ಪಟ್ಟನಾಯಕನಹಳ್ಳಿ: 2040ರಲ್ಲಿ ಚಂದ್ರನಲ್ಲಿಗೆ ಮಾನವನನ್ನು ಕಳುಹಿಸಲು ಇಸ್ರೊ ತಯಾರಿ ನಡೆಸಿದೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದರು.
ಇಲ್ಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಜ್ಞಾನ ಮೇಳ ಹಾಗೂ ಸಂವಾದ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಪ್ರಶ್ನಿಸುವ ಮನೋಭಾವ, ಎಲ್ಲ ವಿಚಾರದಲ್ಲಿ ಕುತೂಹಲ ಮೂಡುವ ಭಾವನೆ ಮೂಡುತ್ತದೆ. ಇದಕ್ಕೆ ಪೋಷಕರು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ. ಈ ಮೂಲಕ ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ತಂದೆ–ತಾಯಂದಿರು ಒತ್ತಡದ ಬದುಕಿನ ಆವಸರದಲ್ಲಿ ಮಕ್ಕಳ ಬಾಲ್ಯವನ್ನು ಚಿವುಟಬಾರದು ಎಂದು ಕಿವಿಮಾತು ಹೇಳಿದರು.
ಹಲವು ಸಂಶೋಧನೆಗಳ ಹುಟ್ಟಿಗೆ ಕುತೂಹಲವೇ ಕಾರಣ. ಇದನ್ನು ತಣಿಸುವ ಸಾಹಸವೇ ಪ್ರಯತ್ನವಾಗಿದ್ದು, ಪ್ರತಿಯೊಬ್ಬರೂ ಕೂಡ ಏನಾದರೂ ಹೊಸತನ್ನು ಸಂಶೋಧಿಸುವ ಪ್ರಯತ್ನ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
ಬಳಿಕ ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನೆಡಸಿ, ವಿದ್ಯಾರ್ಥಿಗಳ ಕುತೂಹಲದ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ಮಾಜಿ ಶಾಸಕ ಸಿ.ಎಂ.ರಾಜೇಶ್ ಗೌಡ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ, ಮಧುಗಿರಿ ಡಯಟ್ ಪ್ರಾಂಶುಪಾಲ ಗಂಗಾಧರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರ್, ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಂಶುಪಾಲ ತಿಮ್ಮರಾಜು, ಕ್ಷೇತ್ರ ಸಂಪನ್ಮೂಲ ಸಮನ್ವಯ ವ್ಯಕ್ತಿ ಕುಮಾರ್, ಶ್ರೀನಿವಾಸ್ ಮಂಜುನಾಥ್ ಹನುಮಂತರಾಜು, ವಿಜಯಕುಮಾರ್, ಎ.ಆರ್. ಶ್ರೀನಿವಾಸಯ್ಯ, ಸುಹಾಸಿನಿ ಕಿರಣ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.