ADVERTISEMENT

ತುಮಕೂರು | ಅಂಗವಿಕಲರ ವಿವಾಹ ಪ್ರೋತ್ಸಾಹಧನ ಬಾಕಿ: ತಪ್ಪದ ಅಲೆದಾಟ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 7:07 IST
Last Updated 1 ಜುಲೈ 2024, 7:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ತುಮಕೂರು: ಅಂಗವಿಕಲರಿಗೆ ವಿವಾಹ ಪ್ರೋತ್ಸಾಹ ಧನ ನೀಡಲು ಅನುದಾನದ ಕೊರತೆ ಎದುರಾಗಿದ್ದು, ಅರ್ಜಿ ಸಲ್ಲಿಸಿದ ಫಲಾನುಭವಿಗಳು ಸೌಲಭ್ಯಕ್ಕಾಗಿ ದಿನನಿತ್ಯ ಕಚೇರಿಗೆ ಅಲೆಯುತ್ತಿದ್ದಾರೆ.

ಅಂಗವಿಕಲರು ಸಾಮಾನ್ಯ ವ್ಯಕ್ತಿಯನ್ನು ಮದುವೆಯಾದರೆ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ₹50 ಸಾವಿರ ಪ್ರೋತ್ಸಾಹ ಧನ ಸಿಗುತ್ತದೆ. ಅಂಗವಿಕಲರ ಬದುಕಿಗೆ ನೆರವಿನ ಹಸ್ತ ಚಾಚುವ ಉದ್ದೇಶದಿಂದ 2015ರಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಅಲ್ಲಿಂದ ಇದುವರೆಗೆ ನೂರಾರು ಜನ ಇದರ ಪ್ರಯೋಜನ ಪಡೆದಿದ್ದಾರೆ. ಆದರೆ ಕಳೆದ ವರ್ಷ ಅರ್ಜಿ ಸಲ್ಲಿಸಿದ 21 ಜೋಡಿಗೆ ಇದುವರೆಗೆ ಹಣ ಪಾವತಿಯಾಗಿಲ್ಲ.

2023–24ನೇ ಸಾಲಿನಲ್ಲಿ ಒಟ್ಟು 25 ಜೋಡಿಗೆ ಪ್ರೋತ್ಸಾಹ ಧನ ಪಾವತಿಸಿದ್ದು, ಇನ್ನೂ 21 ಜೋಡಿಗೆ ಹಣ ಬರಬೇಕಿದೆ. 2019–20ರಲ್ಲಿ 33 ಜೋಡಿ, 2020–21ರಲ್ಲಿ 21, 2021–22ರಲ್ಲಿ 32, 2022–23ನೇ ಸಾಲಿನಲ್ಲಿ 14 ಜೋಡಿಗೆ ಪ್ರೋತ್ಸಾಹಧನ ಪಾವತಿಯಾಗಿದೆ. ಮೊದಲನೇ ಮದುವೆಯಾದ ಅಂಗವಿಕಲರು ಈ ಸೌಲಭ್ಯ ಪಡೆಯಬಹುದು. ವಿವಾಹ ನೋಂದಣಿ ಪತ್ರ, ಎನ್‌ಒಸಿ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಸಿದವರಿಗೆ ಪ್ರೋತ್ಸಾಹ ಧನ ಪಾವತಿಸಲಾಗುತ್ತದೆ. ವಿವಾಹವಾದವರ ಹೆಸರಿನ ಜಂಟಿ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಅಗತ್ಯ ದಾಖಲೆ ಸಲ್ಲಿಸದ ಕಾರಣಕ್ಕೆ ಅರ್ಜಿ ತಿರಸ್ಕೃತಗೊಂಡ ಉದಾಹರಣೆಗಳೂ ಇವೆ.

