ADVERTISEMENT

ತುಮಕೂರು: ಬಿಜೆಪಿಗೆ ಯಾರು ‘ಆಸರೆ’ ಆಗಲಿದ್ದಾರೆ?

ಕೆ.ಜೆ.ಮರಿಯಪ್ಪ
Published 30 ಆಗಸ್ಟ್ 2023, 6:37 IST
Last Updated 30 ಆಗಸ್ಟ್ 2023, 6:37 IST
ಬಿಜೆಪಿ
ಬಿಜೆಪಿ    

ತುಮಕೂರು: ವಿಧಾನಸಭೆ ಸೋಲಿನ ನಂತರ ಜಿಲ್ಲೆಯಲ್ಲಿ ಬಿಜೆಪಿ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ರಾಜ್ಯದಲ್ಲಿ ಪಕ್ಷ ಮುನ್ನಡೆಸುವ ನಾವಿಕನಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಅದರ ಪರಿಣಾಮ ಜಿಲ್ಲೆಯ ಮೇಲೂ ಆಗಿದೆ. ಆದರೆ ವಿಧಾನಸಭೆ ಸೋಲನ್ನು ಲೋಕಸಭೆ ಚುನಾವಣೆಯಲ್ಲಿ ತೀರಿಸಿಕೊಳ್ಳುವ ಪ್ರಯತ್ನವಂತೂ ಆರಂಭವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಕಾಂಗ್ರೆಸ್‌ಗಿಂತ ಬಿಜೆಪಿಯನ್ನು ಕೈ ಹಿಡಿದಿದ್ದೇ ಹೆಚ್ಚು. ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳಲು ಪಕ್ಷದಲ್ಲಿ ಈಗಾಗಲೇ ತಾಲೀಮು ಆರಂಭಿಸಿದೆ. ಹಾಲಿ ಸಂಸದ ಜಿ.ಎಸ್.ಬಸವರಾಜು ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಪರ್ಯಾಯ ನಾಯಕನ ಹುಡುಕಾಟಕ್ಕೆ ಚಾಲನೆ ಸಿಕ್ಕಿದೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್‌ನಲ್ಲಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರು. ಅಲ್ಲಿ ಟಿಕೆಟ್ ಕೈ ತಪ್ಪಿದ್ದು, ಲೋಕಸಭೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಮಾಧಾನಪಡಿಸಿದ್ದರು. ಆ ಕಾರಣಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಡ ಪಕ್ಷದ ಹೈಕಮಾಂಡ್ ಮೇಲೆ ಹೆಚ್ಚುತ್ತಿದೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಪಕ್ಷಕ್ಕೆ ಬರಮಾಡಿಕೊಂಡು ಅವಕಾಶ ನೀಡಲಿಲ್ಲ ಎಂಬ ಅಪವಾದವನ್ನೂ ಹೊರಬೇಕಾಗುತ್ತದೆ. ಜತೆಗೆ ಒಕ್ಕಲಿಗ ಸಮುದಾಯವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂಬ ಆತಂಕವೂ ನಾಯಕರನ್ನು ಕಾಡುತ್ತಿದೆ. ಗೌಡರು ಕಾಂಗ್ರೆಸ್ ನಾಯಕರ ಜತೆಗೆ ಸಂಪರ್ಕದಲ್ಲಿ ಇರುವುದರಿಂದ ಮುಂದಿನ ಬೆಳವಣಿಗೆಯನ್ನು ಕಾದು ನೋಡಲಾಗುತ್ತಿದೆ.

ADVERTISEMENT

ಹಾಲಿ ಸಂಸದ, ಲಿಂಗಾಯತ ಸಮುದಾಯದ ಜಿ.ಎಸ್.ಬಸವರಾಜು ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ ಅದೇ ಸಮುದಾಯಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಯೂ ಜೋರಾಗಿ ಕೇಳಿ ಬಂದಿದೆ. ಹಳೆ ಮೈಸೂರು ಭಾಗದಲ್ಲಿ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಲು ಸಾಧ್ಯವಿದ್ದರೆ ಅದು ತುಮಕೂರು ಕ್ಷೇತ್ರ ಮಾತ್ರ. ಇಲ್ಲಿ ಅವಕಾಶ ನೀಡದಿದ್ದರೆ ಮೈಸೂರು ಭಾಗದಲ್ಲಿ ಲಿಂಗಾಯತ ಸಮುದಾಯವನ್ನು ಬಿಜೆಪಿಯಿಂದ ದೂರವಿಟ್ಟಂತಾಗುತ್ತದೆ. ಹಾಗಾಗಿ ಸಮುದಾಯಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.

