ADVERTISEMENT

ಸೋಮಣ್ಣ vs ಮುದ್ದಹನುಮೇಗೌಡ: ಮಧ್ಯಾಹ್ನದ ವೇಳೆಗೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 2:14 IST
Last Updated 4 ಜೂನ್ 2024, 2:14 IST
   

ತುಮಕೂರು: ತೀವ್ರ ಹಣಾಹಣಿ, ಕುತೂಹಲ ಮೂಡಿಸಿರುವ ತುಮಕೂರು ಲೋಕಸಭೆ ಕ್ಷೇತ್ರದ ಚುನಾವಣೆ ಫಲಿತಾಂಶ ಮಂಗಳವಾರ ಮಧ್ಯಾಹ್ನದ ವೇಳೆಗೆ ಹೊರ ಬೀಳಲಿದೆ. 12 ಗಂಟೆ ಹೊತ್ತಿಗೆ ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಗಳಿವೆ.

ಕಾಂಗ್ರೆಸ್‌ನ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿಯ ವಿ.ಸೋಮಣ್ಣ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಯಾರು ಗೆದ್ದರೂ ಹೆಚ್ಚಿನ ಮತಗಳ ಅಂತರ ಇರುವುದಿಲ್ಲ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಕೆಲವು ಲೆಕ್ಕಾಚಾರ, ಒಳಗುಟ್ಟುಗಳನ್ನು ಮುಂದಿಟ್ಟುಕೊಂಡು ಇಬ್ಬರು ಅಭ್ಯರ್ಥಿಗಳು ತಮ್ಮದೇ ಗೆಲವು ಎಂಬ ವಾದವನ್ನು ಮಂಡಿಸುತ್ತಿದ್ದಾರೆ. ಯಾರ ‘ಲೆಕ್ಕ ಪಕ್ಕ’ ಎಂಬುದು ಮಂಗಳವಾರ ಗೊತ್ತಾಗಲಿದೆ.

ಮತಗಟ್ಟೆ ಸಮೀಕ್ಷೆಗಳು ಹೊರಬಂದ ನಂತರವೂ ಬಿಜೆಪಿ ಹಾಗೂ ಜೆಡಿಎಸ್ ಪಾಳಯದಲ್ಲಿ ಉತ್ಸಾಹ ಕಡಿಮೆಯಾಗಿಲ್ಲ. ‘ನಮ್ಮ ಲೆಕ್ಕಾಚಾರ, ಊಹೆ ಸರಿಯಾಗಿದೆ. ಸಮೀಕ್ಷೆ ಏನೇ ಹೇಳಲಿ, ಗೆಲುವು ತಮ್ಮದೇ’ ಎನ್ನುತ್ತಿದ್ದಾರೆ. ಬೆಂಬಲಿಗರು, ಕಾರ್ಯಕರ್ತರಿಂದ ಸಂಗ್ರಹಿಸಿದ ಮಾಹಿತಿ ಮೇಲಿನ ನಂಬಿಕೆ ಮುಂದಿಟ್ಟುಕೊಂಡು ಗೆಲುವಿಗೆ ಸಮೀಪ ಇರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಎರಡೂ ಕಡೆಯೂ ಉತ್ಸಾಹ ಇಮ್ಮಡಿಯಾಗಲಿದೆ.

ADVERTISEMENT

ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿಗಳು ಕೈ ಹಿಡಿಯಲಿವೆ. ಗ್ಯಾರಂಟಿ ಲಾಭ ಪಡೆದುಕೊಂಡಿರುವ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬೆಂಬಲಿಸಿದ್ದಾರೆ. ಬೆಲೆ ಏರಿಕೆ ಬಿಸಿ, ನಿರುದ್ಯೋಗ ಸಮಸ್ಯೆ, ಸಮಾಜದಲ್ಲಿ ಅಶಾಂತಿ ಉಂಟುಮಾಡಿದ ವಿಚಾರಗಳು ಸೇರಿದಂತೆ ಹಲವು ಕಾರಣಗಳಿಂದಾಗಿ ಜನರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದ್ದಾರೆ. ‘ಸ್ಥಳೀಯ’ ಎಂಬುದು ನೆರವಿಗೆ ಬಂದಿದೆ ಎಂದು ಪಕ್ಷದ ನಾಯಕರು, ಕಾರ್ಯಕರ್ತರು ಹೇಳುತ್ತಿದ್ದಾರೆ.

