ತುಮಕೂರು: ಈ ವಾರ ಮಾರುಕಟ್ಟೆಯಲ್ಲಿ ಟೊಮೆಟೊ ದುಬಾರಿಯಾಗಿದ್ದು, ಕ್ಯಾರೇಟ್ ಬೆಲೆ ಅಲ್ಪ ಇಳಿಕೆಯಾಗಿದೆ. ಸೊಪ್ಪಿನ ದರ ಮತ್ತಷ್ಟು ಅಗ್ಗವಾಗಿದ್ದು, ಪಪ್ಪಾಯ ಹಣ್ಣಿಗೆ ಬೇಡಿಕೆ ಕಂಡುಬಂದಿದೆ. ಮೀನು ಮತ್ತೆ ಏರಿಕೆಯಾಗಿದ್ದು, ಕೋಳಿ ಮಾಂಸ ತುಸು ಹೆಚ್ಚಳವಾಗಿದೆ.
ಟೊಮೆಟೊ ಗಗಮುಖಿ: ಮಾರುಕಟ್ಟೆಯಲ್ಲಿ ಇದಕ್ಕಿದ್ದಂತೆ ಟೊಮೆಟೊ ಬೆಲೆ ಗಗನಮುಖಿಯಾಗಿದ್ದು, ಕೆ.ಜಿ ₹60–70ಕ್ಕೆ ಜಿಗಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ₹80ರ ವರೆಗೂ ಮಾರಾಟ ಮಾಡಲಾಗುತ್ತಿದ್ದು, ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ. ಕಳೆದ ಒಂದು ವರ್ಷದಿಂದ ಮೇಲೇರದ ಟೊಮೆಟೊ ಧಾರಣೆ ಕಳೆದ ತಿಂಗಳು ಸ್ವಲ್ಪ ಮಟ್ಟಿಗೆ ಹೆಚ್ಚಳ ಕಂಡಿತ್ತು. ನಂತರದ ದಿನಗಳಲ್ಲಿ ಇಳಿಕೆ ಕಂಡಿತ್ತು. ಈಗ ಒಮ್ಮೆಲೆ ಏರಿಕೆಯತ್ತ ಸಾಗಿದೆ. ಬೆಲೆ ಕುಸಿತದಿಂದ ಬೆಳೆಯುವುದು ಕಡಿಮೆಯಾಗಿದ್ದು, ಆವಕ ಸಹ ತಗ್ಗಿದೆ. ಹಾಗಾಗಿ ಬೆಲೆ ಏರಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ದುಬಾರಿಯಾಗಿದ್ದ ಕ್ಯಾರೇಟ್ ಕೆ.ಜಿಗೆ ₹10 ಕಡಿಮೆಯಾಗಿದ್ದು, ಕೆ.ಜಿ 50–60ಕ್ಕೆ ಇಳಿಕೆಯಾಗಿದೆ. ಬೀನ್ಸ್ ದರ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಬೆಂಡೆಕಾಯಿ, ಎಲೆಕೋಸು, ಹಸಿರು ಮೆಣಸಿನಕಾಯಿ, ನುಗ್ಗೆಕಾಯಿ ತುಸು ತಗ್ಗಿದೆ. ಮಳೆಯಿಂದ ಶೀತದ ವಾತಾವರಣ ನಿರ್ಮಾಣವಾಗಿದ್ದು, ಮಾರುಕಟ್ಟೆಯಲ್ಲಿ ಸೌತೆಕಾಯಿ ಕೇಳುವವರೇ ಇಲ್ಲವಾಗಿದ್ದಾರೆ. ಶುಂಠಿ ಸಹ ಕಡಿಮೆಯಾಗಿದೆ. ಉಳಿದ ತರಕಾರಿಗಳ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.