ಲಿಂಗಾಯತರಿಗೆ ಅವಕಾಶ ಕೊಡಬೇಕು ಎಂದಾದರೆ ಅಂತಹ ಸಮರ್ಥ ನಾಯಕ ಪಕ್ಷದ ಹೈಕಮಾಂಡ್ ಮುಂದೆ ಕಾಣುತ್ತಿಲ್ಲ. ಇದೇ ಸಮುದಾಯದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಅವಕಾಶ ಮಾಡಿಕೊಡುವ ಚಿಂತನೆ ನಡೆದಿದ್ದರೂ ಸಮಾಜದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವೀರಶೈವ ಲಿಂಗಾಯತರ ಒಳಪಂಗಡದ ವಿಚಾರ ಬಂದರೆ ಮಾಧುಸ್ವಾಮಿ ಅಲ್ಪಸಂಖ್ಯಾತರಾಗುತ್ತಾರೆ. ಉಳಿದವರು ಬೆಂಬಲ ನೀಡುವುದಿಲ್ಲ. ಪಕ್ಷದ ಇತರೆ ನಾಯಕರ ಜತೆಗೂ ಉತ್ತಮ ಸಂಬಂಧವಿಲ್ಲ. ಸಂಸದ ಬಸವರಾಜು, ಶಾಸಕ ಸುರೇಶ್‌ಗೌಡ ಸೇರಿದಂತೆ ಹಲವರು ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಒಳಗೆ ಹಾಗೂ ಹೊರಗಿನ ವಿರೋಧ ಎದುರಿಸುವುದು ಅವರಿಗೆ ದೊಡ್ಡ ಸವಾಲಾಗಿದೆ.

ಮಾಧುಸ್ವಾಮಿ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ಇರುವುದು ಗುಟ್ಟಾಗಿ ಉಳಿದಿಲ್ಲ. ಹಿಂದೊಮ್ಮೆ ಮಾತುಕತೆ ನಡೆಸಿದ ವಿಚಾರ ಹೊರ ಬರುತ್ತಿದ್ದಂತೆ ‘ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ನನಗೇನು ತಲೆ ಕೆಟ್ಟಿದೆಯೆ?’ ಎಂದು ಪ್ರತಿಕ್ರಿಯೆ ನೀಡಿದ್ದರು. ಇತ್ತೀಚೆಗೆ ಮತ್ತೆ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ಇರುವ ವಿಷಯ ಬಿಜೆಪಿ ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಅವರು ಎರಡು ದೋಣಿಯಲ್ಲಿ ಕಾಲಿಟ್ಟು ಸಾಗುತ್ತಿದ್ದಾರೆ. ಮಾಧುಸ್ವಾಮಿ ಪಕ್ಷದಲ್ಲೇ ಉಳಿಯುವರೊ? ಇಲ್ಲ ಪಕ್ಷ ಬಿಟ್ಟು ಹೋಗುತ್ತಾರೊ? ಎಂಬ ಸ್ಪಷ್ಟತೆ ಇಲ್ಲದೆ ನಾಯಕರು ಯಾವುದೇ ನಿಲುವುದು ತಾಳಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಇಂತಹ ಪರಿಸ್ಥಿತಿಯಲ್ಲಿ ‘ಸಮರ್ಥ’ರಾದ ಲಿಂಗಾಯತ ಸಮುದಾಯದ ಯುವ ಮುಖದತ್ತ ಹೈಕಮಾಂಡ್ ಚಿತ್ತ ಹರಿಸಿದೆ. ಪರ್ಯಾಯ ಅಭ್ಯರ್ಥಿಗಾಗಿ ಶೋಧ ನಡೆದಿದೆ. ಒಂದು ವೇಳೆ ಮುದ್ದಹನುಮೇಗೌಡರಿಗೆ ಟಿಕೆಟ್ ಕೈ ತಪ್ಪಿದರೆ ಲಿಂಗಾಯತರಿಗೆ ಅವಕಾಶ ಖಚಿತ ಎಂದು ಹೇಳಲಾಗುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಸಮುದಾಯವನ್ನು ಪಕ್ಷದಲ್ಲಿ ಹಿಡಿದಿಟ್ಟುಕೊಳ್ಳಲು ಅವಕಾಶ ನೀಡಲೇಬೇಕು ಎಂಬ ಬೇಡಿಕೆಗೆ ಹೈಕಮಾಂಡ್ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳು ಟಿಕೆಟ್‌ಗೆ ಪ್ರಯತ್ನ ಆರಂಭಿಸಿದ್ದು, ಇದಕ್ಕೆಲ್ಲ ಹೈ ಕಮಾಂಡ್ ಮಣೆ ಹಾಕುತ್ತಿಲ್ಲ. ಪಕ್ಷದ ಸಂಘಟನೆ ಹಾಗೂ ಮುನ್ನೋಟವನ್ನು ಆಧರಿಸಿ ಈ ಬಾರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸಮೀಕ್ಷೆಯಲ್ಲೂ ಹಿನ್ನಡೆ

