ತುಮಕೂರು: ಲೋಕಸಭೆ ಕ್ಷೇತ್ರದಲ್ಲಿ ಮತದಾನ ಮುಗಿದ ಬೆನ್ನಲ್ಲೇ ಕೈ–ಕಮಲ ಪಾಳಯದಲ್ಲಿ ಸೋಲು– ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಯಾವ ವಿಧಾನಸಭೆ ಕ್ಷೇತ್ರ ಹೆಚ್ಚು ಲೀಡ್ ತಂದುಕೊಡಲಿದೆ, ಎಲ್ಲಿ ಕೈ ಕೊಡಲಿದೆ ಎಂಬ ಕೂಡಿ, ಕಳೆಯುವ ಗಣಿತ ಶುರುವಾಗಿದೆ.
ಕೈ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಯಾರು ಗೆದ್ದರೂ ಹೆಚ್ಚಿನ ಮತಗಳ ಅಂತರ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಇಬ್ಬರೂ ತಮ್ಮದೇ ಗೆಲುವು ಎಂದು ಬೀಗುತ್ತಿದ್ದಾರೆ. ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳು ತಮ್ಮ ಮೂಲಗಳಿಂದ ಪಡೆದುಕೊಂಡ ಅಂಕಿ ಅಂಶಗಳನ್ನು ಇಟ್ಟುಕೊಂಡು ತಾಳೆ ಹಾಕಿ ನೋಡುತ್ತಿದ್ದಾರೆ. ವಿಧಾನಸಭೆ ಕ್ಷೇತ್ರವಾರು ತಮ್ಮ ಪರವಾಗಿ ಬಂದಿರಬಹುದಾದ ಮತಗಳ ಪಟ್ಟಿ ಮಾಡಿಕೊಂಡು ‘ಜಯ’ದ ವಾದ ಮಂಡಿಸುತ್ತಿದ್ದಾರೆ.
ಕಾಂಗ್ರೆಸ್ ಲೆಕ್ಕಾಚಾರ: ತುಮಕೂರು ನಗರ ವಿಧಾನಸಭೆ ಕ್ಷೇತ್ರದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಮತಗಳು ಕಾಂಗ್ರೆಸ್‌ಗೆ ಬರಲಿವೆ. ನಗರದ ಮತದಾರರು ಬಿಜೆಪಿ ಬೆಂಬಲಿಸುತ್ತಾರೆ ಎಂದು ಹೇಳಲಾಗುತಿತ್ತು. ಆದರೆ ಈ ಬಾರಿ ಕಾಂಗ್ರೆಸ್ ತುಸು ಹೆಚ್ಚಿನ ಮತಗಳನ್ನು ಪಡೆದುಕೊಂಡಿರುವಂತೆ ಕಂಡುಬರುತ್ತಿದೆ ಎಂದು ಎರಡೂ ಪಕ್ಷಗಳ ಮುಖಂಡರೇ ಹೇಳುತ್ತಿದ್ದಾರೆ. ಬಿಜೆಪಿ ‘ಬಲ’ವಿದ್ದ ಪ್ರದೇಶಗಳಲ್ಲೂ ಕೈ ಕಡೆಗೆ ವಾಲಿದೆ. ಇದು ಕಾಂಗ್ರೆಸ್ ಶಕ್ತಿಯನ್ನು ಹೆಚ್ಚಿಸಲಿದ್ದು, ಗೌಡರಿಗೆ ಬಯಸದೇ ಬಂದ ಭಾಗ್ಯವಾಗಿದೆ.