ADVERTISEMENT

ಈ ಯೋಜನೆಯ ಕುರಿತು ಹಲವರಿಗೆ ಮಾಹಿತಿ ಕೊರತೆಯಿದ್ದು, ಇದರ ಪ್ರಯೋಜನ ಪಡೆಯುವವರ ಸಂಖ್ಯೆ ಏರಿಳಿಕೆಯಾಗುತ್ತಿದೆ. ವಿವಾಹವಾಗುವ ಅಂಗವಿಕಲರ ಸಂಖ್ಯೆ ಹೆಚ್ಚಿದ್ದು, ಸರ್ಕಾರದ ಸೌಲಭ್ಯ ಪಡೆಯುವವರು ಬೆರಳೆಣಿಕೆಯಷ್ಟಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಇದರ ಬಗ್ಗೆ ಅರಿವಿಲ್ಲ. ಎಲ್ಲಿ ಅರ್ಜಿ ಸಲ್ಲಿಸಬೇಕು, ಯಾವೆಲ್ಲ ದಾಖಲೆ ನೀಡಬೇಕು ಎಂಬ ಮಾಹಿತಿ ಇಲ್ಲದೆ ತುಂಬಾ ಜನ ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಕೆಲವು ಜನರಿಗಾದರೂ ಸೌಲಭ್ಯ ಸಿಗದಂತಾಗಿದೆ.

‘ಇಲಾಖೆಯ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳ ಕುರಿತು ಅಂಗವಿಕಲರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ಅರಿವು, ಜಾಗೃತಿ ಕಾರ್ಯಕ್ರಮ ಏರ್ಪಡಿಸಿದರೆ ಸ್ವಲ್ಪ ಜನರಿಗಾದರೂ ಇದರ ಮಾಹಿತಿ ತಿಳಿಯುತ್ತದೆ. ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗಿದ್ದಾರೆ. ಪ್ರೋತ್ಸಾಹ ಧನ ಪಾವತಿ ಸಂಬಂಧ ಕಚೇರಿಗೆ ಬಂದ ಜನರನ್ನು ‘ಇಂದು–ನಾಳೆ’ ಎಂದು ಸಬೂಬು ಹೇಳಿ ವಾಪಸ್‌ ಕಳುಹಿಸುತ್ತಿದ್ದಾರೆ. ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಚೇರಿ ಬಳಿ ಬಂದಿದ್ದ ಅಂಗವಿಕಲರೊಬ್ಬರು ದೂರಿದರು.

2015ರಲ್ಲಿ ಯೋಜನೆ ಜಾರಿ ₹50 ಸಾವಿರ ಪ್ರೋತ್ಸಾಹ ಧನ ಅಂಗವಿಕಲರಿಗೆ ಸರ್ಕಾರದ ನೆರವಿನ ಹಸ್ತ
ದೂರವಾಣಿ ಸಂಪರ್ಕ ಕಡಿತ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ. ಕಳೆದು ಎರಡು ತಿಂಗಳಿನಿಂದ ಸಂಬಳ ಬಂದಿಲ್ಲ. ವೇತನ ನಂಬಿಕೊಂಡು ಜೀವನ ಸಾಗಿಸುತ್ತಿದ್ದವರು ಕಂಗಾಲಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಮನೆ ಬಾಡಿಗೆ ಜೀವನ ನಿರ್ವಹಣೆಗಾಗಿ ಸಾಲ ಮಾಡಬೇಕಾಗಿದೆ. ಸರ್ಕಾರದಿಂದ ಇಲಾಖೆಗೆ ಅನುದಾನವು ಸಮರ್ಪಕವಾಗಿ ಬರುತ್ತಿಲ್ಲ. ಕಚೇರಿಯ ದೂರವಾಣಿ ಬಿಲ್ ಪಾವತಿಯಾಗದೆ ಕೆಲ ದಿನಗಳ ಕಾಲ ದೂರವಾಣಿ ಸಂಪರ್ಕ ಕಡಿತಗೊಳಿಸಲಾಗಿತ್ತು. ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಇಲಾಖೆಯ ಕೆಲಸಗಳು ನಡೆಯುತ್ತಿವೆ. ಇಲಾಖೆಗೆ ಬರುವ ಅನುದಾನವೇ ಕಡಿಮೆ ಅದೂ ಕೂಡ ಸೂಕ್ತ ಸಮಯಕ್ಕೆ ಬಾರದೆ ಸಿಬ್ಬಂದಿ ಅಧಿಕಾರಿಗಳು ಪರದಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.