯಿತು
ಮಧುಗಿರಿಯಲ್ಲಿ ಗುರುವಾರ ಶಂಕರ ಸೇವಾ ಸಮಿತಿಯಿಂದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಅವರನ್ನು ಸನ್ಮಾನಿಸಲಾಯಿತು   

ಮಧುಗಿರಿ: ‘ಮುಂದಿನ ಜನಗಣತಿ ಸಂದರ್ಭದಲ್ಲಿ ಉಪ ಜಾತಿಗಳನ್ನು ಬದಿಗೊತ್ತಿ ಬ್ರಾಹ್ಮಣ ಎಂದು ನಮೂದಿಸಿ’ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಹೇಳಿದರು.

ಪಟ್ಟಣದ ರಾಘವೇಂದ್ರ ಕಾಲೊನಿಯಲ್ಲಿರುವ ಶಂಕರ ಮಠ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಮಾತನಾಡಿದರು.

‘ರಾಜ್ಯದಲ್ಲಿ 42 ಲಕ್ಷಕ್ಕಿಂತ ಹೆಚ್ಚು ನಮ್ಮ ಸಮುದಾಯದ ಜನಸಂಖ್ಯೆ ಇದೆ. ಆದರೆ ಇತ್ತೀಚಿನ ಜನಗಣತಿಯಲ್ಲಿ 42 ಉಪಜಾತಿಗಳನ್ನು ವಿಂಗಡಿಸಲಾಗಿ 17.80 ಲಕ್ಷ ಜನಸಂಖ್ಯೆ ಎಂದು ವರದಿ ನೀಡಲಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಶಂಕರ ಮಠ ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲ ರೀತಿಯ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ನಮ್ಮ ಸಮುದಾಯದ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಸಲಹೆ ನೀಡಿದರು.

ಬಹಳ ಹಿಂದಿನಿಂದಲೂ ಸಮಾಜದಲ್ಲಿ ಬ್ರಾಹ್ಮಣರ ಬಗ್ಗೆ ಅಪಾರ ಗೌರವ ಹಾಗೂ ನಂಬಿಕೆ ಇದೆ. ನಾವು ಉತ್ತಮ ನಡುವಳಿಕೆಯಿಂದ ಸಂಸ್ಕಾರವಂತರಾಗಿ ಬ್ರಾಹ್ಮಣತ್ವ ಉಳಿಸಿಕೊಳ್ಳಬೇಕು
ಎಂದರು.

ಮಂಡಳಿ ನಿರ್ದೇಶಕರಾದ ಡಿ.ವಿ.ರಾಜೇಂದ್ರಪ್ರಸಾದ್, ರಂಗವಿಠಲ್, ತಾಲ್ಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ತಾಡಿ ಶಿವರಾಮ್, ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ, ಮಾಜಿ ಅಧ್ಯಕ್ಷ ನಾಗರಾಜ ಶಾಸ್ತ್ರೀ, ಪುರಸಭಾ ಸದಸ್ಯ ಕೆ.ನಾರಾಯಣ್, ಮುಖಂಡರಾದ ಪಿ.ಆರ್.ನಂಜುಂಡಯ್ಯ, ಆದಿಶೇಷ, ಲಕ್ಷ್ಮಿ ಪ್ರಸಾದ್, ಸೂರ್ಯನಾರಾಯಣ ರಾವ್, ವಿನಯ್ ಶರ್ಮ, ಜಿ.ಆರ್.ರಂಗನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.