ಮುದ್ದಹನುಮೇಗೌಡರ ಗೆಲುವಿನಲ್ಲಿ ಮಧುಗಿರಿ ಕ್ಷೇತ್ರ ನಿರ್ಣಾಯಕ ಪಾತ್ರ ವಹಿಸಲಿದೆ. ಈ ಕ್ಷೇತ್ರದಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಬರಲಿವೆ ಎಂಬ ಸತ್ಯವನ್ನು ಎರಡೂ ಪಕ್ಷದವರು ಒಪ್ಪಿಕೊಳ್ಳುತ್ತಿದ್ದಾರೆ. ಇಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಕಳೆದ ವಿಧಾನಸಭೆ ಚುನಾವಣೆ ನಂತರ ಜೆಡಿಎಸ್ ಕಾರ್ಯಕರ್ತರನ್ನು ಕೇಳುವವರೇ ಇಲ್ಲವಾಗಿದ್ದಾರೆ. ಸಚಿವ ಕೆ.ಎನ್.ರಾಜಣ್ಣ ಪ್ರಯತ್ನವೂ ಇದೆ. ಹಾಗಾಗಿ ಕೈ ಕಡೆಗೆ ಹೆಚ್ಚು ಒಲವು ವ್ಯಕ್ತವಾಗಿದೆ. ಈ ಕ್ಷೇತ್ರದಿಂದ ಬಂದಿರುವ ಮತಗಳು ಗೌಡರ ಸೋಲು– ಗೆಲುವು ನಿರ್ಧರಿಸಲಿದೆ. ಸೋಮಣ್ಣ ಪಡೆದ ಮತಕ್ಕಿಂತ ಗೌಡರಿಗೆ 25 ಸಾವಿರಕ್ಕೂ ಹೆಚ್ಚು ಮತಗಳು ಬಂದರೆ ಗೆಲುವಿಗೆ ಹತ್ತಿರವಾಗುತ್ತಾರೆ. ಅಂತರ ಕಡಿಮೆಯಾದರೆ ಗೆಲುವು ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ.
ಸಚಿವ ಜಿ.ಪರಮೇಶ್ವರ ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರದಲ್ಲೂ ಬಿಜೆಪಿಗೆ ಅಂತಹ ನೆಲೆ ಇಲ್ಲ. ಕಾಂಗ್ರೆಸ್– ಜೆಡಿಎಸ್ ಪ್ರಬಲವಾಗಿದೆ. ಜೆಡಿಎಸ್ ಮತಗಳು ಬಹುತೇಕ ಬಿಜೆಪಿಗೆ ವರ್ಗಾವಣೆಯಾಗಿವೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮತ ಕೊಡಿಸಲು ಸಚಿವರಿಗೆ ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಬಿಜೆಪಿ ಪಡೆಯುವ ಮತಕ್ಕಿಂತ ಕನಿಷ್ಠ 10 ಸಾವಿರಕ್ಕೂ ಹೆಚ್ಚು ಮತಗಳನ್ನು ಕೊಡಿಸಿದ್ದರೆ ಮಾತ್ರ ಗೌಡರ ನೆರವಿಗೆ ಬರಬಹುದು. ಇಲ್ಲವಾದರೆ ಕೊರಟಗೆರೆ ಕ್ಷೇತ್ರವೇ ಗೌಡರ ಸೋಲಿನಲ್ಲಿ ನಿರ್ಣಾಯಕವಾಗಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಕಾಂಗ್ರೆಸ್‌ಗೆ ಗಟ್ಟಿ ನೆಲೆ ಇಲ್ಲ. ಜೆಡಿಎಸ್– ಬಿಜೆಪಿ ಒಟ್ಟಾಗಿದ್ದರೂ ಬಿಜೆಪಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಬೆಂಬಲಿಗರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಸಹ ಪ್ರಯತ್ನ ಮಾಡಿದ್ದಾರೆ. ಜೆಡಿಎಸ್ ಮತಗಳು ಬಿಜೆಪಿಗೆ ಬಂದಿದ್ದರೂ ಬಿಜೆಪಿ ಮತಗಳು ನಿರೀಕ್ಷಿತ ಪ್ರಮಾಣದಲ್ಲಿ ಸೋಮಣ್ಣ ಅವರಿಗೆ ಬಂದಿಲ್ಲ. ಹಾಗಾಗಿ ಮುದ್ದಹನುಮೇಗೌಡರಿಗೆ ಹೆಚ್ಚು ಒಲವು ವ್ಯಕ್ತವಾಗಿದ್ದು, ‘ಕೈ’ ಮುಂದಾಗಬಹುದು ಎನ್ನಲಾಗಿದೆ.
