ADVERTISEMENT

ಕುಣಿಗಲ್: ಮಾನಸಿಕ ಅಸ್ವಸ್ಥ ಗೃಹಬಂಧನ ಮುಕ್ತ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 5:14 IST
Last Updated 5 ಅಕ್ಟೋಬರ್ 2021, 5:14 IST
ಕುಣಿಗಲ್ ತಾಲ್ಲೂಕಿನ ಯಲಗಲವಾಡಿ ಗ್ರಾಮದ ಮಾನಸಿಕ ಅಸ್ವಸ್ಥ ನವೀನ್ ಕುಮಾರ್ ಅವರನ್ನು ಗೃಹ ಬಂಧನದಿಂದ ಮುಕ್ತಗೊಳಿಸಲಾಯಿತು. ತಹಶೀಲ್ದಾರ್ ಮಹಬಲೇಶ್ವರ್, ಡಾ.ಜಗದೀಶ್ ಮತ್ತು ಡಾ.ಇಂದುಕುಮಾರ್ ಹಾಜರಿದ್ದರು
ಕುಣಿಗಲ್ ತಾಲ್ಲೂಕಿನ ಯಲಗಲವಾಡಿ ಗ್ರಾಮದ ಮಾನಸಿಕ ಅಸ್ವಸ್ಥ ನವೀನ್ ಕುಮಾರ್ ಅವರನ್ನು ಗೃಹ ಬಂಧನದಿಂದ ಮುಕ್ತಗೊಳಿಸಲಾಯಿತು. ತಹಶೀಲ್ದಾರ್ ಮಹಬಲೇಶ್ವರ್, ಡಾ.ಜಗದೀಶ್ ಮತ್ತು ಡಾ.ಇಂದುಕುಮಾರ್ ಹಾಜರಿದ್ದರು   

ಕುಣಿಗಲ್: ತಾಲ್ಲೂಕಿನ ಯಲಗಲವಾಡಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಸಂಘರ್ಷದಿಂದ ಮಾನಸಿಕ ಅಸ್ವಸ್ಥನಾಗಿ ಸಂಬಂಧಿಗಳಿಂದಲೇ ಎರಡು ವರ್ಷಗಳಿಂದ ಗೃಹ ಬಂಧನಕ್ಕೆ ಒಳಗಾಗಿದ್ದ ಯುವಕನನ್ನು ರಕ್ಷಿಸಿದ ಅಧಿಕಾರಿಗಳ ತಂಡ, ಆತನನ್ನು ನಿಮ್ಹಾನ್ಸ್‌ಗೆ ದಾಖಲಿಸಿದೆ.

ಹುತ್ರಿದುರ್ಗ ಹೋಬಳಿಯ ಯಲಗಲವಾಡಿ ಗ್ರಾಮದ ನವೀನ್ ಕುಮಾರ್ (26) ಶಿಥಿಲವಾದ ಕೊಠಡಿಯಲ್ಲಿ ಬಂದಿಯಾಗಿದ್ದರು. ಗಾಳಿ, ಬೆಳಕು ಸಹ ಇಲ್ಲದ ಕೊಠಡಿಯಲ್ಲಿಯೇ ನಿತ್ಯಕರ್ಮ ಮಾಡಿಕೊಳ್ಳುತ್ತಾ ಜೀವನ ಕಳೆಯುತ್ತಿದ್ದರು.

ಅವರ ತಂದೆ ವೇದಮೂರ್ತಿ 15 ವರ್ಷಗಳ ಹಿಂದೆ ಮೃತಪಟ್ಟಿದ್ದರು. ತಾಯಿ ಗೌರಮ್ಮ ಅವರ ಜತೆ ವಾಸವಿದ್ದ ನವೀನ್ ಕುಮಾರ್ ಮತ್ತು ಸಂಬಂಧಿಗಳ ನಡುವೆ ಆಸ್ತಿ ವಿಚಾರವಾಗಿ ನಡೆದ ಸಂಘರ್ಷಯಿಂದ ಅವರು ಮಾನಸಿಕ ಅಸ್ವಸ್ಥರಾಗಿದ್ದರು. ಅವರನ್ನು ಕೊಠಡಿಯಲ್ಲಿ ಬಂಧಿಸಿಇಡಲಾಗಿತ್ತು.

ADVERTISEMENT

ತಾಯಿ ಗೌರಮ್ಮ ಅವರ ತವರುಮನೆಯಾದ ಮಾವಿನಕೆರೆಯ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಸಿದ್ದಲಿಂಗೇಗೌಡ ಅವರ ಗಮನಕ್ಕೆ ಬಂದ ತಕ್ಷಣ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಯುವಕನನ್ನು ಬಂಧಮುಕ್ತಗೊಳಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಹಬಲೇಶ್ವರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ್, ಮನೋವೈದ್ಯ ಡಾ.ಇಂದುಕುಮಾರ್ ತಂಡ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ನವೀನ್ ಕುಮಾರ್ ಅವರ ಆರೋಗ್ಯದ ಸ್ಥಿತಿಗತಿಯನ್ನು ಪರಿಶೀಲಿಸಿತು.

ಗ್ರಾಮಸ್ಥರ ನೆರವಿನಿಂದ ಶಿಥಿಲವಾದ ಕೊಠಡಿಯಲ್ಲಿದ್ದ ಆತನನ್ನು ಹೊರತಂದು ತಾತ್ಕಾಲಿಕ ಚಿಕಿತ್ಸೆ ನೀಡಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಮನೋವೈದ್ಯ ಡಾ.ಇಂದುಕುಮಾರ್ ಮಾತನಾಡಿ, ‘ನವೀನ್ ಕುಮಾರ್ ಕಳೆದ ಹತ್ತು ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದಾನೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಕಿಲ್ಲ. ಅವರು ನಿರಂತರವಾಗಿ ಔಷಧಿ ಸೇವಿಸಿಲ್ಲ’ ಎಂದು ತಿಳಿಸಿದರು.

‘ಕಳೆದ ಎರಡು ವರ್ಷಗಳ ಹಿಂದೆ ನಿಮ್ಹಾನ್ಸ್‌ನಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಗ್ರಾಮಕ್ಕೆ ಬಂದು ನಿರಂತರವಾಗಿ ಔಷಧಿಗಳನ್ನು ಸಕಾಲದಲ್ಲಿ ತೆಗೆದುಕೊಳ್ಳದ ಕಾರಣ ತೀವ್ರ ಮಾನಸಿಕ ಅಸ್ವಸ್ಥನಾಗಿದ್ದಾರೆ. ನಿರಂತರ ಚಿಕಿತ್ಸೆ ಮತ್ತು ಔಷಧಿ ಸೇವನೆಯ ನಂತರವೇ ಅವರು ಗುಣಮುಖರಾಗಲು ಸಾಧ್ಯ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.