ADVERTISEMENT

ಮಂಗಳ- ಮಾರ್ಕೋನಹಳ್ಳಿ ಸಂಪರ್ಕ ಕಾಲುವೆ ಇನ್ನೆರಡು ತಿಂಗಳಲ್ಲಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 14:38 IST
Last Updated 18 ಅಕ್ಟೋಬರ್ 2024, 14:38 IST
ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯ ಕೋಡಿಯಾದ ಕಾರಣ ಶಾಸಕ ಡಾ.ರಂಗನಾಥ್ ಶುಕ್ರವಾರ ಬಾಗಿನ ಅರ್ಪಿಸಿದರು
ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯ ಕೋಡಿಯಾದ ಕಾರಣ ಶಾಸಕ ಡಾ.ರಂಗನಾಥ್ ಶುಕ್ರವಾರ ಬಾಗಿನ ಅರ್ಪಿಸಿದರು   

ಕುಣಿಗಲ್: ‘₹7 ಕೋಟಿ ವೆಚ್ಚದ ಮಂಗಳ- ಮಾರ್ಕೋನಹಳ್ಳಿ ಸಂಪರ್ಕ ಕಾಲುವೆಯ ನಿರ್ಮಾಣಕ್ಕಿದ್ದ ಅಡೆತಡೆಗಳು ನಿವಾರಣೆಯಾಗಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಅಮೃತೂರು ಸಾಲುಕೆರೆಗೆ ನೀರು ಹರಿಸಲಾಗುವುದು’ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.

ಮಾರ್ಕೋನಹಳ್ಳಿ ಜಲಾಶಯ ತುಂಬಿ ಕೋಡಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಬಾಗಿನ ಸಮರ್ಪಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಶಾಸಕರಾಗಿ ಆಯ್ಕೆಯಾಗಿ 6 ವರ್ಷ ಕಳೆದಿವೆ, ಸತತ 5 ವರ್ಷದಿಂದ ಮಾರ್ಕೋನಹಳ್ಳಿ ತುಂಬಿ ಕೋಡಿಯಾಗುತ್ತಿದ್ದು, ಗಂಗಾ ಪೂಜೆ ಜತೆ ಬಾಗಿನ ಸಮರ್ಪಣೆ ದಾಖಲೆಯಾಗಿದೆ. ಹೇಮಾವತಿ ನೀರು ಸಕಾಲದಲ್ಲಿ ಹರಿದು ಬಂದ ಕಾರಣ ತಾಲ್ಲೂಕಿನ ರೈತರಿಗೆ ಕೊರತೆಯಾಗದಂತೆ ನೀರು ನೀಡಬಹುದಾಗಿದೆ’ ಎಂದರು.

ADVERTISEMENT

‘ಮಾರ್ಕೋನಹಳ್ಳಿ ಜಲಾಶಯ ವ್ಯಾಪ್ತಿಯ ಸಾಲುಕೆರೆಗಳ ಸಂಪರ್ಕ ಕಾಲುವೆಗಳ ದುರಸ್ತಿ ಮತ್ತು ಹೂಳು ಎತ್ತುವ ಕಾರ್ಯ ಮುಗಿದಿದ್ದು, ಸರಾಗವಾಗಿ ನೀರು ಹರಿಸಲು ಕ್ರಮತೆಗೆದುಕೊಂಡ ಪರಿಣಾಮ 18 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶದ ರಾಗಿ ಬೆಳೆಗೆ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ತಾಲ್ಲೂಕಿಗೆ ಹೇಮಾವತಿ ನೀರು ಹರಿದು ಬಂದಿದ್ದರೂ, ಮುಂದಿನ ದಿನಗಳಲ್ಲಿ ತಾಲ್ಲೂಕಿನ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿರುವ ಹೇಮಾವತಿ ನೀರು ಪಡೆಯಲು ಲಿಂಕ್ ಕೆನಾಲ್ ಕಾಮಗಾರಿ ಅನುಷ್ಠಾನ ಖಚಿತ. ಜಿಲ್ಲೆಯ ಕೆಲ ರಾಜಕೀಯ ಪ್ರತಿನಿಧಿಗಳು, ಮುಖಂಡರುಗಳು ಲಿಂಕ್ ಕೆನಾಲ್‌ಗೆ ತೀವ್ರ ವಿರೋಧ ಒಂದು ಕಡೆಯಾದರೆ, ಕುಣಿಗಲ್ ತಾಲ್ಲೂಕಿನ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ತಾಲ್ಲೂಕಿನ ಹಿತದೃಷ್ಟಿಯಿಂದ ಸಮ್ಮತಿ ಸೂಚಿಸುವ ಬದಲು ಪಕ್ಕದ ತಾಲ್ಲೂಕಿನ ಲಿಂಕ್ ಕೆನಾಲ್ ವಿರೋಧಿಗಳ ಜತೆ ಕೈ ಜೋಡಿಸಿ ಯೋಜನೆಗೆ ಅಡ್ಡಿಯಾಗುತ್ತಿದ್ದಾರೆ. ವಿರೋಧಗಳನ್ನು ಲೆಕ್ಕಿಸದೆ, ವಿರೋಧಿಗಳ ಮನ ಪರಿವರ್ತನೆ ಮಾಡಿ ಯೋಜನೆ ಅನುಷ್ಠಾನ ಮಾಡಲಾಗುವುದು’ ಎಂದರು.

ಹೇಮಾವತಿ ನಾಲಾ ವಿಭಾಗದ ಇಇ ಶ್ರೀನಿವಾಸ್, ಎಇಇ ರುದ್ರೇಶ್, ಕಾಂಗ್ರೆಸ್ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.