ADVERTISEMENT

ಕೊರಟಗೆರೆ: ಮಲದ ಗುಂಡಿಗೆ ಇಳಿದ ಪರಿಶಿಷ್ಟ ಬಾಲಕ

ಬರಿಗೈಯಲ್ಲಿ ಮಲದ ಗುಂಡಿ ಸ್ವಚ್ಛತೆ | ನಾಲ್ವರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 23:36 IST
Last Updated 11 ನವೆಂಬರ್ 2024, 23:36 IST
   

ಕೊರಟಗೆರೆ (ತುಮಕೂರು): ಗೃಹ ಸಚಿವ ಜಿ. ಪರಮೇಶ್ವರ ಪ್ರತಿನಿಧಿಸುವ ಕೊರಟಗೆರೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 14 ವರ್ಷದ ಬಾಲಕನೊಬ್ಬನನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ. 

ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಹಳೆ ಮಲದ ಗುಂಡಿ ತುಂಬಿ ಅದರ ನೀರು ಬಸ್ ನಿಲ್ದಾಣದ ಆವರಣದಲ್ಲಿ ಹರಿಯುತ್ತಿತ್ತು. ಅಧಿಕಾರಿಗಳು ಮತ್ತು ಸ್ವಚ್ಛತಾ ಸಂಸ್ಥೆಯ ಪ್ರತಿನಿಧಿಗಳು ಬುಧವಾರ ಬಾಲಕ ಮತ್ತು ವ್ಯಕ್ತಿಯೊಬ್ಬರನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ಗುತ್ತಿಗೆ ಪಡೆದ ಏಜೆನ್ಸಿ ಮತ್ತು ಸಂಚಾರ ನಿಯಂತ್ರಕ ಸೇರಿ ನಾಲ್ವರ ವಿರುದ್ಧ ತಹಶೀಲ್ದಾರ್ ದೂರಿನ ಅನ್ವಯ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಬಾಲಕ ಮತ್ತು ವ್ಯಕ್ತಿ ಬರಿಗೈಯಲ್ಲಿ ಮಲದ ಗುಂಡಿ ಸ್ವಚ್ಛಗೊಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಶನಿವಾರ ರಾತ್ರಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಮಾಜ ಕಲ್ಯಾಣ
ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. 

ಘಟನೆಯ ಸತ್ಯಾಸತ್ಯತೆ ಪರಿಶೀಲನೆಗೆ ಮಧುಗಿರಿ ಉಪವಿಭಾಗಾಧಿಕಾರಿ ಹಾಗೂ ಕೊರಟಗೆರೆ ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

ಈ ಪ್ರಕರಣದ ನಡೆದಿರುವುದು ದೃಢಪಟ್ಟ ನಂತರ ಕೊರಟಗೆರೆ ಸಾರಿಗೆ ಸಂಚಾರ ನಿಯಂತ್ರಕ ಸತ್ಯನಾರಾಯಣ ರೆಡ್ಡಿ, ಮಂಡ್ಯದ ಗುತ್ತಿಗೆದಾರ ಕಂಪನಿ ಶ್ರೀನಿಮಿಷಾಂಬಾ ಎಂಟರ್‌ಪ್ರೈಸಸ್‌ನ ಮಾಲೀಕರಾದ ಶ್ವೇತಾ ಎಂ.ಸಿ., ಸಂಸ್ಥೆಯ ಸೂಪರವೈಸರ್‌ ರಿತೇಶ್‌ ಮತ್ತು ತುಮಕೂರಿನ ಕೋತಿತೋಪು ನಿವಾಸಿ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.