ಶಿರಾ (ತುಮಕೂರು ಜಿಲ್ಲೆ): ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಕರೆತರಲಾಗಿದ್ದ ಯುವಕ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಆ ಸಮಯದಲ್ಲಿ ವೈದ್ಯರು ಇರಲಿಲ್ಲ. ನರ್ಸ್ ಚಿಕಿತ್ಸೆ ನೀಡುವ ವೇಳೆಗೆ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಕಳ್ಳಿಪಾಳ್ಯ ಗ್ರಾಮದ ಶಾಂತರಾಜು (23) ಅವರನ್ನು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಇರಲಿಲ್ಲ. ತಪಾಸಣೆ ಮಾಡಿದ ನರ್ಸ್ ಯುವಕ ಮೃತಪಟ್ಟಿರುವುದಾಗಿ ಹೇಳಿದರು ಎಂದು ಮೃತನ ಕುಟುಂಬದವರು ತಿಳಿಸಿದ್ದಾರೆ. ಕರ್ತವ್ಯ ನಿರ್ವಹಿಸಬೇಕಿದ್ದ ಡಾ.ರಾಮೇಗೌಡ ಗೈರುಹಾಜರಾಗಿದ್ದರು.
ಆಸ್ಪತ್ರೆಗೆ ಬರುವ ವೇಳೆಗೆ ರೋಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳುತ್ತಿದ್ದರೂ ಮರಣ ಹೊಂದಿರುವ ಬಗ್ಗೆ ದೃಢೀಕರಣ ಪತ್ರ ನೀಡಲು ನಿರಾಕರಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಶಾಂತರಾಜು ಅವರಿಗೆ ಹೊಟ್ಟೆ ಉರಿ ಕಾಣಿಸಿಕೊಂಡಿದ್ದು, ಮಜ್ಜಿಗೆ ಕುಡಿದು ಮಲಗಿದ್ದಾರೆ. ಎಷ್ಟು ಹೊತ್ತಾದರೂ ಎದ್ದಿಲ್ಲ. ಮನೆಯವರು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಏಳದ ಕಾರಣ ಆಸ್ಪತ್ರೆಗೆ ಕರೆತಂದಿದ್ದಾರೆ. ರೋಗಿ ಆಸ್ಪತ್ರೆಗೆ ಬಂದ ನಂತರ ಅಥವಾ ಬರುವಾಗ ಮೃತಪಟ್ಟಿದ್ದಾರೆಯೇ ಎಂಬ ಗೊಂದಲ ಮುಂದುವರಿದಿದೆ.
ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಂತೆ ಇರುವ ಈ ಆರೋಗ್ಯ ಕೇಂದ್ರ 24X7 ಕಾರ್ಯ ನಿರ್ವಹಿಸುತ್ತಿದೆ. ಈಗ ಒಬ್ಬರೇ ವೈದ್ಯರಿದ್ದಾರೆ. ಗ್ರಾಮೀಣ ಸೇವೆಗಾಗಿ ನಿಯೋಜನೆಗೊಂಡಿದ್ದ ವೈದ್ಯ ಸ್ವಲ್ಪ ದಿನ ಕೆಲಸ ಮಾಡಿದ್ದು, ಮತ್ತೆ ಬಂದಿಲ್ಲ. ಇರುವ ಒಬ್ಬರೇ ವೈದ್ಯರು 24 ಗಂಟೆ ಕೆಲಸ ನಿರ್ವಹಿಸಬೇಕಾಗಿದೆ.
ತನಿಖೆಗೆ ಆದೇಶ: ಡಿಎಚ್‌ಒ
ರೋಗಿ ಸಾವಿನ ಬಗ್ಗೆ ತನಿಖೆಗೆ ಶಿರಾ ತಾಲ್ಲೂಕು ವೈದ್ಯಾಧಿಕಾರಿಗೆ ಆದೇಶಿಸಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು. ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.