ADVERTISEMENT

ಸೋಲಿನ ಹೊಣೆ ಹೊರುವೆ, ಕಾರ್ಯಕರ್ತರ ರಕ್ಷಣೆಗೆ ನಿಲ್ಲುವೆ: ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 14:25 IST
Last Updated 26 ಜೂನ್ 2024, 14:25 IST
ಕುಣಿಗಲ್‌ನಲ್ಲಿ ನಡೆದ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದರು. ಶಾಸಕ ಡಾ.ರಂಗನಾಥ್ ಇದ್ದಾರೆ
ಕುಣಿಗಲ್‌ನಲ್ಲಿ ನಡೆದ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದರು. ಶಾಸಕ ಡಾ.ರಂಗನಾಥ್ ಇದ್ದಾರೆ   

ಕುಣಿಗಲ್: ‘ಲೋಕಸಭಾ ಚುನಾವಣೆ ಸೋಲಿಗೆ ಯಾರು ಕಾರಣಕರ್ತರಲ್ಲ ಎಲ್ಲರೂ ಶ್ರಮಿಸಿದ್ದಾರೆ. ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಕಾರ್ಯಕರ್ತರ ರಕ್ಷಣೆಗೆ ನಿಲ್ಲುತ್ತೇನೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಡೆದ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜಕೀಯ ಜೀವನದಲ್ಲಿ ನಾಜೂಕಯ್ಯನ ಪಾತ್ರ ಯಾವತ್ತೂ ಮಾಡಿಲ್ಲ, ನಾಜೂಕಯ್ಯನ ಪಾತ್ರ ಮಾಡಿ ಕೇಂದ್ರದ ಮಂತ್ರಿಯಾಗಿರುವರು ಕ್ಷೇತ್ರ ಸೇರಿದಂತೆ ಹಾಸನದಲ್ಲಿ ಭಾರಿ ಕೈಗಾರಿಕೆ ಸ್ಥಾಪನೆ ಮಾಡಿ ನಿರೂದ್ಯೋಗ ಸಮಸ್ಯೆ ನಿವಾರಣೆ ಮಾಡುವರು’ ಎಂದು ಲೇವಡಿ ಮಾಡಿದರು.

ADVERTISEMENT

‘ತಾಲ್ಲೂಕಿನಲ್ಲಿ ಆಸ್ತಿ ಲೂಟಿ ಮಾಡಿರುವೆ ಎಂದು ಜೆಡಿಎಸ್ ನಾಯಕರು ಆರೋಪಮಾಡಿದ್ದಾರೆ. ಕುಣಿಗಲ್ ಬಸ್ ನಿಲ್ದಾಣದ ಆಸ್ತಿಯಲ್ಲಿ ಕುಳಿತುಕೊಂಡು ಬಾಡಿಗೆ ಸಹ ಕಟ್ಟದೆ ಇರುವವರು ಜೆಡಿಎಸ್ ಮುಖಂಡರುಗಳು’ ಎಂದು ಆರೋಪ ಮಾಡಿದರು.

‘ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಸೋತಿರಬಹುದು. ಡಾ.ರಂಗನಾಥ್ ಶಾಸಕರಾಗಿ ಇನ್ನೂ ಇದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಲಿದ್ದಾರೆ’ ಎಂದು ತಿಳಿಸಿದರು.

ಶಾಸಕ ಡಾ.ರಂಗನಾಥ್, ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿತ್ತು. ಆದರೆ ಸೋಲಿನಿಂದ ಧೃತಿಗೆಡದೆ ಸಾಧಿಸುವ ಛಲ ಬೆಳೆಸಿಕೊಳ್ಳಬೇಕಿದೆ. ಹಠ, ಛಲ ಮತ್ತೂ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಡಿ.ಕೆ.ಸುರೇಶ್ ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಲು ಮನವಿ ಮಾಡಲಾಗುವುದು. ತಾಲ್ಲೂಕಿನ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ವಾದ ಲಿಂಕ ಕೆನಾಲ್‌ಗಾಗಿ ಹೋರಾಟ ಮುಂದುವರೆಯಲು ತಾಲ್ಲೂಕಿನ ಜನತೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ರೆಹಮಾನ್ ಷರೀಫ್, ಬೇಗೂರು ರಾಮಣ್ಣ, ಮಾಗಡಯ್ಯ, ಪುರಸಭೆ ಸದಸ್ಯರಾದ ರಂಗಸ್ವಾಮಿ, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.