ADVERTISEMENT

ಚುನಾವಣೆಯಲ್ಲಿ ಸೋತಿರುವೆ, ಸತ್ತಿಲ್ಲ; ಹೋರಾಟ ನಿರಂತರ: ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 14:23 IST
Last Updated 26 ಜೂನ್ 2024, 14:23 IST
<div class="paragraphs"><p> ಡಿ.ಕೆ.ಸುರೇಶ್</p></div>

ಡಿ.ಕೆ.ಸುರೇಶ್

   

ಕುಣಿಗಲ್: ‘ಲೋಕಸಭಾ ಚುನಾವಣೆಯಲ್ಲಿ ಸೋತಿರುವೆ, ಸತ್ತಿಲ್ಲ. ತಾಲ್ಲೂಕಿನ ಜನರಿಗೆ ಹೇಮಾವತಿ ನೀರಿನ ವಿಚಾರವಾಗಿ ಆಗಿರುವ ಅನ್ಯಾಯ ಸರಿಪಡಿಸಲು ನಿರಂತರ ಹೋರಾಟ ಮುಂದುವರೆಸಲಾಗುವುದು’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೇಮಾವತಿ ನಾಲಾ ಯೋಜನೆ ರೂಪಿತವಾಗಿದ್ದೆ ತಾಲ್ಲೂಕಿನ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ. ಆದರೆ ನೀರಿಗಾಗಿ ಹೋರಾಟ ಮಾಡಿ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದ ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ ಶ್ರಮ ಸಾರ್ಥಕವಾಗಿಲ್ಲ. ಮೂಲ ಯೋಜನೆಯ ಪ್ರಕಾರ ಕುಣಿಗಲ್ ಭಾಗಕ್ಕೆ ಹರಿಯಬೇಕಿದ್ದ ನೀರು, ಜಿಲ್ಲೆಯ ಇತರೆ ಅಂದರೆ ಮೂಲ ಯೋಜನೆಯಲ್ಲಿಲ್ಲದ ಮತ್ತೂ ಕೃಷ್ಣ ಮೇಲ್ದಂಡೆ ಪ್ರದೇಶಗಳಿಗೆ ಹರಿಯುತ್ತಿದೆ ಎಂದು ದೂರಿದರು.

ADVERTISEMENT

ತಾಲ್ಲೂಕಿಗೆ 3.5 ಟಿಎಂಸಿ ನೀರು ಹರಿಯಬೇಕಾಗಿದ್ದು, ಜಿಲ್ಲೆಗೆ ನಿಗದಿಯಾದ ನೀರು ಬಂದಿದ್ದರೂ, ತಾಲ್ಲೂಕಿನ ಪಾಲಿನ ನೀರು ಇದುವರೆಗೂ ಹರಿದಿಲ್ಲ. ಹೇಮಾವತಿ ನೀರು ಕುಣಿಗಲ್ ಭಾಗಕ್ಕೆ ಬರುವ ಮಾಹಿತಿ ತಿಳಿಯುವ ಪಕ್ಕದ ಕ್ಷೇತ್ರದ ಶಾಸಕರು ಮತ್ತು ರೈತರು, ಅಧಿಕಾರಿಗಳನ್ನು ಬೆದರಿಸಿ ನೀರು ಪಡೆದುಕೊಂಡು ಅನ್ಯಾಯ ಮಾಡಿದ್ದಾರೆ. ತಾಲ್ಲೂಕಿನ ರೈತರಿಗೆ ಎರಡು ದಶಕಗಳಿಂದ ಆಗುತ್ತಿರುವ ಅನ್ಯಾಯ ಸರಿಪಡಿಸುವ ಉದ್ದೇಶದಿಂದ ಲಿಂಕ್ ಕೆನಾಲ್ ಯೋಜನೆ ಜಾರಿಗೆ ಬಂದಿದೆ. ಯೋಜನೆಯ ಸಫಲತೆಗಾಗಿ ಜಿಲ್ಲೆ ಜನಪ್ರತಿನಿಧಿಗಳು ಸಮಯ ನೀಡಿದರೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಸದ್ಯಕ್ಕೆ ಕ್ಷೇತ್ರದ ಜನತೆ ವಿಶ್ರಾಂತಿ ನೀಡಿದ್ದಾರೆ. ಚುನಾವಣಾ ರಾಜಕಾರಣದಿಂದ ದೂರವಿರುವುದಾಗಿ ತಿಳಿಸಿದರೂ ಪಕ್ಷದ ನಿರ್ಧಾರಗಳಿಗೆ ಬದ್ಧ ಎಂದರು.

ನೀಟ್ ಹಗರಣ ಆರ್‌ಎಸ್‌ಎಸ್ ಕೈವಾಡ ಶಂಕೆ: ನೀಟ್ ಹಗರಣದಲ್ಲಿ ಬಿಜೆಪಿ ಪಾತ್ರವಿದ್ದರೂ ಆರ್‌ಎಸ್‌ಎಸ್ ಮೂಲದ ಪಾತ್ರಗಳು ಹೆಚ್ಚಾಗಿರುವ ಶಂಕೆ ಇದೆ. ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಧ್ವನಿ ಎತ್ತಿದ ಪರಿಣಾಮ ಸಂಚು ನಡೆದಿದೆ. ವೈದ್ಯಕೀಯ ಶಿಕ್ಷಣದಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ವಂಚನೆಯಾಗುತ್ತಿದೆ ಎಂದು ಡಿ.ಕೆ. ಸುರೇಶ್‌ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.