ADVERTISEMENT

ತುಮಕೂರು | ಮಾರುಕಟ್ಟೆ ವಿಶ್ಲೇಷಣೆ: ಕ್ಯಾರೇಟ್ ದುಬಾರಿ, ಬೇಳೆ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 4:46 IST
Last Updated 14 ಜುಲೈ 2024, 4:46 IST
ತರಕಾರಿ
ತರಕಾರಿ   

ತುಮಕೂರು: ತರಕಾರಿ ಬೆಲೆ ಇಳಿಕೆಯತ್ತ ಸಾಗಿದ್ದರೆ, ಕ್ಯಾರೇಟ್ ಮತ್ತಷ್ಟು ದುಬಾರಿಯಾಗಿದೆ. ಸೊಪ್ಪು ದರ ಪಾತಾಳ ಮುಟ್ಟಿದೆ. ಬೇಳೆ, ಧಾನ್ಯ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದು, ಮೀನು ಧಾರಣೆ ಇಳಿದಿದ್ದು, ಕೋಳಿ ಮಾಂಸ ಯಥಾಸ್ಥಿತಿ ಕಾಯ್ದುಕೊಂಡಿದೆ.

ಕ್ಯಾರೇಟ್ ಗಗನಮುಖಿ: ದುಬಾರಿಯಾಗಿದ್ದ ಬೀನ್ಸ್ ದರ ಇಳಿದಿದ್ದರೆ, ಕ್ಯಾರೇಟ್ ಗಗನಮುಖಿಯಾಗಿದೆ. ಕೆ.ಜಿ ₹60–70ಕ್ಕೆ ತಲುಪಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹100ರ ವರೆಗೂ ಮಾರಾಟವಾಗುತ್ತಿದೆ. ಇತರೆ ತರಕಾರಿಗಳಿಗಿಂತ ಬೀನ್ಸ್ ದರ ಕಡಿಮೆಯಾಗಿದೆ. ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ ಕೊಂಚ ಇಳಿಕೆಯಾಗಿದೆ. ಬೆಳ್ಳುಳ್ಳಿ ಮತ್ತೆ ಕೆ.ಜಿಗೆ ₹20 ಏರಿಕೆಯಾಗಿದೆ. ದುಬಾರಿಯಾಗಿದ್ದ ಟೊಮೆಟೊ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದಿದೆ. ಆಷಾಢ ಮಾಸ ಆರಂಭವಾದ ನಂತರ ತರಕಾರಿ ಧಾರಣೆ ಇಳಿಕೆಯತ್ತ ಸಾಗಿದೆ.

ಪಾತಾಳದತ್ತ ಸೊಪ್ಪು: ತೀವ್ರ ಕುಸಿತ ಕಂಡಿರುವ ಸೊಪ್ಪು, ಈಗ ಪಾತಾಳದತ್ತ ಸಾಗಿದೆ. ಆವಕದಲ್ಲಿ ಹೆಚ್ಚವಾಗಿದ್ದು, ಬೇಡಿಕೆ ಇಲ್ಲವಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20–25, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹30–40, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ADVERTISEMENT

ಸೇಬು ಏರಿಕೆ: ಸೇಬು ಏರಿಕೆಯತ್ತ ಮುಖ ಮಾಡಿದ್ದು, ದ್ರಾಕ್ಷಿ ಧಾರಣೆ ದುಪ್ಪಟ್ಟಾಗಿದೆ. ಪೈನಾಪಲ್ ಕೊಂಚ ಕಡಿಮೆಯಾಗಿದೆ. ಏಲಕ್ಕಿ ಬಾಳೆಹಣ್ಣು ಸದ್ಯಕ್ಕೆ ಇಳಿಯುವಂತೆ ಕಾಣುತ್ತಿಲ್ಲ. ತೋತಾಪುರಿ ಮಾವು ಕೆ.ಜಿ ₹100, ಬೇನಿಷಾ ಕೆ.ಜಿ ₹100ಕ್ಕೆ ಸಿಗುತ್ತಿದೆ.

ಅಡುಗೆ ಎಣ್ಣೆ ಹೆಚ್ಚಳ: ಕಳೆದ ಕೆಲ ವಾರಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದ್ದ ಅಡುಗೆ ಎಣ್ಣೆ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ದಾಖಲಿಸಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹112, ಪಾಮಾಯಿಲ್ ಕೆ.ಜಿ ₹89, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ ದುಬಾರಿ: ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಕಡಿಮೆಯಾಗಬೇಕಿದ್ದ ಬೇಳೆ ಧಾರಣೆ ಏರಿಕೆಯತ್ತ ಸಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಹಾಗೂ ಹೆಸರು ಕಾಳು, ಬಟಾಣಿ, ಶೇಂಗಾ ದುಬಾರಿಯಾಗಿದೆ. ಸಕ್ಕರೆ ಸಹ ಹೆಚ್ಚಳವಾಗಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳಲ್ಲಿ ಮೆಣಸು, ಜೀರಿಗೆ, ಮೆಂತ್ಯ ಮತ್ತಷ್ಟು ಏರಿಕೆಯಾಗಿದೆ. ಗೋಡಂಬಿ, ಬಾದಾಮಿ ಗಗನಮುಖಿಯಾಗಿದೆ. ಏಲಕ್ಕಿ, ಲವಂಗ ಯಥಾಸ್ಥಿತಿ ಕಾಯ್ದುಕೊಂಡಿದೆ.

ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹250–280, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹210–220, ಹುಣಸೆಹಣ್ಣು ₹110–150, ಕಾಳುಮೆಣಸು ಕೆ.ಜಿ ₹750–800, ಜೀರಿಗೆ ಕೆ.ಜಿ ₹350–360, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹90, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹880–950, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,300, ಏಲಕ್ಕಿ ಕೆ.ಜಿ ₹2,900–3,200, ಬಾದಾಮಿ ಕೆ.ಜಿ ₹620–680, ಗೋಡಂಬಿ ಕೆ.ಜಿ ₹800–900, ಒಣದ್ರಾಕ್ಷಿ ಕೆ.ಜಿ ₹200–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಮಾಂಸ: ಕೋಳಿ ಮಾಂಸದ ಬೆಲೆ ಕೊಂಚ ಕಡಿಮೆಯಾಗಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹220, ಸ್ಕಿನ್‌ಲೆಸ್ ಕೆ.ಜಿ ₹240, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಸಿಗುತ್ತಿದೆ.

ಮೀನು: ಕಳೆದ ಕೆಲವು ವಾರಗಳಿಂದ ದುಬಾರಿಯಾಗಿದ್ದ ಮೀನು ಈಗ ಇಳಿಕೆಯಾಗಿದೆ. ಬಂಗುಡೆ ಕೆ.ಜಿ ₹340, ಬೂತಾಯಿ ಕೆ.ಜಿ ₹350, ಬೊಳಿಂಜರ್ ಕೆ.ಜಿ ₹240, ಅಂಜಲ್ ಕೆ.ಜಿ ₹1,260, ಬಿಳಿಮಾಂಜಿ ಕೆ.ಜಿ ₹1,320, ಕಪ್ಪುಮಾಂಜಿ ಕೆ.ಜಿ ₹980, ಇಂಡಿಯನ್ ಸಾಲ್ಮನ್ ಕೆ.ಜಿ ₹950, ಸೀಗಡಿ ಕೆ.ಜಿ ₹430–680, ಏಡಿ ಕೆ.ಜಿ 680ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.