ADVERTISEMENT

ಪ್ರೇಮ ನಿರಾಕರಣೆ: ಚಾಕು ಇರಿತ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 17:10 IST
Last Updated 26 ಜುಲೈ 2024, 17:10 IST

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬುಡ್ಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಪ್ರೇಮ ನಿರಾಕರಣೆ ಮಾಡಿದ ಕಾರಣಕ್ಕೆ ಯುವತಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ನಂತರ ಆತನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಅಕ್ಕಿರಾಂಪುರದ ರಾಮಾಚಾರಿ (30) ಚಾಕಿವಿನಿಂದ ಇರಿದ ಯುವಕ. ಬುಡ್ಡೇನಹಳ್ಳಿ ಗೊಲ್ಲರಹಟ್ಟಿಯ ಭವ್ಯ (28) ಇರಿತಕ್ಕೆ ಒಳಗಾದವರು.

ಭವ್ಯ ವಿಧವೆಯಾಗಿದ್ದು, ಏಳನೇ ತರಗತಿ ಓದುತ್ತಿರುವ ಮಗ ಇದ್ದಾನೆ. ಈಕೆ ದೊಡ್ಡಬಳ್ಳಾಪುರದ ಗಾರ್ಮೆಂರ್ಟ್ಸ್‌ನಲ್ಲಿ ಕೆಲಸ‌ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಾಲ್ಕೈದು ವರ್ಷಗಳ ಹಿಂದೆ ರಾಮಾಚಾರಿಯ ಪರಿಚಯವಾಗಿತ್ತು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಇತ್ತೀಚೆಗೆ ಭವ್ಯ ರಾಮಾಚಾರಿಯಿಂದ ದೂರವಿರಲು ಯತ್ನಿಸಿದ್ದರು. 

ADVERTISEMENT

ಗುರುವಾರ ತಡ ರಾತ್ರಿ ಮದ್ಯ ಸೇವಿಸಿದ್ದ ರಾಮಾಚಾರಿ ಭವ್ಯ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಗಲಾಟೆಗೆ ಮುಂದಾದ ಭವ್ಯ ಅವರ ಹೊಟ್ಟೆ, ತಲೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಅಕ್ಕಪಕ್ಕದವರು ಬಂದದ್ದನ್ನು ಕಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಪತ್ತೆಗೆ ಯತ್ನಿಸಿದ್ದಾರೆ.

ರಾಮಾಚಾರಿ ಅರಸಾಪುರ ಬಳಿ ತಲೆಮರೆಸಿಕೊಂಡಿದ್ದನು. ಮದ್ಯದ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ಇಲಿ ಪಾಷಾಣ ಸೇವಿಸಿ, ಚಾಕುವಿನಿಂದ ಕೈ ಕುಯ್ದುಕೊಂಡಿದ್ದಾನೆ. ಮದ್ಯದ ನಶೆ ಇಳಿದ ನಂತರ ಬದುಕಬೇಕು ಎಂದು  ತಡರಾತ್ರಿ ಕಿರುಚಾಡಿದ್ದಾನೆ.

ಮಾಹಿತಿ ತಿಳಿದ ಪೊಲೀಸರು ಬೆಳಗಿನ ಜಾವ 3.30ರ ಸುಮಾರಿನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಕರೆ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ರಾಮಾಚಾರಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಭವ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.