ತಿಪಟೂರು ಭಾಗದಲ್ಲಿ ಶಾಸಕ ಕೆ.ಷಡಕ್ಷರಿ ಅವರು ಗೌಡರ ಪರವಾಗಿ ಮನಃಪೂರ್ವಕ ಪ್ರಯತ್ನ ಮಾಡದಿದ್ದರೂ, ಮಾಧುಸ್ವಾಮಿ ಪ್ರಭಾವ ಕೆಲಸ ಮಾಡಿದ್ದು, ಬಿಜೆಪಿಯ ಒಂದಷ್ಟು ಮತಗಳು ಕೈ ಹಿಡಿದಿರಬಹುದು. ಒಬಿಸಿ ಮತಗಳು ನೆರವಿಗೆ ಬಂದಿವೆ ಎಂಬುದು ಕಾಂಗ್ರೆಸಿಗರ ಲೆಕ್ಕಾಚಾರ. ತುರುವೇಕೆರೆ ತಾಲ್ಲೂಕಿನಲ್ಲಿ ಕೈ–ಕಮಲ ನಡುವೆಯೇ ಪ್ರಬಲ ಪೈಪೋಟಿ ಇದ್ದು, ಕಾಂಗ್ರೆಸ್‌ಗೆ ನೆಲೆ ಇಲ್ಲವಾಗಿದೆ. ಆದರೆ ಕೊನೆ ಕ್ಷಣದಲ್ಲಿ ಉಂಟಾದ ಕೆಲವು ಗೊಂದಲಗಳು ಗೌಡರಿಗೆ ಸಹಕಾರಿಯಾಗಿವೆ. ಗ್ರಾಮೀಣ ಭಾಗದ ಜನರು ಕೈ ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಗುಬ್ಬಿ ತಾಲ್ಲೂಕಿನಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಜೆಡಿಎಸ್– ಬಿಜೆಪಿ ಮುಖಂಡರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಇಲ್ಲಿ ಕೈ–ಬಿಜೆಪಿ ಸಮಬಲ ಸಾಧಿಸಬಹುದು, ಇಲ್ಲವೆ ಬಿಜೆಪಿಗೆ ತುಸು ಹೆಚ್ಚಿಗೆ ಮತಗಳು ಬರಬಹುದು ಎಂದು ನಿರೀಕ್ಷಿಸಲಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ– ಜೆಡಿಎಸ್ ಒಟ್ಟಾಗಿರುವುದು ಕಾಂಗ್ರೆಸ್ ತಲೆ ಬಿಸಿಗೆ ಕಾರಣವಾಗಿದೆ.
ಬಿಜೆಪಿಗೆ ಗ್ರಾಮಾಂತರ ಆಸರೆ
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ನೆಲೆ ಇಲ್ಲವಾಗಿದೆ. ಬಿಜೆಪಿ– ಜೆಡಿಎಸ್ ಮುಖಂಡರು ಒಟ್ಟಾಗಿ ಪ್ರಯತ್ನಿಸಿರುವುದು ಸೋಮಣ್ಣ ಮತಬುಟ್ಟಿ ತುಂಬಿಸಿರಬಹುದು. ಜೆಡಿಎಸ್ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಕಾಂಗ್ರೆಸ್‌ಗೆ ಬಂದಿದ್ದರೂ ಮತದಾರರು ಅವರನ್ನು ಹಿಂಬಾಲಿಸಿಲ್ಲ. ಈ ಭಾಗದ ಜೆಡಿಎಸ್ ಮತದಾರರು ಎಚ್.ಡಿ.ದೇವೇಗೌಡ ಮಾತಿಗೆ ಹೆಚ್ಚು ಮನ್ನಣೆ ನೀಡುತ್ತಾರೆ. ಶಾಸಕ ಬಿ.