ADVERTISEMENT

ಲೋಕಾಯುಕ್ತರ ಸಭೆಯಲ್ಲಿ ಅರ್ಜಿಗಳ ಮಹಾಪೂರ: ಅಹವಾಲು ಹೊತ್ತು ಬಂದ ನೂರಾರು ಜನ

300ಕ್ಕೂ ಹೆಚ್ಚು ದೂರುಗಳು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 14:47 IST
Last Updated 18 ಅಕ್ಟೋಬರ್ 2024, 14:47 IST
ತುಮಕೂರಿನಲ್ಲಿ ಶುಕ್ರವಾರ ನಡೆದ ಉಪಲೋಕಾಯುಕ್ತರ ಕುಂದುಕೊರತೆ ಸಭೆಯಲ್ಲಿ ಅಹವಾಲು ಸಲ್ಲಿಸಲು ಬಂದ 92 ವರ್ಷದ ರಾಮಕ್ಕ
ತುಮಕೂರಿನಲ್ಲಿ ಶುಕ್ರವಾರ ನಡೆದ ಉಪಲೋಕಾಯುಕ್ತರ ಕುಂದುಕೊರತೆ ಸಭೆಯಲ್ಲಿ ಅಹವಾಲು ಸಲ್ಲಿಸಲು ಬಂದ 92 ವರ್ಷದ ರಾಮಕ್ಕ   

ತುಮಕೂರು: ಲೋಕಾಯುಕ್ತ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ನಾನಾ ರೀತಿಯ ಸಮಸ್ಯೆಗಳು ಉಪ ಲೋಕಾಯುಕ್ತರ ಗಮನಕ್ಕೆ ಬಂದವು. ನೂರಾರು ಜನ ಅರ್ಜಿ ಹಿಡಿದು ಸಭೆಯತ್ತ ಹೆಜ್ಜೆ ಹಾಕಿದರು.

ಜಮೀನು ವಿವಾದ, ಖಾತೆ ಬದಲಾವಣೆ, ರಸ್ತೆ ಒತ್ತುವರಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಸಲ್ಲಿಕೆಯಾದವು. ಉಪಲೋಕಾಯುಕ್ತ ಬಿ.ವೀರಪ್ಪ ಎಲ್ಲರ ಸಮಸ್ಯೆ ಆಲಿಸಿದರು. ಪ್ರಕರಣ ದಾಖಲಿಸಿಕೊಂಡು ತುರ್ತಾಗಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ಪ್ರತಿಯೊಂದು ಅರ್ಜಿ ವಿಲೇವಾರಿಗೆ ಕಾಲಮಿತಿ ನಿಗದಿಪಡಿಸಿದರು. ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಖಾತೆ ಬದಲಾವಣೆ ಮಾಡಿಕೊಡಲು ₹30 ಸಾವಿರ ಲಂಚ ಕೇಳಿದ್ದಾರೆ’ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಾಡು ಗ್ರಾಮ ಪಂಚಾಯಿತಿ ಅಧಿಕಾರಿ ಹರ್ಷ ವಿರುದ್ಧ ಕೆ.ಆರ್.ರಾಜಶೇಖರಯ್ಯ ದೂರು ನೀಡಿದರು. ನ್ಯಾಯಾಲಯದ ಆದೇಶ ಇದ್ದರೂ ಖಾತೆ ಬದಲಾವಣೆ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ದೂರಿದರು. ‘ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪಿಡಿಒಗೆ ನೋಟಿಸ್‌ ಜಾರಿ ಮಾಡುವಂತೆ’ ಉಪಲೋಕಾಯುಕ್ತರು ಸೂಚಿಸಿದರು.