ಬಿಜೆಪಿ ಸಹ ತಮ್ಮದೇ ರೀತಿಯಲ್ಲಿ ಲೆಕ್ಕಾಚಾರ ನಡೆಸಿ, ಗೆಲುವಿನ ಉತ್ಸಾಹದಲ್ಲಿದೆ. ಜೆಡಿಎಸ್– ಬಿಜೆಪಿ ಒಗ್ಗಟ್ಟು ಸಾಕಷ್ಟು ಬಲ ತಂದುಕೊಟ್ಟಿದೆ. ಎರಡೂ ಪಕ್ಷಗಳ ಮತಗಳು ಒಗ್ಗೂಡಿರುವುದರಿಂದ ನಮ್ಮನ್ನು ಸೋಲಿಸಲು ಸಾಧ್ಯವೇ ಇಲ್ಲ. ಎರಡೂ ಪಕ್ಷದವರು ಎಲ್ಲೂ ಗೊಂದಲ ಮೂಡದಂತೆ ಒಟ್ಟಾಗಿ ಕೆಲಸ ಮಾಡಿರುವುದು ನೆರವಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ನಾಮಬಲ ಮತ ಬುಟ್ಟಿ ತುಂಬಿಸಿದೆ. ಲೋಕಸಭೆ ಚುನಾವಣೆಯಲ್ಲಿ ವ್ಯಕ್ತಿಗಿಂತ ಪಕ್ಷ ಹಾಗೂ ಕೇಂದ್ರದಲ್ಲಿ ಯಾರು ಅಧಿಕಾರದಲ್ಲಿ ಇರಬೇಕು ಎಂಬ ವಿಷಯ ಆಧರಿಸಿ ಮತ ನೀಡುತ್ತಾರೆ. ಈ ಬಾರಿಯೂ ಅದೇ ರೀತಿಯಲ್ಲಿ ಮತದಾರರು ಯೋಚಿಸಿದ್ದಾರೆ. ಹಾಗಾಗಿ ನಮಗೆ ಸಮಸ್ಯೆ ಇಲ್ಲ ಎಂದು ಬಿಜೆಪಿ ಮುಖಂಡರು ವಾದ ಮಂಡಿಸುತ್ತಿದ್ದಾರೆ.

ಕ್ಷೇತ್ರ ಮಹಿಮೆ: ಯಾವೆಲ್ಲ ವಿಧಾಸಭಾ ಕ್ಷೇತ್ರಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಸಚಿವರಾದ ಜಿ.ಪರಮೇಶ್ವರ (ಕೊರಟಗೆರೆ), ಕೆ.ಎನ್.ರಾಜಣ್ಣ (ಮಧುಗಿರಿ) ತಮ್ಮ ಕ್ಷೇತ್ರದಲ್ಲಿ ಕೊಡಿಸುವ ಮತಗಳು ಕಾಂಗ್ರೆಸ್ ಗೆಲುವಿನಲ್ಲಿ ನಿರ್ಣಾಯಕವಾಗಲಿವೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಲೀಡ್ ಕಡಿಮೆಯಾದರೆ ಗೆಲುವು ಕಷ್ಟಕರ ಎಂದೇ ಹೇಳಲಾಗುತ್ತಿದೆ. ತಿಪಟೂರು, ತುರುವೇಕೆರೆ ಕ್ಷೇತ್ರಗಳು ಯಾರ ಕಡೆಗೆ ವಾಲಲಿವೆ ಎಂಬುದರ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಭವಿಷ್ಯ ನಿಂತಿದೆ.

ತುಮಕೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳ ಮೇಲೆ ಬಿಜೆಪಿ ಹೆಚ್ಚು ಅವಲಂಬಿಸಿದೆ. ತಿಪಟೂರು, ಗುಬ್ಬಿ ಕ್ಷೇತ್ರದ ಮೇಲೂ ಹೆಚ್ಚು ನಂಬಿಕೆ ಇಟ್ಟುಕೊಂಡಿದೆ. ಮಧುಗಿರಿ, ಕೊರಟಗೆರೆ ಕ್ಷೇತ್ರದಲ್ಲೂ ನಮ್ಮ ಸಾಧನೆ ಚೆನ್ನಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಯಾವುದಾದರೂ ಎರಡು ವಿಧಾನಸಭೆ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಲೀಡ್ ಬಂದ ಅಭ್ಯರ್ಥಿ ಗೆಲುವಿನ ದಡ ಸೇರುತ್ತಾರೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.