ಸುರೇಶ್‌ಗೌಡ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಸಾಕಷ್ಟು ಪ್ರಯತ್ನ ಹಾಕಿದ್ದಾರೆ. ಮುದ್ದಹನುಮೇಗೌಡರು ಇದೇ ಭಾಗಕ್ಕೆ ಸೇರಿದ್ದರೂ ಹಿಂದಿನಷ್ಟು ಹಿಡಿತ ಇಲ್ಲ ಎಂಬುದು ಬಿಜೆಪಿಯವರ ವಾದ. ಗ್ರಾಮಾಂತರದಲ್ಲಿ ಗೌಡರಿಗಿಂತ ಸೋಮಣ್ಣ ಎಷ್ಟು ಹೆಚ್ಚಿಗೆ ಮತ ಪಡೆಯುತ್ತಾರೆ ಎಂಬುದರ ಮೇಲೆ ಅವರ ಗೆಲುವು ನಿರ್ಧಾರವಾಗಲಿದೆ. ಎರಡೂ ಪಕ್ಷಗಳು ಒಟ್ಟಾಗಿರುವುದರಿಂದ ದೊಡ್ಡ ಮಟ್ಟದಲ್ಲಿ ಲೀಡ್ ಸಿಗುತ್ತದೆ. ಬಿಜೆಪಿಗೆ 15 ಸಾವಿರಕ್ಕೂ ಹೆಚ್ಚು ಲೀಡ್ ಬರುವ ನಿರೀಕ್ಷೆ ಕಾಣುತ್ತಿದೆ. ಇದರಿಂದ ಬಿಜೆಪಿ ಗೆಲುವು ಸುಲಭವಾಗುತ್ತದೆ ಎಂಬ ಲೆಕ್ಕವನ್ನು ಆ ಪಕ್ಷದ ಮುಖಂಡರು ಮುಂದಿಡುತ್ತಿದ್ದಾರೆ. ತುರುವೇಕೆರೆ ತಾಲ್ಲೂಕಿನಲ್ಲಿ ಹಾಲಿ– ಮಾಜಿ ಶಾಸಕರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಜೆಡಿಎಸ್– ಬಿಜೆಪಿ ಮತಗಳು ಒಗ್ಗೂಡಿದರೆ ದೊಡ್ಡ ಮಟ್ಟದ ಸಂಖ್ಯೆಯಾಗುತ್ತದೆ. ಒಂದಷ್ಟು ಮತಗಳು ‘ಕೈ’ನತ್ತ ವಾಲಿದರೂ ಚಿಂತೆಪಡಬೇಕಿಲ್ಲ. ಕಾಂಗ್ರೆಸ್‌ಗಿಂತ ಒಂದು ಹೆಜ್ಜೆ ಮುಂದಿರುತ್ತೇವೆ. ಗುಬ್ಬಿಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಏನೆಲ್ಲ ಪ್ರಯತ್ನ ನಡೆಸಿದರೂ ಮೈತ್ರಿ ಪಕ್ಷಗಳು ಒಟ್ಟಾಗಿ ಶ್ರಮ ಹಾಕಿರುವುದು ನೆರವಾಗಿದೆ. ಹಿಂದಿನ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬಂದಿವೆ. ಈ ಬಾರಿಯೂ ಅಂತಹ ವಾತಾವರಣ ಕಂಡು ಬಂದಿದ್ದು ಸೋಮಣ್ಣ ಮೇಲುಗೈ ಸಾಧಿಸುತ್ತಾರೆ ಎಂಬ ಉತ್ಸಾಹದಲ್ಲಿ ಬಿಜೆಪಿ ಮುಖಂಡರು ಇದ್ದಾರೆ. ತಿಪಟೂರು ಭಾಗದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಹಜವಾಗಿಯೇ ಸೋಮಣ್ಣ ಅವರನ್ನು ಬೆಂಬಲಿಸಿದ್ದಾರೆ. ಮಾಧುಸ್ವಾಮಿ ನಮ್ಮ ವಿರುದ್ಧ ನಿಂತಿದ್ದರೂ ಬಿಜೆಪಿ– ಜೆಡಿಎಸ್ ಮತಗಳು ಒಗ್ಗೂಡಿವೆ. ಸ್ವಲ್ಪ ಮಟ್ಟಿಗಾದರೂ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತೇವೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಎರಡೂ ಪಕ್ಷಗಳು ಏನೆಲ್ಲ ಲೆಕ್ಕಾಚಾರ ಹಾಕುತ್ತಾ ತಮ್ಮದೇ ಗೆಲುವು ಎಂದು ಬೀಗುತ್ತಿದ್ದರೂ ಜೂನ್ 4ರಂದು ಮತಗಳ ಎಣಿಕೆ ನಂತರ ನಿಜವಾದ ಗೆಲುವು ಯಾರದ್ದು ಎಂಬುದು ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.