ADVERTISEMENT

‘ಯಳನಾಡು ಗ್ರಾಮದಲ್ಲಿ ಅನರ್ಹರಿಗೆ ಪಿಂಚಣಿ ನೀಡಿದ್ದು, ನಕಲಿ ದಾಖಲೆ ಸಲ್ಲಿಸಿರುವುದು ಗೊತ್ತಾದ ನಂತರ ತಹಶೀಲ್ದಾರ್‌ ಪಿಂಚಣಿ ಹಣ ವಾಪಸ್‌ ಪಡೆದುಕೊಂಡಿದ್ದಾರೆ. ಆದರೆ ಹಣವನ್ನು ಸರ್ಕಾರಕ್ಕೆ ಪಾವತಿಸಿಲ್ಲ. ₹30 ಸಾವಿರ ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ರಾಜಶೇಖರಯ್ಯ ಆರೋಪಿಸಿ, ಅಗತ್ಯ ದಾಖಲೆ ಸಲ್ಲಿಸಿದರು. ಸಬಂಧಪಟ‌್ಟ ತಹಶೀಲ್ದಾರ್‌ಗೆ ನೋಟಿಸ್‌ ನೀಡುವಂತೆ ಬಿ.ವೀರಪ್ಪ ತಿಳಿಸಿದರು.

ಎಕ್ಸ್‌ರೇ ಯಂತ್ರ ಅಳವಡಿಕೆಗೆ ಸೂಚನೆ: ‘ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಎಕ್ಸ್‌ರೇ ಯಂತ್ರ ಇಲ್ಲ. ಇದರಿಂದ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಜನರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ದುಬಾರಿ ಹಣ ಖರ್ಚು ಮಾಡಿ ಎಕ್ಸ್‌ರೇ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಶಿವಕುಮಾರಸ್ವಾಮಿ ಅಳಲು ತೋಡಿಕೊಂಡರು.

‘ಈ ಹಿಂದೆ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಲಾಗಿತ್ತು. ಆಗಲೂ ಇಂತಹ ಸಮಸ್ಯೆ ಇತ್ತು. ಈಗಲೂ ಅದು ಬದಲಾಗಿಲ್ಲ. ಮುಂದಿನ ಒಂದು ತಿಂಗಳಲ್ಲಿ ಡಿಜಿಟಲ್ ಎಕ್ಸ್‌ ರೇ ಯಂತ್ರ ಅಳವಡಿಸಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ನಿರ್ದೇಶಿಸಿದರು.

ಆರ್‌ಟಿಒ ಗೈರು: ‘ತೆರಿಗೆ ಪಾವತಿಸದ, ಪರವಾನಗಿ ಪಡೆಯದ ಬಸ್‌, ಇತರೆ ವಾಹನಗಳು ಸಂಚರಿಸುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ವಾಹನಗಳ ಮಾಲೀಕರಿಂದ ಲಂಚ ಪಡೆಯುತ್ತಿದ್ದಾರೆ’ ಎಂದು ನರಸಿಂಹಮೂರ್ತಿ ಎಂಬುವರು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರುದ್ಧ ದೂರು ಸಲ್ಲಿಸಿದರು. ಈ ವೇಳೆ ಆರ್‌ಟಿಒ ಗೈರಾಗಿದ್ದಕ್ಕೆ ಉಪ ಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿದರು. ಹದಿನೈದು ದಿನ ಮುಂಚಿತವಾಗಿ ಎಲ್ಲರಿಗೂ ತಿಳಿಸಿದ್ದರೂ ಯಾಕಿಷ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅಧಿಕಾರಿಗಳ ಇಂತಹ ವರ್ತನೆ ಸಹಿಸಲ್ಲ. ಕೂಡಲೇ ಬಂದು ಜನರ ಸಮಸ್ಯೆ ಕೇಳಲಿ ಎಂದರು.

ಅಧಿಕಾರಿಗಳು ಇಂದು–ನಾಳೆ ಎಂದು ಸಬೂಬು ಹೇಳದೆ ಸಕಾಲದಲ್ಲಿ ಕೆಲಸ ಮಾಡಬೇಕು. ಸಾಮಾನ್ಯ ಜನರನ್ನು ಕಚೇರಿಗಳಿಗೆ ಅಲೆಯುವಂತೆ ಮಾಡಬಾರದು ಎಂದು ಹೇಳಿದರು.

ತುಮಕೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಉಪಲೋಕಾಯುಕ್ತರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.