ಈಗಾಗಲೇ ಬಿಜೆಪಿ ಆತಂಕರಿಕವಾಗಿ ಸಮೀಕ್ಷೆ ನಡೆಸಿದ್ದು, ಮಾಧುಸ್ವಾಮಿಗೆ ಕೊನೆಯ ಸ್ಥಾನ ಸಿಕ್ಕಿದೆ. ಮುದ್ದಹನುಮೇಗೌಡ ಮೊದಲ ಆಯ್ಕೆ ಆಗಿದ್ದರೆ, ಎರಡನೇ ಆಯ್ಕೆ ಡಾ.ಎಂ.ಆರ್.ಹುಲಿನಾಯ್ಕರ್ ಆಗಿದ್ದಾರೆ. ಮಾಧುಸ್ವಾಮಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಹಾಗಾಗಿ ಅವರನ್ನು ಪರಿಗಣಿಸುವುದು ಕಷ್ಟಕರ ಎಂದು ಹೇಳಲಾಗುತ್ತಿದೆ.

ರಾಜ್ಯ ಘಟಕದ ಅಧ್ಯಕ್ಷ, ವಿರೋಧ ಪಕ್ಷದ ನಾಯಕರ ಆಯ್ಕೆಯ ನಂತರ ಪಕ್ಷದ ವತಿಯಿಂದ ಮತ್ತೊಂದು ಸುತ್ತು ಸಮೀಕ್ಷೆ ನಡೆಸಲಾಗುತ್ತದೆ. ಆ ವರದಿ ಆಧಾರದ ಮೇಲೆ ಕೆಲವು ಮಾನದಂಡಗಳನ್ನು ಇಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

2 ಸ್ಥಾನಕ್ಕೆ ಇಳಿಕೆ

ಜಿಲ್ಲೆಯಲ್ಲಿ ಐವರು ಶಾಸಕರನ್ನು ಹೊಂದಿದ್ದ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಸ್ಥಾನಕ್ಕೆ ಕುಸಿದಿದೆ. ಸಚಿವರಾಗಿದ್ದ ಜೆ.ಜಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್ ಸೋತಿದ್ದಾರೆ. ತುಮಕೂರು ನಗರ ಕ್ಷೇತ್ರವನ್ನಷ್ಟೇ ಉಳಿಸಿಕೊಳ್ಳಲು ಸಾಧ್ಯವಾಗಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿ ಮೊತ್ತೊಮ್ಮೆ ಅಧಿಕಾರ ಹಿಡಿದಿದೆ. ಮತ ಗಳಿಕೆಯಲ್ಲೂ ಹಿಂದಿಗಿಂತ ಕುಸಿತ ಕಂಡಿದೆ.

ಸುರೇಶ್‌ಗೌಡ ಭೇಟಿ ಗುಟ್ಟೇನು?

ಜಲಸಂಪನ್ಮೂಲ ಸಚಿವರೂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹೋದರ, ಸಂಸದ ಡಿ.ಕೆ.ಸುರೇಶ್‌ ಅವರನ್ನು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶ್‌ಗೌಡ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

‘ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿಲ್ಲ’ ಎಂದು ಸುರೇಶ್‌ಗೌಡ ಸ್ಪಷ್ಟನೆ ನೀಡಿದ್ದಾರೆ. ಪಕ್ಷ ಬಿಡದಿದ್ದರೆ ಸುರೇಶ್ ಅವರನ್ನು ಏಕೆ ಭೇಟಿಯಾಗುತ್ತಿದ್ದರು?. ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರೆ ಅಭಿವೃದ್ಧಿ ವಿಚಾರ ಚರ್ಚಿಸಿರಬಹುದು ಎನ್ನಬಹುದಿತ್ತು. ಆದರೆ ಸುರೇಶ್ ಭೇಟಿ ಉದ್ದೇಶವೇನು ಎಂಬುದು ಪ್ರಮುಖವಾಗಿ ಪಕ್ಷದ ಅಂಗಳಲ್ಲಿ ಚರ್ಚೆಯಾಗುತ್ತಿದೆ. ವಿಧಾನಸಭೆ ಚುನಾವಣೆಗೆ ಸಮಯದಲ್ಲಿ ಕಾಂಗ್ರೆಸ್ ಸೇರಬಹುದು ಎಂಬ ಸುದ್ದಿ ಹರಿದಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.