ಮಧುಗಿರಿ: ಪಟ್ಟಣದ 1ರಿಂದ 8ನೇ ವಾರ್ಡ್‌ವರೆಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಬುಧವಾರ ಪಾದಯಾತ್ರೆ ಮಾಡಿ ಜನರ ಕುಂದುಕೊರತೆ ಆಲಿಸಿದರು.
ಸಾರ್ವಜನಿಕರಿಂದ ನಿವೇಶನ, ಕುಡಿಯುವ ನೀರು, ಮನೆ, ರಸ್ತೆ, ಚರಂಡಿ, ಸ್ವಚ್ಛತೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದವು.
‘ಸರ್ ನನಗೆ ಯಾರು ದಿಕ್ಕಿಲ್ಲ, ಒಂದು ಮನೆ ಮಂಜೂರು ಮಾಡಿಸಿಕೊಡಿ’ ಎಂದು ವೃದ್ಧೆಯೊಬ್ಬರು ಸಚಿವರಿಗೆ ಮನವಿ ಮಾಡಿದಾಗ, ಇವರಿಗೆ ಮನೆ ಮಂಜೂರು ಮಾಡಿಕೊಡಿ ಹಾಗೂ ಅವಶ್ಯಕತೆ ಇರುವವರಿಗೆ ಮನೆಗಳ ಪಟ್ಟಿ ಮಾಡುವಂತೆ ಮುಖ್ಯಾಧಿಕಾರಿ ಸುರೇಶ್ ಅವರಿಗೆ ಸೂಚಿಸಿದರು.
ಮಳೆಯಿಂದಾಗಿ ಪಟ್ಟಣದ ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ತಾತ್ಕಾಲಿಕವಾಗಿ ಎಲ್ಲ ಗುಂಡಿಗಳನ್ನು ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆ ಕಡಿಮೆ ಆದ ಮೇಲೆ ₹25 ಕೋಟಿ ವೆಚ್ಚದಲ್ಲಿ ಗುಣಮಟ್ಟದ ರಸ್ತೆ ಮಾಡಿಸಲಾಗುವುದು ಎಂದರು.
5ನೇ ವಾರ್ಡ್‌ನಲ್ಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಮೆನುವಿನಲ್ಲಿರುವಂತೆಯೇ ಆಹಾರ ನೀಡಬೇಕು. ಮಕ್ಕಳ ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಬೇಕು. ಆಧಿಕಾರಿಗಳ ಸಭೆ ನಡೆಸಬೇಕು ಎಂದು ಸೂಚಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಕೊರಟಗೆರೆ ಏಕಲವ್ಯ ವಸತಿ ಶಾಲೆಯಲ್ಲಿ ಕೆಲ ದಿನಗಳ ಹಿಂದೆ ಮೃತಪಟ್ಟ ಬಾಲಕನ ತಾಯಿ ಐಡಿ ಹಳ್ಳಿ ಹೋಬಳಿ ಸಾದರಹಳ್ಳಿ ವಾಸಿ. ಬಾಲಕನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕಾನೂನು ಕ್ರಮ ಕೈಗೊಂಡು ಅಗತ್ಯ ಪರಿಹಾರ ದೊರಕಿಸಲಾಗುವುದು ಎಂದರು.
ತಾಲ್ಲೂಕು ಆಸ್ಪತ್ರೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಕಾಮಗಾರಿಯು ಸ್ಥಗಿತಗೊಂಡಿದ್ದು, ಶೀಘ್ರ ಆರಂಭಿಸಲಾಗುವುದು. ಕೆಲ ದಿನಗಳಲ್ಲಿ ವೈದ್ಯರು ಮತ್ತು ಖಾಲಿ ಇರುವ ಸಿಬ್ಬಂದಿ ಹುದ್ದೆ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ನೂರು ಮಂದಿಗೆ ಪಿಂಚಿಣಿ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು. ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶಿರಿನ್ ತಾಜ್, ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಉಪಾಧ್ಯಕ್ಷ ಸುಜಾತ ಶಂಕರನಾರಾಯಣ, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಎನ್.ಗಂಗಣ್ಣ, ಸದಸ್ಯರಾದ ಎಂ.ವಿ.ಗೋವಿಂದರಾಜು, ಅಲೀಮ್, ನಸೀಮಾ ಬಾನು ಸಾಧಿಕ್, ಆಸೀಯಾ ಶಾಜು, ನಟರಾಜು, ಪಾರ್ವತಮ್ಮ, ಪುಟ್ಟಮ್ಮ, ಶ್ರೀಧರ್, ಸುರೇಶ್, ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.