ADVERTISEMENT

ಪಾವಗಡ: ಸರ್ಕಾರಿ ಆಸ್ಪತ್ರೆ, ಖಾಸಗಿ ಶಾಲೆಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ

ಶಾಲೆ ನಡೆಸಲು ಅನುಮತಿ ಪಡೆದು ವಸತಿ ಶಾಲೆ ನಡೆಸುತ್ತಿರುವ ಆರೋಪ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 8:06 IST
Last Updated 29 ಫೆಬ್ರುವರಿ 2024, 8:06 IST
ಪಾವಗಡ ಸರ್ಕಾರಿ ಆಸ್ಪತ್ರೆಗೆ ಬುಧವಾರ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು
ಪಾವಗಡ ಸರ್ಕಾರಿ ಆಸ್ಪತ್ರೆಗೆ ಬುಧವಾರ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು    

ಪಾವಗಡ: ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ತಾಲ್ಲೂಕಿನ ತಿಪ್ಪಯ್ಯನದುರ್ಗದ ಆಕರ್ಷಣಿ ಪ್ರೌಢಶಾಲೆಗೆ ಬುಧವಾರ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಸಲೀಂ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗ್ರಾಮದ ಆಕರ್ಷಣಿ ಪ್ರೌಢಶಾಲೆಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಿಂದ 30ರಿಂದ 40 ವಿದ್ಯಾರ್ಥಿಗಳನ್ನು ಕರೆ ತರಲಾಗಿದೆ. ಮಕ್ಕಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸದೆ ಶಾಲೆಯ ಒಂದು ಕೊಠಡಿಯಲ್ಲಿ ಇರಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ಗುಣಮಟ್ಟದ ಆಹಾರ ಸೇರಿದಂತೆ ಮೂಲ ಸೌಕರ್ಯ ನೀಡದೆ, ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಸಾರ್ವಜನಿಕರು ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕರಿಗೆ ನೀಡಿದ್ದರು.

ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲಾ ಆಡಳಿತ ಮಂಡಳಿ ವಿರುದ್ಧ ಲೋಕಾಯುಕ್ತ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದ್ದರು.

ADVERTISEMENT

ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ, ದಾಖಲಾತಿ ವಹಿ ಸೇರಿದಂತೆ ಮಕ್ಕಳ ಮಾಹಿತಿ ಪಡೆದರು. ಮೂರು ತಾಸು ಶಾಲೆ ದಾಖಲೆ ಪರಿಶೀಲಿಸಿತು.

ಶಾಲೆಯಲ್ಲಿ ಮೂಲ ಸೌಕರ್ಯ ಇಲ್ಲದಿರುವ ಬಗ್ಗೆ, ಶಾಲೆ ನಡೆಸಲು ಅನುಮತಿ ಪಡೆದು ವಸತಿ ಶಾಲೆ ನಡೆಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪಾವಗಡ ತಾಲ್ಲೂಕು ತಿಪ್ಪಯ್ಯನದುರ್ಗ ಆಕರ್ಷಣಿ ಪ್ರೌಢಶಾಲೆ ಗೆ ಬುಧವಾರ ಲೋಕಾಯುಕ್ತ ಇನ್ಸ್ಪೆಕ್ಟರ್ ಸಲೀಂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಆರೋಗ್ಯ ಸಿಬ್ಬಂದಿಯ ಮಾಹಿತಿ ಸಂಗ್ರಹ

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬುಧವಾರ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಸಲೀಂ ತಂಡ ಭೇಟಿ ನೀಡಿ ಪರಿಶೀಲಿಸಿತು. ಆಸ್ಪತ್ರೆಯ ವಾರ್ಡ್‌ ಶಸ್ತ್ರ ಚಿಕಿತ್ಸಾ ಕೊಠಡಿ ಔಷಧಿ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಸಿಬ್ಬಂದಿಯ ಕಾರ್ಯ ವೈಖರಿ ಸಮಸ್ಯೆ ಬಗ್ಗೆ ವಿಚಾರಣೆ ನಡೆಸಿದರು. ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಮೃತಪಟ್ಟ ಮೂವರು ಮಹಿಳೆಯರ ಬಗ್ಗೆ ಮಾಹಿತಿ ಪಡೆದರು. ಆ ವೇಳೆ ಕರ್ತವ್ಯ ನಿರ್ವಹಿಸಿದ್ದ ವೈದ್ಯರು ಸಿಬ್ಬಂದಿಯ ಬಗ್ಗೆ ವಿವರ ಸಂಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.