ಸೊಪ್ಪು ಮತ್ತಷ್ಟು ಅಗ್ಗ: ಕಳೆದ ಒಂದು ತಿಂಗಳಿಂದ ಸೊಪ್ಪಿನ ಬೆಲೆ ಇಳಿಕೆಯತ್ತಲೇ ಸಾಗಿದೆ. ಮಾರುಕಟ್ಟೆಯಲ್ಲಿ ಆವಕ ಹೆಚ್ಚಳವಾಗಿದ್ದು, ಬೇಡಿಕೆ ಕಡಿಮೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20–25, ಸಬ್ಬಕ್ಕಿ ಕೆ.ಜಿ ₹30–35, ಮೆಂತ್ಯ ಸೊಪ್ಪು ಕೆ.ಜಿ ₹30–35, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಕುಸಿತ ಕಂಡಿದೆ.
ಪಪ್ಪಾಯ ದುಬಾರಿ: ಕಳೆದ ಕೆಲವು ತಿಂಗಳಿಂದ ಇಳಿಕೆಯಾಗಿದ್ದ ಪಪ್ಪಾಯ ಹಣ್ಣಿನ ಬೆಲೆ ಒಮ್ಮೆಲೆ ದುಪ್ಪಟ್ಟಾಗಿದ್ದು, ಕೆ.ಜಿ ₹40ಕ್ಕೆ ಹೆಚ್ಚಳವಾಗಿದೆ. ಸೇಬು, ದಾಳಿಂಬೆ ತುಸು ಏರಿಕೆಯತ್ತ ಸಾಗಿದ್ದು, ಎಲಕ್ಕಿ ಬಾಳೆಹಣ್ಣು ಯಥಾಸ್ಥಿತಿ ಕಾಯ್ದುಕೊಂಡಿದೆ. ಸೀತಾಫಲ ಕೆ.ಜಿ ₹120ಕ್ಕೆ ಮಾರಾಟವಾಗುತ್ತಿದೆ. ತೋತಾಪುರಿ ಮಾವು ಕೆ.ಜಿ ₹100, ಬೇನಿಷಾ ಕೆ.ಜಿ ₹100ಕ್ಕೆ ಸಿಗುತ್ತಿದೆ.
ಅಡುಗೆ ಎಣ್ಣೆ: ಅಡುಗೆ ಎಣ್ಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹112, ಪಾಮಾಯಿಲ್ ಕೆ.ಜಿ ₹89, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಬೇಳೆ, ಧಾನ್ಯ: ಹಿಂದಿನ ವಾರ ತುಸು ಏರಿಕೆಯಾಗಿದ್ದ ಬೇಳೆ, ಧಾನ್ಯಗಳ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ತೊಗರಿ ಬೇಳೆ, ಉದ್ದಿನ ಬೇಳೆ ತುಸು ತಗ್ಗಿದೆ.
ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ಧಾರಣೆಯೂ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಕಾಳು ಮೆಣಸು, ಜೀರಿಗೆ ಅಲ್ಪ ಏರಿಕೆಯಾಗಿದೆ. ದುಬಾರಿಯಾಗಿರುವ ಗೋಡಂಬಿ, ಬಾದಾಮಿ ದರ ಇಳಿಯುವಂತೆ ಕಾಣುತ್ತಿಲ್ಲ.
ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹250–280, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹210–220, ಹುಣಸೆಹಣ್ಣು ₹110–150, ಕಾಳುಮೆಣಸು ಕೆ.ಜಿ ₹750–800, ಜೀರಿಗೆ ಕೆ.ಜಿ ₹350–360, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹90, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹880–950, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,300, ಏಲಕ್ಕಿ ಕೆ.ಜಿ ₹2,900–3,200, ಬಾದಾಮಿ ಕೆ.ಜಿ ₹620–680, ಗೋಡಂಬಿ ಕೆ.ಜಿ ₹800–900, ಒಣದ್ರಾಕ್ಷಿ ಕೆ.ಜಿ ₹200–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಮಾಂಸ: ಕೋಳಿ ಮಾಂಸದ ಬೆಲೆ ಕೊಂಚ ಹೆಚ್ಚಳವಾಗಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹140, ರೆಡಿ ಚಿಕನ್ ಕೆ.ಜಿ ₹220, ಸ್ಕಿನ್‌ಲೆಸ್ ಕೆ.ಜಿ ₹240, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಸಿಗುತ್ತಿದೆ.
