ತುಮಕೂರು: ಲೋಕಸಭೆ ಕ್ಷೇತ್ರದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟಾರೆಯಾಗಿ ಶೇ 78.05ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಗುಬ್ಬಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ 82.76ರಷ್ಟು ಮತದಾನವಾಗಿದ್ದರೆ, ನಂತರದ ಸ್ಥಾನದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರ (ಶೇ 82.08) ಇದೆ. ತುಮಕೂರು ನಗರದಲ್ಲಿ ಅತಿ ಕಡಿಮೆ ಶೇ 67.38ರಷ್ಟು ಜನರು ಮತದಾನ ಮಾಡಿದ್ದಾರೆ.
ಮುಂದೆ ಬಾರದ ಮಹಿಳೆಯರು: ಒಟ್ಟು 16,61,309 ಮತದಾರರಲ್ಲಿ 8,42,170 ಮಹಿಳಾ ಮತದಾರರು ಇದ್ದಾರೆ. ಪುರುಷರಿಗಿಂತ 23,105 ಮಂದಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ತಮ್ಮ ಹಕ್ಕು ಚಲಾಯಿಸಲು ಮುಂದೆ ಬಂದಿಲ್ಲ. ಕೇವಲ 6,46,767 (ಶೇ 76.80) ಸ್ತ್ರೀಯರು ಮತದಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಪುರುಷರಲ್ಲಿ 6,49,934 (ಶೇ 79.35) ಮಂದಿ ಮತ ಹಾಕಿದ್ದಾರೆ.
2019ರ ಚುನಾವಣೆಯಲ್ಲಿ ಶೇ 77.43ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನ ಹೆಚ್ಚಿಸಲು ಸ್ವೀಪ್ ಸಮಿತಿ ಸಾಕಷ್ಟು ಪ್ರಯತ್ನ ನಡೆಸಿತ್ತು. ಮತದಾನ ಪ್ರಮಾಣನ್ನು ಶೇ 80ರಷ್ಟಕ್ಕೆ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡು ಸತತ ಪ್ರಯತ್ನ ನಡೆಸಿದರು ಫಲಕೊಟ್ಟಿಲ್ಲ. ತುಮಕೂರು ನಗರದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿರುವುದು ಈ ಗುರಿ ಮುಟ್ಟಲು ಸಾಧ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.