ಮೀನು ಇಳಿಕೆ: ಮೀನಿನ ಧಾರಣೆ ಮತ್ತೆ ಇಳಿಕೆಯತ್ತ ಮುಖ ಮಾಡಿದೆ. ಬಂಗುಡೆ ಕೆ.ಜಿ ₹390, ಅಂಜಲ್ ಕೆ.ಜಿ ₹1,230, ಬಿಳಿಮಾಂಜಿ ಕೆ.ಜಿ ₹1,130, ಕಪ್ಪುಮಾಂಜಿ ಕೆ.ಜಿ ₹1,000, ಇಂಡಿಯನ್ ಸಾಲ್ಮನ್ ಕೆ.ಜಿ ₹1,010, ಸೀಗಡಿ ಕೆ.ಜಿ ₹430–680, ಏಡಿ ಕೆ.ಜಿ 450ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.
ಹಣ್ಣು (ಬೆಲೆ ಕೆ.ಜಿ ₹)
ಸೇಬು;220
ದಾಳಿಂಬೆ;200
ಮೂಸಂಬಿ;100
ಕಿತ್ತಳೆ;150
ಸಪೋಟ;100
ಏಲಕ್ಕಿ ಬಾಳೆ;85
ಪಚ್ಚಬಾಳೆ;40
ಸೀಬೆ;140
ಪೈನಾಪಲ್;80
ಪಪ್ಪಾಯ;40
ಕರಬೂಜ;50
ಕಲ್ಲಂಗಡಿ;30
ದ್ರಾಕ್ಷಿ;100
ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)
ತೊಗರಿ ಬೇಳೆ;170–180
ಕಡಲೆ ಬೇಳೆ;80–85
ಉದ್ದಿನ ಬೇಳೆ;145–160
ಹೆಸರು ಬೇಳೆ;115–120
ಕಡಲೆಕಾಳು;80–85
ಹೆಸರು ಕಾಳು;125–130
ಅಲಸಂದೆ;105–110
ಅವರೆಕಾಳು;150–160
ಹುರುಳಿಕಾಳು;80–85
ಹುರಿಗಡಲೆ;100–105
ಬಟಾಣಿ;125–130
ಕಡಲೆ ಬೀಜ;125–130
ಗೋಧಿ;43–45
ಸಕ್ಕರೆ;40–42
ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)
ಬೀನ್ಸ್;30–40
ಕ್ಯಾರೇಟ್;50–60
ಬೀಟ್ರೂಟ್;30–40
ಈರುಳ್ಳಿ;30–35
ಬೆಳ್ಳುಳ್ಳಿ;200–220
ಟೊಮೆಟೊ;50–60
ಆಲೂಗಡ್ಡೆ;30–35
ಗೆಡ್ಡೆಕೋಸು;50–60
ಮೂಲಂಗಿ;30–35
ಬೆಂಡೆಕಾಯಿ;20–25
ಬದನೆಕಾಯಿ;30–40
ಎಲೆಕೋಸು;25–30
ಹೂಕೋಸು(1ಕ್ಕೆ);30–35
ತೊಂಡೆಕಾಯಿ;30–40
ಹಾಗಲಕಾಯಿ;50–60
ನುಗ್ಗೆಕಾಯಿ;80–100
ಮೆಣಸಿನಕಾಯಿ;50–60
ಕ್ಯಾಪ್ಸಿಕಂ;40–50
ಶುಂಠಿ;80–100
ಸೌತೆಕಾಯಿ 1ಕ್ಕೆ;3–4
ನಿಂಬೆಹಣ್ಣು 1ಕ್ಕೆ;3–4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.